ನವದೆಹಲಿ: ಡೇಟಿಂಗ್ ಆ್ಯಪ್ ವೇದಿಕೆಯಲ್ಲಿ ತಾನೊಬ್ಬ ಅಮೆರಿಕದ ಮೂಲದ ರೂಪದರ್ಶಿ ಎಂದು ಹೇಳಿ ಸುಮಾರು 700 ಮಹಿಳೆಯರನ್ನು ವಂಚಿಸಿದ ಪ್ರಕರಣದಲ್ಲಿ 23 ವರ್ಷದ ತುಷಾರ್ ಸಿಂಗ್ ಬಿಶ್ತ್ ಎಂಬಾತನನ್ನು ಪೊಲೀಸರು ಶುಕ್ರವಾರ ಪೂರ್ವ ದೆಹಲಿಯಲ್ಲಿ ಬಂಧಿಸಿದ್ದಾರೆ.
ಉತ್ತರ ಪ್ರದೇಶದ ನೊಯಿಡಾದ ನೇಮಕಾತಿ ಕಂಪನಿಯಲ್ಲಿ ಹಗಲಿನಲ್ಲಿ ಕೆಲಸ ಮಾಡುತ್ತಿದ್ದ ಈತ, ರಾತ್ರಿ ಹೊತ್ತಿನಲ್ಲಿ ಅಮೆರಿಕದ ರೂಪದರ್ಶಿಯ ಸೋಗಿನಲ್ಲಿ ಡೇಟಿಂಗ್ ಆ್ಯಪ್‌ನಲ್ಲಿ ಸಕ್ರಿಯನಾಗುತ್ತಿದ್ದ.
ಬಿಬಿಎ ಪದವಿ ಹೊಂದಿರುವ ತುಷಾರ್ ಸಿಂಗ್ ತಂದೆ ಚಾಲಕರಾಗಿದ್ದಾರೆ. ತಾಯಿ ಗೃಹಿಣಿ, ಸೋದರಿಯೂ ಒಂದು ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ತಾನು ಒಬ್ಬನೇ ಅಮೆರಿಕದಿಂದ ಭಾರತಕ್ಕೆ ಸೊಲೊ ಟ್ರಿಪ್‌ಗಾಗಿ ಬಂದಿದ್ದೇನೆ ಎಂದು ಹೇಳಿಕೊಂಡು ಮಹಿಳೆಯರನ್ನು ವಂಚಿಸುತ್ತಿದ್ದ ಆರೋಪ ಈತನ ಮೇಲಿದೆ.
ತನ್ನ ಕೃತ್ಯಕ್ಕಾಗಿ ಅಂತರರಾಷ್ಟ್ರೀಯ ಸಂಖ್ಯೆಯನ್ನು ಬಳಸುತ್ತಿದ್ದ ಈತ ವರ್ಚುವಲ್ ಮೋಡ್‌ನಲ್ಲಿ ಆ್ಯಪ್ ಮೂಲಕ ಸಕ್ರೀಯನಾಗುತ್ತಿದ್ದ. ಇದಕ್ಕಾಗಿ ಬಂಬಲ್ ಹಾಗೂ ಸ್ನಾಪ್‌ಚಾಟ್ ಆ್ಯಪ್‌ಗಳನ್ನು ಬಳಸುತ್ತಿದ್ದ. ಅಲ್ಲಿ ತನ್ನ ಅಸಲಿ ಗುರುತನ್ನು ಮರೆಮಾಚಿದ್ದ. ಅಮೆರಿಕದಲ್ಲಿ ನೆಲೆಸಿರುವ ಬ್ರೆಜಿಲ್ ಮೂಲದ ರೂಪದರ್ಶಿಯ ಮಾಹಿತಿ ಕದ್ದು, ಅದು ತನ್ನದೇ ಎಂದು ನಕಲಿ ಖಾತೆ ಸೃಷ್ಟಿಸಿದ್ದ. 18ರಿಂದ 30ರ ವಯೋಮಾನದ ಮಹಿಳೆಯರನ್ನು ಗುರಿಯಾಗಿಸಿಕೊಂಡು ಅವರೊಂದಿಗೆ ಈತ ಸ್ನೇಹ ಬೆಳೆಸುತ್ತಿದ್ದ ಎಂದು ಪೊಲೀಸರು ತಿಳಿಸಿರುವುದಾಗಿ ಎನ್‌ಡಿಟಿವಿ ವರದಿ ಮಾಡಿದೆ.
