ADVERTISEMENT

ಗುಜರಾತ್‌ ಚುನಾವಣೆಯತ್ತ ಎಎಪಿ ಚಿತ್ತ; ಸಾಬರಮತಿ ಆಶ್ರಮಕ್ಕೆ ಕೇಜ್ರಿವಾಲ್‌ ಭೇಟಿ

ಪಿಟಿಐ
Published 2 ಏಪ್ರಿಲ್ 2022, 8:21 IST
Last Updated 2 ಏಪ್ರಿಲ್ 2022, 8:21 IST
ಅರವಿಂದ ಕೇಜ್ರಿವಾಲ್ ಹಾಗೂ ಭಗವಂತ್ ಮಾನ್
ಅರವಿಂದ ಕೇಜ್ರಿವಾಲ್ ಹಾಗೂ ಭಗವಂತ್ ಮಾನ್   

ಅಹಮದಾಬಾದ್:‌ ಆಮ್‌ ಆದ್ಮಿ ಪಕ್ಷದ (ಎಎಪಿ) ಮುಖ್ಯಸ್ಥ ಅರವಿಂದ್‌ ಕೇಜ್ರಿವಾಲ್‌ ಹಾಗೂ ಪಂಜಾಬ್‌ ಮುಖ್ಯಮಂತ್ರಿ ಭಗವಂತ್‌ ಮಾನ್‌ ಅವರು ಇಲ್ಲಿನ ಸಾಬರಮತಿ ಆಶ್ರಮಕ್ಕೆ ಶನಿವಾರಭೇಟಿ ನೀಡಿದ್ದಾರೆ.ಈ ಇಬ್ಬರು ನಾಯಕರುಶುಕ್ರವಾರ ರಾತ್ರಿ ನಗರಕ್ಕೆ ಆಗಮಿಸಿದ್ದಾರೆ.

ಬಿಜೆಪಿ ಆಡಳಿತವಿರುವ ಗುಜರಾತ್‌ನಲ್ಲಿ ಈ ವರ್ಷಾಂತ್ಯದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಕೇಜ್ರಿವಾಲ್‌ ಮತ್ತು ಮಾನ್‌ ಭೇಟಿ ಮಹತ್ವ ಪಡೆದುಕೊಂಡಿದೆ. ದೆಹಲಿ ಮುಖ್ಯಮಂತ್ರಿಯೂ ಆಗಿರುವ ಕೇಜ್ರಿವಾಲ್‌ಅವರು ಚುನಾವಣೆ ವೇಳೆಗೆತಳಮಟ್ಟದಿಂದ ಪಕ್ಷ ಸಂಘಟಿಸುವಪ್ರಯತ್ನ ಮಾಡುತ್ತಿದ್ದಾರೆ ಎನ್ನಲಾಗಿದೆ.

ಮಹಾತ್ಮ ಗಾಂಧಿಯವರು ಸಾಬರಮತಿ ಆಶ್ರಮದ ಆವರಣದಲ್ಲಿ ಉಳಿದುಕೊಳ್ಳುತ್ತಿದ್ದ ಸ್ಥಳವಾದ ಹೃದಯ್ ಕುಂಜ್‌ ಮತ್ತು ಅಲ್ಲಿನ ವಸ್ತು ಸಂಗ್ರಹಾಲಯಗಳಿಗೆಕೇಜ್ರಿವಾಲ್‌ ಮತ್ತು ಮಾನ್ ಭೇಟಿ ನೀಡಿದರು.ಹಾಗೆಯೇ,ಗಾಂಧೀಜಿ ಅವರ ಪ್ರತಿಮೆಗೆ ನಮಿಸಿದರು. ಬಳಿಕಆಶ್ರಮದ ಸಂದರ್ಶಕರ ಟಿಪ್ಪಣಿ ಪುಸ್ತಕದಲ್ಲಿ ಅನುಭವ ದಾಖಲಿಸಿದರು.

ADVERTISEMENT

ದೆಹಲಿ ಮತ್ತು ಪಂಜಾಬ್‌ ರಾಜ್ಯಗಳ ಮುಖ್ಯಮಂತ್ರಿಗಳಿಗೆ ಆಶ್ರಮದಅಧಿಕಾರಿಗಳು ಮಹಾತ್ಮ ಗಾಂಧೀಜಿ ಅವರ ಜೀವನ ಕುರಿತ ಪುಸ್ತಕಗಳು ಮತ್ತು ಚರಕದ ಪ್ರತಿಕೃತಿಯನ್ನು ನೀಡಿದರು.

ಮಾಧ್ಯಮದವರೊಂದಿಗೆ ಮಾತನಾಡಿದ ಕೇಜ್ರಿವಾಲ್‌, 'ದೆಹಲಿ ಮುಖ್ಯಮಂತ್ರಿಯಾದ ನಂತರ ಇದೇ ಮೊದಲ ಬಾರಿಗೆ ಸಾಬರಮತಿ ಆಶ್ರಮಕ್ಕೆ ಭೇಟಿ ನೀಡಿದ್ದೇನೆ. ಹೋರಾಟಗಳನ್ನು ನಡೆಸುತ್ತಿದ್ದ ಸಂದರ್ಭದಲ್ಲಿ ಸಾಕಷ್ಟುಸಲ ಇಲ್ಲಿಗೆ ಬಂದಿದ್ದೆ. ಇಲ್ಲಿಗೆ ಬಂದಾಗಲೆಲ್ಲಾ ನನಗೆ ಆಂತರಿಕ ಶಾಂತಿ ದೊರಕುತ್ತದೆ' ಎಂದು ಹೇಳಿದ್ದಾರೆ.

ಎರಡು ದಿನಗಳ ಭೇಟಿ ಸಲುವಾಗಿ ಗುಜರಾತ್‌ಗೆ ಆಗಮಿಸಿರುವ ಈ ಇಬ್ಬರು ನಾಯಕರು ನಗರದ ಪೂರ್ವ ಪ್ರದೇಶಗಳಲ್ಲಿ ಇಂದು (ಶನಿವಾರ, ಏಪ್ರಿಲ್‌2) ಸಂಜೆ ಎರಡು ಕಿ.ಮೀ.ವರೆಗೆ ರೋಡ್‌ಶೋ ನಡೆಸಲಿದ್ದಾರೆ ಎಂದು ಎಎಪಿಯ ಸ್ಥಳೀಯ ನಾಯಕರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.