
ರೇಖಾ ಗುಪ್ತಾ
-ಪಿಟಿಐ ಚಿತ್ರ
ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ಹೆಚ್ಚುತ್ತಿರುವ ಮಾಲಿನ್ಯವನ್ನು ಗಮನದಲ್ಲಿಟ್ಟುಕೊಂಡು ನವೆಂಬರ್ 15ರಿಂದ ಫೆಬ್ರುವರಿ 15ರವರೆಗೆ ಸರ್ಕಾರಿ ಮತ್ತು ದೆಹಲಿ ಮಹಾನಗರ ಪಾಲಿಕೆ (ಎಂಸಿಡಿ) ನೌಕರರ ಕೆಲಸದ ಸಮಯವನ್ನು ಬದಲಾವಣೆ ಮಾಡಿ ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತಾ ಅವರು ಆದೇಶ ಹೊರಡಿಸಿದ್ದಾರೆ.
ಸರ್ಕಾರಿ ಕಚೇರಿಗಳು ಇನ್ನು ಮುಂದೆ ಬೆಳಿಗ್ಗೆ 10ರಿಂದ ಸಂಜೆ 6.30ರವರೆಗೆ ಮತ್ತು ದೆಹಲಿ ಮಹಾನಗರ ಪಾಲಿಕೆಯ (ಎಂಸಿಡಿ) ಕಚೇರಿಗಳು ಬೆಳಿಗ್ಗೆ 8.30ರಿಂದ ಸಂಜೆ 5 ರವರೆಗೆ ಕಾರ್ಯನಿರ್ವಹಿಸಲಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಸ್ತುತ, ದೆಹಲಿ ಸರ್ಕಾರಿ ಕಚೇರಿಗಳು ಬೆಳಿಗ್ಗೆ 9.30ರಿಂದ ಸಂಜೆ 6ರವರೆಗೆ ಮತ್ತು ಎಂಸಿಡಿ ಕಚೇರಿಗಳು ಬೆಳಿಗ್ಗೆ 9 ರಿಂದ ಸಂಜೆ 5.30 ರವರೆಗೆ ಕಾರ್ಯನಿರ್ವಹಿಸುತ್ತಿವೆ.
ಎರಡು ವೇಳಾಪಟ್ಟಿಗಳ ನಡುವೆ ಕೇವಲ 30 ನಿಮಿಷಗಳ ಅಂತರವಿದೆ. ದೆಹಲಿಯಲ್ಲಿ ಬೆಳಿಗ್ಗೆ ಮತ್ತು ಸಂಜೆ ಭಾರಿ ಸಂಚಾರ ದಟ್ಟಣೆ ಉಂಟಾಗುತ್ತಿದೆ. ಇದರಿಂದಾಗಿ ನಗರದಲ್ಲಿ ವಾಯು ಮಾಲಿನ್ಯ ಉಲ್ಬಣಗೊಳ್ಳುತ್ತಿದೆ ಎಂದು ಸರ್ಕಾರ ಪ್ರಕಟಣೆಯಲ್ಲಿ ತಿಳಿಸಿದೆ.
ದೆಹಲಿಯ ಕ್ಷೀಣಿಸುತ್ತಿರುವ ಗಾಳಿಯ ಗುಣಮಟ್ಟ, ವಾಯು ಮಾಲಿನ್ಯ ಮತ್ತು ರಸ್ತೆಗಳಲ್ಲಿ ಏಕಕಾಲಕ್ಕೆ ಉಂಟಾಗುತ್ತಿರುವ ವಾಹನ ದಟ್ಟಣೆಯನ್ನು ತಡೆಗಟ್ಟಲು ಪರಿಸರ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿ ಕಚೇರಿಗಳ ಸಮಯದಲ್ಲಿ ಬದಲಾವಣೆ ಮಾಡಲಾಗಿದೆ ಎಂದು ಸಿಎಂ ರೇಖಾ ಗುಪ್ತಾ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹೊಸ ವೇಳಾಪಟ್ಟಿಯನ್ನು ಕಟ್ಟುನಿಟ್ಟಾಗಿ ಜಾರಿಗೆ ತರಬೇಕು. ಜತೆಗೆ, ಸಂಚಾರ ದಟ್ಟಣೆ ಮತ್ತು ಮಾಲಿನ್ಯ ಮಟ್ಟವನ್ನು ನಿರಂತರವಾಗಿ ಮೇಲ್ವಿಚಾರಣೆ ನಡೆಸುವಂತೆ ಅಧಿಕಾರಿಗಳಿಗೆ ಗುಪ್ತಾ ಸೂಚನೆ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.