ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತಾ
ಪಿಟಿಐ ಚಿತ್ರ
ನವದೆಹಲಿ: ದೇಶದಾದ್ಯಂತ ದೀಪಾವಳಿ ಸಂಭ್ರಮ ಕಳೆಕಟ್ಟಿದೆ. ಹಬ್ಬದ ಸಮಯದಲ್ಲಿ ಕೇವಲ ಹಸಿರು ಪಟಾಕಿಯನ್ನೇ ಬಳಸಿ, ಈ ಮೂಲಕ ದೆಹಲಿಯನ್ನು ಮಾಲಿನ್ಯದಿಂದ ರಕ್ಷಿಸಿ ಎಂದು ಸಿಎಂ ರೇಖಾ ಗುಪ್ತಾ ಜನತೆಗೆ ಮನವಿ ಮಾಡಿದ್ದಾರೆ.
ದೀಪಾವಳಿ ಹಬ್ಬವನ್ನು ಪಟಾಕಿ ಸಿಡಿಸಿ ಆಚರಿಸುವ ಬದಲು ದೀಪ ಬೆಳಗಿಸುವ, ರಂಗೋಲಿ ಹಾಕುವ ಹಾಗೂ ಸಿಹಿತಿಂಡಿಗಳನ್ನು ಹಂಚುವ ಮೂಲಕ ಸಾಂಪ್ರದಾಯಿಕ ರೀತಿಯಲ್ಲಿ ಆಚರಿಸಿ ಎಂದು ಹೇಳಿದ್ದಾರೆ.
ಆದಾಗ್ಯೂ ಪಟಾಕಿ ಹಚ್ಚಿ ಸಂಭ್ರಮಿಸುವುದಾದರೇ ಹಸಿರು ಪಟಾಕಿಗಳನ್ನೇ ಬಳಸಿ, ದೆಹಲಿಯಲ್ಲಿ ಉಂಟಾಗುವ ಮಾಲಿನ್ಯವನ್ನು ಕಡಿಮೆ ಮಾಡುವುದು ಅಗತ್ಯ ಎಂದಿದ್ದಾರೆ.
'ದೆಹಲಿ ನನ್ನ ಕುಟುಂಬವಿದ್ದಂತೆ. ನನ್ನ ಕುಟುಂಬದ ಪ್ರತಿಯೊಬ್ಬ ಸದಸ್ಯರಿಗೂ ಈ ಹಬ್ಬ ಸಂತೋಷ ತರಲಿ' ಎಂದು ಗುಪ್ತಾ ಹೇಳಿದ್ದಾರೆ.
ದೀಪಾವಳಿಯ ಸಮಯದಲ್ಲಿ ದೆಹಲಿ-ಎನ್‌ಸಿಆರ್‌ನಲ್ಲಿ ಹಸಿರು ಪಟಾಕಿಗಳ ಮಾರಾಟ ಮತ್ತು ಬಳಕೆಗೆ ಸುಪ್ರೀಂ ಕೋರ್ಟ್ ಕೆಲವು ಷರತ್ತುಗಳೊಂದಿಗೆ ಅನುಮತಿ ನೀಡಿದೆ. ದೀಪಾವಳಿಯ ಹಿಂದಿನ ದಿನ ಬೆಳಿಗ್ಗೆ 6 ರಿಂದ ಸಂಜೆ 7 ರವರೆಗೆ ಮತ್ತು ಹಬ್ಬದ ದಿನದಂದು ಬೆಳಿಗ್ಗೆ 8 ರಿಂದ ರಾತ್ರಿ 10ರವರೆಗೆ ಮಾತ್ರ ಪಟಾಕಿಗಳನ್ನು ಬಳಸಬೇಕು ಎಂದಿದೆ.
ದೆಹಲಿಯ ಕನಿಷ್ಠ ತಾಪಮಾನವು ಭಾನುವಾರ 20.6 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಇದು ಈ ಋತುವಿನ ಸರಾಸರಿಗಿಂತ 2.2 ಡಿಗ್ರಿಯಷ್ಟು ಹೆಚ್ಚಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.
ದೆಹಲಿಯ ವಾಯು ಗುಣಮಟ್ಟ ಸೂಚ್ಯಂಕವು ಇಂದು (ಎಕ್ಯೂಐ) ಬೆಳಿಗ್ಗೆ 9 ಗಂಟೆಗೆ 339ರಷ್ಟು ದಾಖಲಾಗಿದೆ ಎಂದು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯ ದತ್ತಾಂಶಗಳು ದೃಢಪಡಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.