
ನವದೆಹಲಿ: ನ್ಯಾಷನಲ್ ಹೆರಾಲ್ಡ್ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ, ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಮತ್ತು ಇತರ ಆರೋಪಿಗಳ ವಿರುದ್ಧ ದೆಹಲಿ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ.
ವೈಯಕ್ತಿಕ ಲಾಭಕ್ಕಾಗಿ ಗಾಂಧಿ ಕುಟುಂಬ ತಮ್ಮ ಸ್ಥಾನವನ್ನು ದುರುಪಯೋಗಪಡಿಸಿಕೊಂಡಿದೆ ಎಂದು ಆರೋಪಿಸಲಾಗಿದೆ. ಹಣ ಅಕ್ರಮ ವರ್ಗಾವಣೆ ಪ್ರಕರಣದ ತನಿಖೆಯ ಭಾಗವಾಗಿ ಜಾರಿ ನಿರ್ದೇಶನಾಲಯ (ಇ.ಡಿ) ನೀಡಿದ ದೂರಿನ ಆಧಾರದಲ್ಲಿ ಎಫ್‌ಐಆರ್ ದಾಖಲಾಗಿದೆ.
ದೆಹಲಿ ಪೊಲೀಸರ ಆರ್ಥಿಕ ಅಪರಾಧಗಳ ವಿಭಾಗ (ಇಒಡಬ್ಲ್ಯು) ಅಕ್ಟೋಬರ್ 3ರಂದು ಗಾಂಧಿ ಕುಟುಂಬ ಮತ್ತು ಇತರ ಏಳು ಜನರ ವಿರುದ್ಧ ಪ್ರಕರಣದ ದಾಖಲಿಸಿದೆ ಎಂದು ಮೂಲಗಳು ತಿಳಿಸಿವೆ.
ಸೋನಿಯಾ, ರಾಹುಲ್, ಕಾಂಗ್ರೆಸ್ ನಾಯಕರಾದ ಸುಮನ್ ದುಬೆ, ಸ್ಯಾಮ್ ಪಿತ್ರೋಡಾ, ‘ಯಂಗ್ ಇಂಡಿಯನ್’ ಮತ್ತು ‘ಡಾಟೆಕ್ಸ್ ಮರ್ಚಂಡೈಸ್ ಲಿಮಿಟೆಡ್’, ‘ಡಾಟೆಕ್ಸ್’ನ ಪ್ರವರ್ತಕ ಸುನಿಲ್ ಭಂಡಾರಿ, ‘ಅಸೋಸಿಯೇಟೆಡ್ ಜರ್ನಲ್ಸ್ ಲಿಮಿಟೆಡ್’ (ಎಜೆಎಲ್) ಮತ್ತು ಇತರ ಅಪರಿಚಿತರ ವಿರುದ್ಧ ಐಪಿಸಿ ಕಲಂ 120ಬಿ (ಕ್ರಿಮಿನಲ್ ಪಿತೂರಿ), 403 (ಆಸ್ತಿಯ ದುರುಪಯೋಗ), 406 (ನಂಬಿಕೆ ಉಲ್ಲಂಘನೆ), 420 (ವಂಚನೆ) ಅಡಿಯಲ್ಲಿ ಆರೋಪ ಹೊರಿಸಲಾಗಿದೆ.
‘ಜಾರಿ ನಿರ್ದೇಶನಾಲಯವು ಏಪ್ರಿಲ್‌ನಲ್ಲಿ ದೆಹಲಿ ನ್ಯಾಯಾಲಯಕ್ಕೆ ಹಲವರ ವಿರುದ್ಧ ಆರೋಪಪಟ್ಟಿ ಸಲ್ಲಿಸಿದೆ. ನ್ಯಾಷನಲ್ ಹೆರಾಲ್ಡ್ ಪತ್ರಿಕೆಯನ್ನು ಪ್ರಕಟಿಸುತ್ತಿದ್ದ ಅಸೋಸಿಯೇಟೆಡ್ ಜರ್ನಲ್ಸ್‌ಗೆ ಸೇರಿದ ಸುಮಾರು ₹2,000 ಕೋಟಿ ಮೌಲ್ಯದ ಆಸ್ತಿಯನ್ನು ಆರೋಪಿಗಳೆಲ್ಲರೂ ಸೇರಿ ತಮ್ಮ ವಶಕ್ಕೆ ಪಡೆದಿದ್ದಾರೆ. ಯಂಗ್ ಇಂಡಿಯನ್ ಸಂಸ್ಥೆಯಲ್ಲಿ ಸೋನಿಯಾ ಹಾಗೂ ರಾಹುಲ್ ಗಾಂಧಿ ತಲಾ ಶೇ 38ರಷ್ಟು ಷೇರು ಹೊಂದಿದ್ದಾರೆ’ ಎಂದು ಇ.ಡಿ ಆರೋಪಪಟ್ಟಿಯಲ್ಲಿ ಉಲ್ಲೇಖಿಸಿದೆ. ಈ ಆರೋಪಪಟ್ಟಿಯನ್ನು ವಿಚಾರಣೆಗೆ ಅಂಗೀಕರಿಸುವ ಕುರಿತು ವಿಚಾರಣೆ ಪೂರ್ಣಗೊಳಿಸುವ ವಿಶೇಷ ನ್ಯಾಯಾಲಯ, ಆದೇಶ ಪ್ರಕಟಣೆಯನ್ನು ಡಿಸೆಂಬರ್ 16ಕ್ಕೆ ಕಾಯ್ದಿರಿಸಿದೆ.
