ADVERTISEMENT

ಕಾನೂನಿನಂತೆಯೇ ದಿಶಾ ರವಿ ಬಂಧನ: ಪೊಲೀಸ್ ಸಮರ್ಥನೆ

‘ಟೂಲ್‌ಕಿಟ್‌’ ತಯಾರಿ ಕುರಿತ ‘ಝೂಮ್‌’ ಸಭೆಯಲ್ಲಿ ಭಾಗವಹಿಸಿದ್ದವ ವಿವರ ಕೇಳಿದ ಪೊಲೀಸರು

ಪಿಟಿಐ
Published 16 ಫೆಬ್ರುವರಿ 2021, 9:17 IST
Last Updated 16 ಫೆಬ್ರುವರಿ 2021, 9:17 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ನವದೆಹಲಿ: ‘ಪರಿಸರ ಕಾರ್ಯಕರ್ತೆ ದಿಶಾ ರವಿ ಅವರನ್ನು ಕಾನೂನಿನ ಪ್ರಕಾರವೇ ಬಂಧಿಸಲಾಗಿದೆ. 22 ವರ್ಷದವರಿರಲಿ, 50 ವರ್ಷದವರಿರಲಿ, ಕಾನೂನಿನ ವಿಚಾರದಲ್ಲಿ ವ್ಯತ್ಯಾಸ ಮಾಡಲು ಸಾಧ್ಯವಿಲ್ಲ’ ಎಂದು ದೆಹಲಿ ಪೊಲೀಸ್ ಆಯುಕ್ತ ಎಸ್‌.ಎನ್‌.ಶ್ರೀವಾಸ್ತವ ತಿಳಿಸಿದ್ದಾರೆ.

‘22 ವರ್ಷದ ಕಾರ್ಯಕರ್ತೆಯೊಬ್ಬರನ್ನು ಬಂಧಿಸಿದ್ದು ತಪ್ಪು ಎಂದು ಜನರು ಆಡಿಕೊಳ್ಳುವುದರಲ್ಲಿ ಅರ್ಥವಿಲ್ಲ’ ಎಂದು ಅವರು ಮಂಗಳವಾರ ಇಲ್ಲಿ ಕಾರ್ಯಕ್ರಮವೊಂದರಲ್ಲಿ ತಿಳಿಸಿದರು.‌

‘ದಿಶಾ ರವಿ ಅವರು ಟೆಲಿಗ್ರಾಂ ಆ್ಯಪ್‌ ಮೂಲಕ ಗ್ರೇಟಾ ಥನ್‌ಬರ್ಗ್ ಅವರಿಗೆ ರೈತರ ಹೋರಾಟಕ್ಕೆ ಸಂಬಂಧಿಸಿದ ಟೂಲ್‌ಕಿಟ್‌ ಕಳುಹಿಸಿದ್ದರು. ದಿಶಾ ಅವರಿಗೆ ಟೆಲಿಗ್ರಾಂನಲ್ಲಿ ಹಲವರೊಂದಿಗೆ ಸಂಪರ್ಕ ಇತ್ತು, ಆದರೆ ಅವುಗಳನ್ನು ಬಳಿಕ ಅಳಿಸಿ ಹಾಕಲಾಗಿದೆ’ ಎಂದು ದೆಹಲಿ ಪೊಲೀಸರು ಆರೋಪಿಸಿದ್ದಾರೆ.

ADVERTISEMENT

ಝೂಮ್‌ಗೆ ಪತ್ರ:ರೈತರ ಹೋರಾಟವನ್ನು ಬೆಂಬಲಿಸುವ ‘ಟೂಲ್‌ಕಿಟ್‌’ ಸಿದ್ಧಪಡಿಸಲು ಖಾಲಿಸ್ತಾನ ಪರ ಗುಂಪು ಆಯೋಜಿಸಿದ್ದ ಜನವರಿ 11ರ ಸಭೆಯಲ್ಲಿ ಭಾಗವಹಿಸಿದ್ದವರ ವಿವರ ನೀಡುವಂತೆ ದೆಹಲಿ ಪೊಲೀಸರು ವಿಡಿಯೊ ಕಾನ್ಫರೆನ್ಸಿಂಗ್‌ನ ವೇದಿಕೆಯಾದ ‘ಝೂಮ್‌’ ಸಂಸ್ಥೆಗೆ ಪತ್ರ ಬರೆದಿದ್ದಾರೆ ಎಂದು ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ.

