ಐಪಿಎಸ್ ಅಧಿಕಾರಿ ಸತೀಶ್ ಗೋಲ್ಚಾ ಮತ್ತು ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತಾ
Credit: PTI, X/@ANI
ನವದೆಹಲಿ: ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತಾ ಅವರ ಮೇಲೆ ವ್ಯಕ್ತಿಯೊಬ್ಬರಿಂದ ದಾಳಿ ನಡೆದ ಮರುದಿನವೇ ನಗರದ ಹೊಸ ಪೊಲೀಸ್ ಕಮಿಷನರ್ ಆಗಿ ಹಿರಿಯ ಐಪಿಎಸ್ ಅಧಿಕಾರಿ ಸತೀಶ್ ಗೋಲ್ಚಾ ಅವರನ್ನು ನೇಮಕ ಮಾಡಲಾಗಿದೆ.
ಸಂಜಯ್ ಅರೋರಾ ಅವರ ನಿವೃತ್ತಿ ಬಳಿಕ ಹೆಚ್ಚುವರಿ ಪೊಲೀಸ್ ಆಯುಕ್ತರಾಗಿ ಸೇವೆ ಸಲ್ಲಿಸುತ್ತಿದ್ದ ಎಸ್‌ಬಿಕೆ ಸಿಂಗ್ ಅವರ ಸ್ಥಾನಕ್ಕೆ ಗೋಲ್ಚಾ ಅವರನ್ನು ನೇಮಿಸಲಾಗಿದೆ ಎಂದು ಗೃಹಸಚಿವಾಲಯ ಗುರುವಾರ ಹೊರಡಿಸಿದ ಪ್ರಕಟಣೆಯಲ್ಲಿ ತಿಳಿಸಿದೆ.
1992ರ ಬ್ಯಾಚ್‌ನ ಐಪಿಎಸ್ ಅಧಿಕಾರಿಯಾಗಿದ್ದ ಗೋಲ್ಚಾ ಅವರು ಪ್ರಸ್ತುತ ತಿಹಾರ ಜೈಲಿನ ಮಹಾನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಗೋಲ್ಚಾ ಅವರು ವಿಶೇಷ ಪೊಲೀಸ್ ಆಯುಕ್ತ (ಕಾನೂನು ಮತ್ತು ಸುವ್ಯವಸ್ಥೆ), ದೆಹಲಿ ಗುಪ್ತಚರ ವಿಶೇಷ ಆಯುಕ್ತರಾಗಿ ಮತ್ತು ಅರುಣಾಚಲ ಪ್ರದೇಶದ ಪೊಲೀಸ್ ಮಹಾನಿರ್ದೇಶಕರಾಗಿ (ಡಿಜಿಪಿ), ಡಿಸಿಪಿ ಸೇರಿದಂತೆ ಪ್ರಮುಖ ಹುದ್ದೆಗಳನ್ನು ಅಲಂಕರಿಸಿದ್ದಾರೆ.
ದೆಹಲಿಯ ಸಿವಿಲ್ ಲೈನ್ಸ್‌ನಲ್ಲಿರುವ ಮುಖ್ಯಮಂತ್ರಿ ಕಚೇರಿಯಲ್ಲಿ ಬುಧವಾರ ‘ಜನ ಸಂವಾದ’ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಜನರೊಂದಿಗೆ ಕುಳಿತು ತನ್ನ ಸರದಿ ಬಂದಾಗ ಮುಖ್ಯಮಂತ್ರಿ ಅವರ ಬಳಿ ಹೋದ ವ್ಯಕ್ತಿಯೊಬ್ಬ, ಅವರೊಂದಿಗೆ ಮಾತನಾಡುತ್ತಲೇ ಏಕಾಏಕಿ ಹಲ್ಲೆ ನಡೆಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಕೊಲೆ ಯತ್ನ ಆರೋಪಕ್ಕೆ ಸಂಬಂಧಿಸಿದಂತೆ ಗುಜರಾತ್‌ನ ರಾಜ್‌ಕೋಟ್ ನಿವಾಸಿ ಸಕರಿಯಾ ರಾಜೇಶ್‌ಭಾಯಿ ಖಿಮ್ಜಿಭಾಯಿ (41) ಎಂಬುವವನನ್ನು ಬಂಧಿಸಿ, ದ್ವಾರಕಾದಲ್ಲಿರುವ ಮ್ಯಾಜಿಸ್ಟ್ರೇಟ್ ಎದುರು ಬುಧವಾರ ತಡರಾತ್ರಿ ಹಾಜರುಪಡಿಸಲಾಯಿತು. ಸದ್ಯ ಆರೋಪಿಯನ್ನು 5 ದಿನ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಪ್ರಕರಣ ಸಂಬಂಧ ರಾಜೇಶ್ ವಿರುದ್ಧ ಭಾರತೀಯ ನ್ಯಾಯ ಸಂಹಿತೆ (ಬಿಎನ್‌ಎಸ್) ಸೆಕ್ಷನ್ 109(1) ಅಡಿಯಲ್ಲಿ ಕೊಲೆ ಯತ್ನ ಪ್ರಕರಣ ದಾಖಲಿಸಲಾಗಿದೆ. ಜತೆಗೆ, ಸರ್ಕಾರ ನೌಕರರ ಮೇಲೆ ಹಲ್ಲೆ ಮತ್ತು ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದ ಮೇಲೆಯೂ ಆತನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.