ನವದೆಹಲಿ: ದೆಹಲಿ ಅಬಕಾರಿ ನೀತಿ ಪ್ರಕರಣಕ್ಕೆ ಸಂಬಂಧಿಸಿ ಜಾರಿ ನಿರ್ದೇಶನಾಲಯ (ಇ.ಡಿ) ಸಲ್ಲಿಸಿರುವ ಎರಡನೇ ಪೂರಕ ದೋಷಾರೋಪ ಪಟ್ಟಿ ಕುರಿತ ವಿಚಾರಣೆಯನ್ನು ಏ.24ರಂದು ನಡೆಸುವುದಾಗಿ ದೆಹಲಿ ನ್ಯಾಯಾಲಯ ಶನಿವಾರ ಹೇಳಿದೆ.
ಎರಡನೇ ಪೂರಕ ದೋಷಾರೋಪ ಪಟ್ಟಿಗೆ ಸಂಬಂಧಿಸಿ ವಾದ–ಪ್ರತಿವಾದಗಳನ್ನು ಏ. 24ರಂದು ಆಲಿಸುವುದಾಗಿ ವಿಶೇಷ ನ್ಯಾಯಾಧೀಶ ಎಂ.ಕೆ.ನಾಗಪಾಲ್ ಪ್ರಕಟಿಸಿದರು.
ಇದಕ್ಕೂ ಮುನ್ನ ವಾದ ಮಂಡಿಸಿದ ವಿಶೇಷ ಸರ್ಕಾರಿ ವಕೀಲ ನವೀನಕುಮಾರ್ ಮಟ್ಟ, ‘ಆರೋಪಿಗಳಾದ ರಾಘವ್ ಮಾಗುಂಟ, ರಾಜೇಶ್ ಜೋಶಿ ಮತ್ತು ಗೌತಮ್, ಐದು ಕಂಪನಿಗಳ ಹೆಸರುಗಳನ್ನು ಎರಡನೇ ದೋಷಾರೋಪ ಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ’ ಎಂದು ಕೋರ್ಟ್‌ಗೆ ತಿಳಿಸಿದರು.
ಜಾಮೀನು ಅರ್ಜಿ ವಿಚಾರಣೆ: ಈ ಪ್ರಕರಣದಲ್ಲಿ, ನ್ಯಾಯಾಂಗ ಬಂಧನದಲ್ಲಿರುವ ಮಾಜಿ ಉಪಮುಖ್ಯಮಂತ್ರಿ ಮನೀಷ್ ಸಿಸೋಡಿಯಾ ಸಲ್ಲಿಸಿದ್ದ ಜಾಮೀನು ಅರ್ಜಿ ವಿಚಾರಣೆಯೂ ನಡೆಯಿತು.
‘ದೆಹಲಿ ಅಬಕಾರಿ ನೀತಿ ಪ್ರಕರಣ ಕುರಿತ ತನಿಖೆ ನಿರ್ಣಾಯಕ ಘಟ್ಟದಲ್ಲಿದೆ. ಸಿಸೋಡಿಯಾ ವಿರುದ್ಧ ಹೊಸ ಸಾಕ್ಷ್ಯಗಳು ಪತ್ತೆಯಾಗಿರುವ ಕಾರಣ, ಆರೋಪಿಗೆ ಜಾಮೀನು ನೀಡಬಾರದು’ ಎಂದು ಇ.ಡಿ ಪರ ವಕೀಲರು ವಾದಿಸಿದರು.
ನಂತರ, ವಿಚಾರಣೆಯನ್ನು ಏ.18ಕ್ಕೆ ಮುಂದೂಡಿ ನ್ಯಾಯಾಧೀಶರು ಆದೇಶಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.