‘ಮಹಿಳೆಯರ ಸ್ನೇಹ ಹಾಗೂ ವಿಶ್ವಾಸ ಸಂಪಾದಿಸಿದ ನಂತರ ಅವರ ಮೊಬೈಲ್ ಸಂಖ್ಯೆಯನ್ನು ಪಡೆದು ಅವರೊಂದಿಗೆ ಚಾಟ್ ಮಾಡುತ್ತಿದ್ದ. ನಂತರ ಮಹಿಳೆಯರ ಖಾಸಗಿ ಚಿತ್ರ ಹಾಗೂ ವಿಡಿಯೊಗಳನ್ನು ಪಡೆಯುತ್ತಿದ್ದ. ಆರಂಭದಲ್ಲಿ ವೈಯಕ್ತಿಕ ಸಂತೋಷಕ್ಕಾಗಿ ಇವುಗಳನ್ನು ಪಡೆಯುತ್ತಿದ್ದ ಈಗ, ನಂತರ ಈ ಚಿತ್ರ ಹಾಗೂ ವಿಡಿಯೊಗಳನ್ನು ಅಂತರ್ಜಾಲದಲ್ಲಿ ಹರಿಯಬಿಡುವುದಾಗಿ ಬೆದರಿಸಿ ಅವರಿಂದ ಹಣ ಕೀಳುತ್ತಿದ್ದ’ ಎಂದು ಮಾಹಿತಿ ನೀಡಿದ್ದಾರೆ.
ಬಂಬಲ್ ಆ್ಯಪ್‌ನಲ್ಲಿ 500ಕ್ಕೂ ಹೆಚ್ಚು ಮಹಿಳೆಯರು, ಸ್ನಾಪ್‌ಚಾಟ್ ಮತ್ತು ವಾಟ್ಸ್‌ಆ್ಯಪ್‌ನಲ್ಲಿ 200ರಷ್ಟು ಸಂಪರ್ಕ ಹೊಂದಿದ್ದಾನೆ. ಇವರಿಂದ ಖಾಸಗಿ ಚಿತ್ರಗಳನ್ನು ಪಡೆದು, ಬೆದರಿಸುತ್ತಿದ್ದ. ದೆಹಲಿ ವಿಶ್ವವಿದ್ಯಾಲಯದಲ್ಲಿ 2ನೇ ವರ್ಷದ ಪದವಿಯಲ್ಲಿ ವ್ಯಾಸಂಗ ಮಾಡುತ್ತಿರುವ ಯುವತಿಯೊಬ್ಬಳು ನೀಡಿದ ದೂರನ್ನು ಆಧರಿಸಿ ಪೊಲೀಸರು ತನಿಖೆ ಕೈಗೊಂಡಿದ್ದರು.
ಎಸಿಪಿ ಅರವಿಂದ ಯಾದವ್ ತಂಡವು ತನಿಖೆ ಕೈಗೊಂಡು, ಶಾಕಾರ್‌ಪುರ್‌ನಲ್ಲ ಈತನನ್ನು ಬಂಧಿಸಿದರು. ತುಷಾರ್ ಸಿಂಗ್‌ನಿಂದ ವರ್ಚುವಲ್ ಅಂತರರಾಷ್ಟ್ರೀಯ ಮೊಬೈಲ್ ಸಂಖ್ಯೆ, ವಿವಿಧ ಬ್ಯಾಂಕ್‌ಗಳ 13 ಕ್ರೆಡಿಟ್ ಕಾರ್ಡ್‌ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಇದರೊಂದಿಗೆ 60 ವಾಟ್ಸ್‌ಆ್ಯಪ್ ಚಾಟ್‌ನಲ್ಲಿ ದೆಹಲಿ ಹಾಗೂ ಸುತ್ತಮುತ್ತಲಿನ ಮಹಿಳೆಯರೊಂದಿಗಿನ ಚಾಟ್‌ಗಳನ್ನು ಸಂಗ್ರಹಿಸಿದ್ದಾರೆ.
ಮಹಿಳೆಯರಿಂದ ಅಕ್ರಮವಾಗಿ ಹಣ ಪಡದ ಒಂದು ಬ್ಯಾಂಕ್ ಖಾತೆಯನ್ನು ತೆರೆದಿದ್ದು, ಮತ್ತೊಂದರ ಮಾಹಿತಿ ಪಡೆಯುವ ಪ್ರಕ್ರಿಯೆ ಪ್ರಗತಿಯಲ್ಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.