ಆತಿಶಿ, ಸ್ವಾತಿ ಮಾಲಿಮಾಲ್
(ಚಿತ್ರ ಕೃಪೆ: ಎಕ್ಸ್ ಸ್ಕ್ರೀನ್‌ಶಾಟ್)
ನವದೆಹಲಿ: ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷವು (ಎಎಪಿ) ನಾಲ್ಕನೇ ಸಲ ಅಧಿಕಾರಕ್ಕೇರುವಲ್ಲಿ ವಿಫಲವಾಗಿದೆ. 70 ಸದಸ್ಯ ಬಲದ ವಿಧಾನಸಭೆಯಲ್ಲಿ ಹೀನಾಯ ಸೋಲು ಕಂಡಿರುವ ಆಡಳಿತಾರೂಢ ಎಎಪಿ, 22 ಸ್ಥಾನಗಳನ್ನಷ್ಟೇ ಗೆದ್ದು ಮುಖಭಂಗಕ್ಕೊಳಗಾಗಿದೆ.
ಈ ನಡುವೆ ಮುಖ್ಯಮಂತ್ರಿ ಆತಿಶಿ ತಾವು ಸ್ಪರ್ಧಿಸಿದ್ದ ಕ್ಷೇತ್ರದಲ್ಲಿ ಸಮಾಧಾನಕರ ಗೆಲುವು ಸಾಧಿಸಿದ್ದಾರೆ. ಅಲ್ಲದೆ ಪಕ್ಷದ ಕಾರ್ಯಕರ್ತರೊಂದಿಗೆ ನೃತ್ಯ ಮಾಡಿ ಸಂಭ್ರಮಿಸುತ್ತಿರುವ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ.
ಈ ವಿಡಿಯೊವನ್ನು ಹಂಚಿಕೊಂಡಿರುವ ರಾಜ್ಯಸಭಾ ಸದಸ್ಯೆ ಸ್ವಾತಿ ಮಾಲಿಮಾಲ್, 'ನಾಚಿಕೆ ಆಗಲ್ವಾ' ಎಂದು ಪ್ರಶ್ನಿಸಿದ್ದಾರೆ.
'ಇಂದು ಎಂತಹ ನಾಚಿಕೆಯಿಲ್ಲದ ಪ್ರದರ್ಶನ? ಇಡೀ ಪಕ್ಷವೇ ಸೋತಿದೆ, ದೊಡ್ಡ ನಾಯಕರೆಲ್ಲ ನೆಲಕಚ್ಚಿ ಹೋಗಿದ್ದಾರೆ. ಆದರೆ ಆತಿಶಿ ಸಂಭ್ರಮಿಸುತ್ತಾರೆ' ಎಂದು ಅವರು ಕುಟುಕಿದ್ದಾರೆ.
ಕಳೆದ ವರ್ಷ ಸ್ವಾತಿ ಮಾಲಿವಾಲ್ ಎಎಪಿಯ ವಿರುದ್ಧ ಬಂಡಾಯ ಎದ್ದಿದ್ದರು. ಮಾಜಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರ ಆಪ್ತ ಬಿಭವ್ ಕುಮಾರ್ ತಮ್ಮ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಅವರು ಆರೋಪ ಮಾಡಿದ್ದರು. ಕೇಜ್ರಿವಾಲ್ ಸಿಎಂ ಆಗಿದ್ದಾಗ ಅವರ ಅಧಿಕೃತ ನಿವಾಸದಲ್ಲೇ ಈ ಘಟನೆ ನಡೆದಿತ್ತು. ಇದು ಭಾರಿ ವಿವಾದಕ್ಕೆ ಕಾರಣವಾಗಿತ್ತು.
ಸತ್ಯಕ್ಕೆ ಸಂದ ಜಯ: ಮಾಲಿವಾಲ್
ಇಂದು (ಭಾನುವಾರ) ಪಿಟಿಐಗೆ ಪ್ರತಿಕ್ರಿಯೆ ನೀಡಿರುವ ಮಾಲಿವಾಲ್, 'ಸತ್ಯಕ್ಕೆ ಜಯವಾಗಿದೆ. ದೇವರ ಆಶೀರ್ವಾದದಿಂದ ಮಾತ್ರ ಹೋರಾಟ ಸಾಧ್ಯವಾಗಿದೆ. ಅನೇಕ ಕಷ್ಟಗಳನ್ನು ಎದುರಿಸಿದ್ದರೂ ದೇವರು ನಮ್ಮ ಬೆಂಬಲಕ್ಕೆ ನಿಂತಿದ್ದಾರೆ' ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.