ADVERTISEMENT

Delhi Polls | ‘ಎಕ್ಸ್‌’ನಲ್ಲಿ #AmitShahKiGoondagardi ಅಭಿಯಾನ ಆರಂಭಿಸಿದ AAP

ಪಿಟಿಐ
Published 2 ಫೆಬ್ರುವರಿ 2025, 9:10 IST
Last Updated 2 ಫೆಬ್ರುವರಿ 2025, 9:10 IST
<div class="paragraphs"><p>ಅರವಿಂದ ಕೇಜ್ರಿವಾಲ್</p></div>

ಅರವಿಂದ ಕೇಜ್ರಿವಾಲ್

   

– ಪಿಟಿಐ ಚಿತ್ರ

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿ ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವಂತೆಯೇ ಬಿಜೆಪಿ ಗೂಂಡಾಗಿರಿ ನಡೆಸುತ್ತಿದೆ ಎಂದು ಆರೋಪಿಸಿರುವ ಆಮ್‌ ಆದ್ಮಿ ಪಕ್ಷದ (ಎಎಪಿ) ರಾಷ್ಟ್ರೀಯ ಸಂಚಾಲಕ ಅರವಿಂದ ಕೇಜ್ರಿವಾಲ್ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ADVERTISEMENT

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಈ ಬಾರಿ ವಿಧಾನಸಭಾ ಚುನಾವಣೆಯಲ್ಲಿ ನಮ್ಮ ಪಕ್ಷ (ಎಎಪಿ) ‘ನಿರ್ಣಾಯಕ ಗೆಲುವು’ ಸಾಧಿಸಲಿದೆ. ಇದು ಬಿಜೆಪಿ ನಾಯಕರನ್ನು, ವಿಶೇಷವಾಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ತಬ್ಬಿಬ್ಬುಗೊಳಿಸಿದೆ ಹಾಗೂ ಹತಾಶರನ್ನಾಗಿ ಮಾಡಿದೆ’ ಎಂದು ಗುಡುಗಿದ್ದಾರೆ.

‘ಎಎಪಿ ಚುನಾವಣೆಯನ್ನು ಸ್ವೀಪ್ ಮಾಡಲಿದೆ ಎಂಬ ಸಂಗತಿ ಎಲ್ಲರಿಗೂ ತಿಳಿದಿದೆ. ಆದರೆ, ಚುನಾವಣಾ ಸೋಲನ್ನು ಮನಗಂಡಿರುವ ಅಮಿತ್ ಶಾ ಮತ್ತು ಬಿಜೆಪಿಗರು ಗೂಂಡಾಗಿರಿಯನ್ನು ಆಶ್ರಯಿಸಿದ್ದಾರೆ’ ಎಂದು ಕೇಜ್ರಿವಾಲ್ ಆರೋಪಿಸಿದ್ದಾರೆ.

‘ಬಿಜೆಪಿಗರು ನಮ್ಮ ನಾಯಕರು ಮತ್ತು ಬೆಂಬಲಿಗರನ್ನು ತಮ್ಮ ಪಕ್ಷಕ್ಕೆ ಸೇರುವಂತೆ ಬೆದರಿಕೆ ಹಾಕುತ್ತಿದ್ದಾರೆ. ಇಲ್ಲವೇ ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ಬಂಧನಕ್ಕೊಳಪಡಿಸುವುದಾಗಿ ಕಿರುಕುಳ ನೀಡುತ್ತಿದ್ದಾರೆ. ಆದರೆ, ಬಿಜೆಪಿಗರ ಬೆದರಿಕೆ ತಂತ್ರಗಳನ್ನು ದೆಹಲಿ ಮತದಾರರು ಸಹಿಸುವುದಿಲ್ಲ’ ಎಂದು ಹೇಳಿದ್ದಾರೆ.

ಅಮಿತ್‌ ಶಾ ಮತ್ತು ಬಿಜೆಪಿಗರ ಬೆದರಿಕೆಗಳಿಗೆ ಪ್ರತಿಕ್ರಿಯೆಯಾಗಿ ‘ಎಕ್ಸ್‌’ನಲ್ಲಿ ‘#AmitShahKiGoondagardi’ ಎಂಬ ಹ್ಯಾಶ್‌ಟ್ಯಾಗ್‌ನಡಿ ಅಭಿಯಾನವನ್ನು ಪ್ರಾರಂಭಿಸುವುದಾಗಿ ಕೇಜ್ರಿವಾಲ್ ಘೋಷಿಸಿದ್ದಾರೆ.

ಈ ಹ್ಯಾಶ್‌ಟ್ಯಾಗ್ ಬಳಸಿ ಬಿಜೆಪಿಗರಿಂದ ದಾಳಿ, ಬೆದರಿಕೆಗಳಿಗೆ ಒಳಗಾದವರು ತಮ್ಮ ಅನುಭವವನ್ನು ಹಂಚಿಕೊಳ್ಳುವಂತೆ ಜನರಲ್ಲಿ ಕೇಜ್ರಿವಾಲ್ ಒತ್ತಾಯಿಸಿದ್ದಾರೆ.

‘ಬಿಜೆಪಿಗರಿಗೆ ದೆಹಲಿಯ ಬಗ್ಗೆ ಯಾವುದೇ ದೂರದೃಷ್ಟಿ ಇಲ್ಲ. ಹಾಗೆಯೇ ಮುಖ್ಯಮಂತ್ರಿ ಅಭ್ಯರ್ಥಿಯೂ ಇಲ್ಲ, ಅಭಿವೃದ್ಧಿ ಅಜೆಂಡಾ ಇಲ್ಲ. ಅವರಲ್ಲಿರುವುದು ಕೇವಲ ಗೂಂಡಾಗಿರಿ ಮಾತ್ರ. ಅವರು (ಬಿಜೆಪಿಗರು) ಜನರನ್ನು ಭಯಪಡಿಸಿ ಗೆಲ್ಲಲು ಬಯಸುತ್ತಾರೆಯೇ ಹೊರತು ಮತಗಳಿಂದ ಅಲ್ಲ. ದೆಹಲಿಯ ಸುರಕ್ಷತೆ ಮತ್ತು ಪ್ರಜಾಪ್ರಭುತ್ವದ ಸಮಗ್ರತೆಗಾಗಿ ಬಿಜೆಪಿ ವಿರುದ್ಧ ಒಂದಾಗುವಂತೆ’ ಕೇಜ್ರಿವಾಲ್ ಮನವಿ ಮಾಡಿದ್ದಾರೆ.

70 ಸದಸ್ಯ ಬಲದ ದೆಹಲಿಯಲ್ಲಿ ಫೆಬ್ರುವರಿ 5ರಂದು ಮತದಾನ ನಡೆಯಲಿದ್ದು, ಫೆ.8ರಂದು ಮತ ಎಣಿಕೆ ನಡೆದು ಫಲಿತಾಂಶ ಹೊರಬೀಳಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.