ದೆಹಲಿ ಹೈಕೋರ್ಟ್
ನವದೆಹಲಿ: ಮಹಿಳೆ ಅಳುತ್ತಿದ್ದಳು ಎಂಬ ಮಾತ್ರಕ್ಕೆ ವರದಕ್ಷಿಣೆ ಕಿರುಕುಳ ಪ್ರಕರಣವೆಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ದೆಹಲಿ ಹೈಕೋರ್ಟ್ ಅಭಿಪ್ರಾಯಪಟ್ಟಿದೆ.
ವರದಕ್ಷಿಣೆ ಕಿರುಕುಳದ ಆರೋಪದಡಿ ಮಹಿಳೆಯ ಪತಿ ಹಾಗೂ ಆತನ ಕುಟುಂಬದ ವಿರುದ್ಧ ದಾಖಲಾಗಿದ್ದ ಪ್ರಕರಣವನ್ನು ವಜಾಗೊಳಿಸಿದ ನ್ಯಾಯಮೂರ್ತಿ ನೀನಾ ಬನ್ಸಾಲ್ ಕೃಷ್ಣ, ಈ ಅಭಿಪ್ರಾಯವನ್ನು ವ್ಯಕ್ತಡಿಸಿದ್ದಾರೆ.
ಡಿಸೆಂಬರ್ 2010ರಲ್ಲಿ ವಿವಾಹವಾಗಿದ್ದ ಮಹಿಳೆ, ತನ್ನ ಪತಿ ಮತ್ತು ಅತ್ತೆ–ಮಾವನ ವಿರುದ್ಧ ಕಿರುಕುಳ ಆರೋಪ ಮಾಡಿದ್ದರು. ವರದಕ್ಷಿಣೆಗಾಗಿ ಬೇಡಿಕೆ ಇಟ್ಟಿದ್ದರು ಎಂದು ದೂರಿನಲ್ಲಿ ಉಲ್ಲೇಖಿಸಿದ್ದರು.
ಮದುವೆಗೆ ಸುಮಾರು ₹4 ಲಕ್ಷ ಖರ್ಚು ಮಾಡಿರುವುದಾಗಿ ಆಕೆಯ ಕುಟುಂಬದವರು ಹೇಳಿಕೊಂಡಿದ್ದು, ಪತಿ ಮತ್ತು ಅತ್ತೆ-ಮಾವ ಬೈಕ್, ನಗದು ಮತ್ತು ಚಿನ್ನದ ಬಳೆಗಾಗಿ ಬೇಡಿಕೆ ಇಟ್ಟಿದ್ದರು ಎಂದು ಆರೋಪಿಸಿದ್ದಾರೆ.
ಇಬ್ಬರು ಹೆಣ್ಣು ಮಕ್ಕಳ ತಾಯಿಯಾಗಿದ್ದ ಮಹಿಳೆ 2014ರ ಮಾರ್ಚ್ 31ರಂದು ಮೃತಪಟ್ಟಿದ್ದರು. ಮರಣೋತ್ತರ ಪರೀಕ್ಷೆಯಲ್ಲಿ ಮಹಿಳೆಯು ಕ್ರೌರ್ಯಯಿಂದ ಮೃತಪಟ್ಟಿಲ್ಲ, ನ್ಯುಮೋನಿಯಾ ಜ್ವರದ ಕಾರಣದಿಂದ ಮೃತಪಟ್ಟಿದ್ದಾರೆ ಎಂಬುವುದನ್ನು ವಿಚಾರಣಾ ನ್ಯಾಯಾಲಯ ಗಮನಿಸಿತ್ತು. ಆರೋಪಿಯನ್ನು ಖುಲಾಸೆಗೊಳಿಸಿತ್ತು. ವಿಚಾರಣಾ ನ್ಯಾಯಾಲಯದ ಆದೇಶವನ್ನು ಹೈಕೋರ್ಟ್ ಎತ್ತಿ ಹಿಡಿದಿದೆ.
ಮೃತ ಮಹಿಳೆಯ ಸಹೋದರಿಯು ತನ್ನ ಸಹೋದರಿ ಬದುಕಿದ್ದ ವೇಳೆ ಹೋಳಿ ಹಬ್ಬದ ಸಂದರ್ಭದಲ್ಲಿ ಆಕೆಗೆ ಕರೆ ಮಾಡಿದ್ದೆ. ಆ ವೇಳೆ ಆಕೆ ತುಂಬಾ ನೋವಿನಲ್ಲಿದ್ದಳು. ಅಳುತ್ತಿದ್ದಳು ಎಂದು ಸಿಆರ್‌ಪಿಸಿ ಸೆಕ್ಷನ್ 161ರ ಅಡಿಯಲ್ಲಿ ಹೇಳಿಕೆ ನೀಡಿದ್ದರು.
'ಅಳುತ್ತಿದ್ದಳು' ಎಂದ ಮಾತ್ರಕ್ಕೆ ಆಕೆಗೆ ಕಿರುಕುಳ ನೀಡಲಾಗಿತ್ತು ಎಂಬ ಅರ್ಥವಲ್ಲ. ಹೀಗಾಗಿ ವರದಕ್ಷಿಣೆ ಕಿರುಕುಳ ಎಂದು ಪರಿಗಣಿಸಲು ಆಗುವುದೂ ಇಲ್ಲ. ಮಹಿಳೆಯ ತಂದೆ ನಿರ್ದಿಷ್ಟ ಘಟನೆಗಳನ್ನು ಉಲ್ಲೇಖಿಸಿಲ್ಲ ಅಥವಾ ಆರೋಪಿಗೆ ಹಣ ನೀಡಿದ್ದಕ್ಕೆ ಪುರಾವೆಗಳನ್ನೂ ಒದಗಿಸಿಲ್ಲ ಎಂದು ಹೈಕೋರ್ಟ್ ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.