ಗಣರಾಜ್ಯೋತ್ಸವದಂದು ನಡೆದ ಹಿಂಸಾಚಾರಕ್ಕೂ ಕೆಲ ದಿನಗಳು ಮೊದಲು ರಾಜಧಾನಿಯಲ್ಲಿ ‘ಝೂಮ್‌’ ಆ್ಯಪ್‌ನಲ್ಲಿ ನಡೆದ ಈ ಸಭೆಯಲ್ಲಿ ಮುಂಬೈ ವಕೀಲರಾದ ನಿಕಿತಾ ಜೇಕಬ್‌, ಪುಣೆಯ ಎಂಜಿನಿಯರ್‌ ಶಾಂತನು ಸೇರಿ 70 ಜನರು ಭಾಗವಹಿಸಿದ್ದರು ಎಂದು ಪೊಲೀಸರು ಆರೋಪಿಸಿದ್ದಾರೆ.

‘ಇ–ಮೇಲ್‌ ಖಾತೆಯನ್ನು ತೆರೆದಿರುವ ಶಾಂತನು ಅವರೇ ಈ ಗೂಗಲ್‌ ದಾಖಲೆಯ ಮಾಲೀಕರೂ ಆಗಿದ್ದಾರೆ’ ಎಂದು ಜಂಟಿ ಪೊಲೀಸ್‌ ಆಯುಕ್ತ (ಸೈಬರ್‌) ಪ್ರೇಮ್‌ನಾಥ್‌ ಸೋಮವಾರ ಆರೋಪಿಸಿದ್ದರು.

ಖಾಲಿಸ್ತಾನ ಪರವಾಗಿರುವ ಪೋಯೆಟಿಕ್‌ ಜಸ್ಟಿಸ್‌ ಫೌಂಡೇಶನ್‌ (ಪಿಎಫ್‌ಜೆ) ಸಂಸ್ಥಾಪಕ ಮೊ ಧಲಿವಾಲ್ ಅವರು ಕೆನಡಾ ಮೂಲದ ಪುನಿತ್ ಎಂಬ ಮಹಿಳೆಯ ಮೂಲಕ ಅವರನ್ನು (ಜೇಕಬ್‌ ಮತ್ತು ಶಾಂತನು) ಸಂಪರ್ಕಿಸಿದ್ದರು ಎಂದು ನಾಥ್ ಹೇಳಿದ್ದರು.

ನಿಕಿತಾ ಮತ್ತು ಶಾಂತನು ಅವರು ಜನವರಿ 11 ರಂದು ಪಿಎಫ್‌ಜೆ ಆಯೋಜಿಸಿದ್ದ ಝೂಮ್‌ ಸಭೆಯಲ್ಲಿ ಪಾಲ್ಗೊಂಡಿದ್ದರು. ಇದರಲ್ಲಿ ‘ಗ್ಲೋಬಲ್ ಫಾರ್ಮರ್ ಸ್ಟ್ರೈಕ್’ ಮತ್ತು ‘ಗ್ಲೋಬಲ್ ಡೇ ಆಫ್ ಆ್ಯಕ್ಷನ್, ಜನವರಿ 26’ ಎಂಬ ಶೀರ್ಷಿಕೆಯ 'ಟೂಲ್‌ಕಿಟ್' ರಚಿಸಲು ವಿಧಾನಗಳನ್ನು ನಿರ್ಧರಿಸಲಾಯಿತು ಎಂದು ಅವರು ವಿವರಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.