ಇ.ಡಿಯು ಹಣದ ಅಕ್ರಮ ವರ್ಗಾವಣೆ ತಡೆ ಕಾಯ್ದೆಯ (ಪಿಎಂಎಲ್‌ಎ) ಕಲಂ 66(2)ರ ಅಡಿಯಲ್ಲಿ ಲಭ್ಯವಿರುವ ಅಧಿಕಾರ ಬಳಸಿಕೊಂಡು ಪೊಲೀಸರಿಂದ ಈಗ ಎಫ್‌ಐಆರ್ ದಾಖಲಿಸುವಂತೆ ಮಾಡಿದೆ. ಈ ಎಫ್‌ಐಆರ್, ಇ.ಡಿ ದಾಖಲಿಸಿರುವ ಆರೋಪಪಟ್ಟಿ ಮತ್ತು ಪ್ರಕರಣವನ್ನು ಇನ್ನಷ್ಟು ಬಲಗೊಳಿಸಲಿದೆ ಎಂದು ಮೂಲಗಳು ತಿಳಿಸಿವೆ.
ಸೇಡಿನ ರಾಜಕಾರಣ: ಕಾಂಗ್ರೆಸ್ ಆರೋಪ
ನ್ಯಾಷನಲ್ ಹೆರಾಲ್ಡ್ ಪ್ರಕರಣ ಕುರಿತು ಎಫ್‌ಆರ್‌ಆರ್ ದಾಖಲಿಸಿದ ಕ್ರಮವನ್ನು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ (ಸಂವಹನ) ಜೈರಾಮ್ ರಮೇಶ್ ತೀವ್ರವಾಗಿ ಖಂಡಿಸಿದ್ದಾರೆ. ‘ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಜೋಡಿಯು ಕಾಂಗ್ರೆಸ್‌ನ ಹಿರಿಯ ನಾಯಕತ್ವದ ವಿರುದ್ಧ ಕಿರುಕುಳ ಬೆದರಿಕೆ ಮತ್ತು ಸೇಡಿನ ರಾಜಕಾರಣವನ್ನು ಮುಂದುವರಿಸಿದೆ’ ಎಂದು ಆರೋಪಿಸಿದ್ದಾರೆ. ‘ಇಲ್ಲಿ ಬೆದರಿಕೆ ಹಾಕುತ್ತಿರುವವರೇ ಸ್ವತಃ ಅಸುರಕ್ಷಿತರು ಮತ್ತು ಭಯಭೀತರಾಗಿದ್ದಾರೆ’ ಎಂದು ಅವರು ‘ಎಕ್ಸ್’ನಲ್ಲಿ ದೂರಿದ್ದಾರೆ. ‘ನ್ಯಾಷನಲ್ ಹೆರಾಲ್ಡ್ ಕುರಿತ ಪ್ರಕರಣವು ಸಂಪೂರ್ಣ ನಕಲಿಯಾಗಿದ್ದು ಅಂತಿಮವಾಗಿ ನಾವು ಗೆಲ್ಲುತ್ತೇವೆ. ಸತ್ಯಮೇವ ಜಯತೇ’ ಎಂದು ಅವರು ಹೇಳಿದ್ದಾರೆ. ಎಫ್‌ಐಆರ್ ಕುರಿತು ಪ್ರತಿಕ್ರಿಯಿಸಿರುವ ಕಾಂಗ್ರೆಸ್ ವಕ್ತಾರ ಮತ್ತು ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ ‘ವೈನ್ ಹೊಸದಲ್ಲ ಬಾಟಲಿಯೂ ಹೊಸದಲ್ಲ ಗ್ಲಾಸ್ ಕೂಡ ಹೊಸದಲ್ಲ’ ಎಂದು ವ್ಯಂಗ್ಯವಾಡಿದ್ದಾರೆ. ಈ ಕುರಿತು ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿರುವ ಅವರು ‘ಇಲ್ಲಿ ಹಣ ವರ್ಗಾವಣೆ ಆಗಿಲ್ಲ ಸ್ಥಿರಾಸ್ತಿಯೂ ವರ್ಗಾವಣೆ ಆಗಿಲ್ಲ. ಆದರೂ ಇದೊಂದು ಅದ್ಭುತ ಪ್ರಕರಣ’ ಎಂದು ಟೀಕಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.