
ಅರವಿಂದ ಕೇಜ್ರಿವಾಲ್ ಮತ್ತು ಮನೀಶ್ ಸಿಸೋಡಿಯಾ
ನವದೆಹಲಿ: ದೆಹಲಿ ಅಬಕಾರಿ ನೀತಿ ಪ್ರಕರಣದಲ್ಲಿ ಮಾಜಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಮತ್ತು ಮಾಜಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರನ್ನು ರೌಸ್ ಅವೆನ್ಯೂ ನ್ಯಾಯಾಲಯ ಶುಕ್ರವಾರ ಖುಲಾಸೆಗೊಳಿಸಿದೆ.
ಕೇಂದ್ರ ತನಿಖಾ ದಳ (ಸಿಬಿಐ) ತನಿಖೆ ನಡೆಸಿದ ಪ್ರಕರಣ ಕುರಿತು ವಿಶೇಷ ನ್ಯಾಯಾಧೀಶ ಜಿತೇಂದ್ರ ಸಿಂಗ್ ಅವರು ಆದೇಶ ಪ್ರಕಟಿಸಿದ್ದಾರೆ.
ದೆಹಲಿ ಅಬಕಾರಿ ನೀತಿ ಪ್ರಕರಣ ಕುರಿತು ಫೆಬ್ರುವರಿ 12ರಂದು ಸಿಬಿಐ, ಕೇಜ್ರಿವಾಲ್, ಸಿಸೋಡಿಯಾ ಸೇರಿದಂತೆ ಇತರ 21 ಆರೋಪಿಗಳಿಂದ ವಿವರವಾದ ವಾದಗಳನ್ನು ಆಲಿಸಿದ ನಂತರ ನ್ಯಾಯಾಲಯ ತೀರ್ಪನ್ನು ಕಾಯ್ದಿರಿಸಿತ್ತು.
ಪ್ರಕರಣ ದಾಖಲಾಗಿದ್ದ ವೇಳೆ ಕೇಜ್ರಿವಾಲ್ ಅವರು ದೆಹಲಿ ಮುಖ್ಯಮಂತ್ರಿಯಾಗಿ ಮತ್ತು ಸಿಸೋಡಿಯಾ ಅವರು ಉಪ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸುತ್ತಿದ್ದರು.
2022ರಲ್ಲಿ ಸಿಬಿಐ ಮೊದಲ ಚಾರ್ಜ್‌ಶೀಟ್ ಅನ್ನು ಸಲ್ಲಿಸಿತ್ತು. ಪ್ರಕರಣದಲ್ಲಿ ಕೇಜ್ರಿವಾಲ್, ಸಿಸೋಡಿಯಾ, ಕೆ. ಕವಿತಾ, ಕುಲದೀಪ್ ಸಿಂಗ್, ನರೇಂದರ್ ಸಿಂಗ್, ವಿಜಯ್ ನಾಯರ್, ಅಭಿಷೇಕ್ ಬೋಯಿನಪಲ್ಲಿ, ಅರುಣ್ ರಾಮಚಂದ್ರ ಪಿಳ್ಳೈ, ಮೂತ ಗೌತಮ್, ಸಮೀರ್ ಮಹೇಂದ್ರು, ಅಮನದೀಪ್ ಸಿಂಗ್ ಧಲ್, ಅರ್ಜುನ್ ಪಾಂಡೆ, ಬುಚ್ಚಿಬಾಬು ಗೋರ್ನತ್ಲಾ, ರಾಜಮೋದೇಶ್ ಪ್ರಸಾದ್ ಶರ್ಮಾ, ರಾಕೇಶ ಪ್ರಸಾದ್ ಜೊನತ್ಲಾ, ರಾಕೇಶ ಪ್ರಸಾದ್ ಜೊನತ್ಲಾ ಸೇರಿದಂತೆ ಒಟ್ಟು 23 ಆರೋಪಿಗಳನ್ನು ದೋಷಾರೋಪ ಪಟ್ಟಿ ಸಲ್ಲಿಸಲಾಗಿತ್ತು. ರಾಯತ್, ಅರವಿಂದ್ ಕುಮಾರ್ ಸಿಂಗ್, ದುರ್ಗೇಶ್ ಪಾಠಕ್, ಅಮಿತ್ ಅರೋರಾ, ವಿನೋದ್ ಚೌಹಾಣ್, ಆಶಿಶ್ ಮಾಥುರ್, ಮತ್ತು ಪಿ ಶರತ್ ಚಂದ್ರಾ ರೆಡ್ಡಿ ಹೆಸರು ತಳುಕು ಹಾಕಿಕೊಂಡಿತ್ತು.
2024ರ ಮಾರ್ಚ್‌ನಲ್ಲಿ ದೆಹಲಿ ಅಬಕಾರಿ ನೀತಿ ಹಗರಣ ಜೊತೆ ನಂಟಿರುವ ಹಣ ಅಕ್ರಮ ವರ್ಗಾವಣೆ ಆರೋಪದ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯವು (ಇ.ಡಿ) ಅರವಿಂದ ಕೇಜ್ರಿವಾಲ್ ಅವರನ್ನು ಬಂಧಿಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.