ADVERTISEMENT

Delhi Election Result: ಆಮ್‌ ಆದ್ಮಿ ಪಕ್ಷದ ಮಹಾರಥಿಗಳ ಸೋಲು

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2025, 23:53 IST
Last Updated 8 ಫೆಬ್ರುವರಿ 2025, 23:53 IST
   

ನವದೆಹಲಿ: ಎಎಪಿಯ ಮಹಾರಥಿಗಳ ಪೈಕಿ ಮುಖ್ಯಮಂತ್ರಿ ಆತಿಶಿ, ನಾಯಕ ಗೋಪಾಲ್‌ ರಾಯ್‌ ಮಾತ್ರ ಗೆಲುವಿನ ನಗೆ ಬೀರಿದ್ದಾರೆ. ಉಳಿದವರು ಸೋತು ಮುಖಭಂಗ ಅನುಭವಿಸಿದ್ದಾರೆ. 

ಅರವಿಂದ ಕೇಜ್ರಿವಾಲ್‌, ಮನೀಷ್‌ ಸಿಸೋಡಿಯಾ, ಸೌರಭ್ ಭಾರದ್ವಾಜ್‌, ದುರ್ಗೇಶ್‌ ಪಾಠಕ್‌, ಸೋಮನಾಥ ಬಾರ್ತಿ, ಸತ್ಯೇಂದರ್‌ ಜೈನ್‌, ಅವಧ್‌ ಓಜಾ ಸೋತ ಪ್ರಮುಖ ನಾಯಕರು. ಇವರೆಲ್ಲ ಪಕ್ಷದ ದಿಗ್ಗಜರು. ಶಿಕ್ಷಣ ತಜ್ಞ ಅವಧ್‌ ಓಜಾ ಅವರಿಗೆ ಮನೀಷ್‌ ಸಿಸೋಡಿಯಾ ಕ್ಷೇತ್ರ ಬಿಟ್ಟುಕೊಟ್ಟಿದ್ದರು. ಸಿಸೋಡಿಯಾ ಅವರು ಜಂಗ್‌ಪುರದಲ್ಲಿ ಸ್ಪರ್ಧಿಸಿದ್ದರು. ಎರಡೂ ಕ್ಷೇತ್ರಗಳಲ್ಲಿ ಪಕ್ಷ ಸೋತಿದೆ. ಕೇಜ್ರಿವಾಲ್‌, ಸಿಸೋಡಿಯಾ, ದುರ್ಗೇಶ್‌, ಬಾರ್ತಿ ಅವರ ಕ್ಷೇತ್ರಗಳಲ್ಲಿ ಗೆಲುವಿನ ಅಂತರಕ್ಕಿಂತ ‘ಕೈ’ ಅಭ್ಯರ್ಥಿಗಳು ಅಧಿಕ ಮತಗಳನ್ನು ಪಡೆದಿದ್ದಾರೆ. ಈ ಮೂಲಕ, ಪಂಚ ನಾಯಕರ ಸೋಲಿಗೆ ಕಾಂಗ್ರೆಸ್‌ ಅಭ್ಯರ್ಥಿಗಳು ಪರೋಕ್ಷವಾಗಿ ಕಾರಣರಾಗಿದ್ದಾರೆ. ಎಎಪಿ ದಿಗ್ಗಜರ ಕ್ಷೇತ್ರಗಳಲ್ಲಿ ಪ್ರಭಾವಿ ನಾಯಕರನ್ನೇ ಕಾಂಗ್ರೆಸ್‌ ಪಕ್ಷವು ಕಣಕ್ಕೆ ಇಳಿಸಿತ್ತು. 

2013ರ ಚುನಾವಣೆಯಲ್ಲಿ ನವದೆಹಲಿ ಕ್ಷೇತ್ರದಲ್ಲಿ ಆಗಿನ ಮುಖ್ಯಮಂತ್ರಿ ಶೀಲಾ ದೀಕ್ಷಿತ್‌ ವಿರುದ್ಧ ಅರವಿಂದ ಕೇಜ್ರಿವಾಲ್‌ ಸ್ಪರ್ಧಿಸಿದ್ದರು. ಕೇಜ್ರಿವಾಲ್‌ ಅವರು 25 ಸಾವಿರ ಮತಗಳಿಂದ ಜಯಭೇರಿ ಬಾರಿಸಿದ್ದರು. ಈ ಕ್ಷೇತ್ರದಲ್ಲಿ ಶೀಲಾ ದೀಕ್ಷಿತ್‌ ಪುತ್ರ ಸಂದೀಪ್‌ ದೀಕ್ಷಿತ್‌ ಈ ಸಲ ಕಾಂಗ್ರೆಸ್‌ ಹುರಿಯಾಳುವಾಗಿದ್ದರು. ದೀಕ್ಷಿತ್‌ ಗೆಲ್ಲದೇ ಇದ್ದರೂ ಕೇಜ್ರಿವಾಲ್ ಸೋಲಿಗೆ ಕಾರಣಕರ್ತರಾಗುವ ಮೂಲಕ ‘ಸೇಡು’ ತೀರಿಸಿಕೊಂಡಿದ್ದಾರೆ. 2020ರ ಚುನಾವಣೆಯಲ್ಲಿ ಕೇಜ್ರಿವಾಲ್ ಅವರು ಶೇ 60ರಷ್ಟು ಮತಗಳನ್ನು ಪಡೆದು ದಿಗ್ವಿಜಯ ಸಾಧಿಸಿದ್ದರು. ಈ ಸಲ, ಮಾಜಿ ಮುಖ್ಯಮಂತ್ರಿಗಳ ಪುತ್ರರನ್ನು ಕಾಂಗ್ರೆಸ್‌ ಹಾಗೂ ಬಿಜೆಪಿ ಕಣಕ್ಕೆ ಇಳಿಸಿದ್ದವು. 

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.