ADVERTISEMENT

ದೆಹಲಿ | ಆರು ವರ್ಷದಲ್ಲೇ ಅತ್ಯಂತ ಶೀತಮಯ ದಿನ: ವಿಮಾನ ಹಾರಾಟ ವ್ಯತ್ಯಯ

ಪಿಟಿಐ
Published 1 ಜನವರಿ 2026, 6:41 IST
Last Updated 1 ಜನವರಿ 2026, 6:41 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಡಿಸೆಂಬರ್ 31ರಂದು (ಬುಧವಾರ) 6.2 ಡಿಗ್ರಿ ಸೆಲ್ಸಿಯಸ್‌ ಕನಿಷ್ಠ ತಾಪಮಾನ ದಾಖಲಾಗಿದ್ದು, ಇದು ಕಳೆದ 6 ವರ್ಷದಲ್ಲೇ ಡಿಸೆಂಬರ್‌ ತಿಂಗಳಿನ ಅತ್ಯಂತ ಶೀತಮಯ ದಿನವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸಾಮಾನ್ಯ ಕನಿಷ್ಠ ತಾಪಮಾನಕ್ಕಿಂತಲೂ ದೆಹಲಿ ತಾಪಮಾನ ಬುಧವಾರ 6.2 ಡಿಗ್ರಿಗೆ ಕುಸಿದಿತ್ತು ಎಂದೂ ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ADVERTISEMENT

2025ರ ಕೊನೆ ದಿನ ದೆಹಲಿಯಲ್ಲಿ 14.2 ಡಿಗ್ರಿ ಸೆಲ್ಸಿಯಸ್‌ಗೆ ಗರಿಷ್ಠ ತಾಪಮಾನ ತಲುಪಿತ್ತು. ಇದು ಸಾಮಾನ್ಯಕ್ಕಿಂತ ಸುಮಾರು 6.2 ಡಿಗ್ರಿ ಸೆಲ್ಸಿಯಸ್ ಕಡಿಮೆಯಾಗಿತ್ತು. ಪ್ರಸಕ್ತ ಋತುವಿನ ಅತ್ಯಂತ ಕನಿಷ್ಠ ತಾಪಮಾನವೂ ಆಗಿದೆ. 2019ರ ಡಿಸೆಂಬರ್ 31ರಂದು ದಿನದ ಗರಿಷ್ಠ ತಾಪಮಾನವು 9.4 ಡಿಗ್ರಿ ಸೆಲ್ಸಿಯಸ್‌ಗೆ ಇಳಿದಿತ್ತು.

ಕನಿಷ್ಠ ತಾಪಮಾನವು 10 ಡಿಗ್ರಿ ಸೆಲ್ಸಿಯಸ್‌ಗಿಂತ ಕಡಿಮೆಯಾದಾಗ ಮತ್ತು ಗರಿಷ್ಠ ತಾಪಮಾನವು ಸಾಮಾನ್ಯಕ್ಕಿಂತ 4.5 ಡಿಗ್ರಿ ಸೆಲ್ಸಿಯಸ್ ಕಡಿಮೆಯಾದಾಗ ಶೀತ ದಿನವನ್ನು ಘೋಷಿಸಲಾಗುತ್ತದೆ ಎಂದು ಐಎಂಡಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಹೊಸ ವರ್ಷದ ದಿನದಂದು ಕೂಡ ಶೀತ ವಾತಾವರಣ ಮುಂದುವರಿಯುವ ನಿರೀಕ್ಷೆಯಿದೆ. ಚಂಡಮಾರುತದ ಪರಿಣಾಮ ದೆಹಲಿ ಸೇರಿದಂತೆ ಪಂಜಾಬ್, ಹರಿಯಾಣದಲ್ಲಿ ಮಳೆಯಾಗುವ ಸಾಧ್ಯತೆಯಿದೆ. ಹಾಗೆಯೇ, ಜನವರಿ 3ರಿಂದ ಕನಿಷ್ಠ ತಾಪಮಾನ ಮತ್ತಷ್ಟು ಕುಸಿಯುವ ಸಾಧ್ಯತೆ ಇದೆ. ಹಿಮಾಲಯದ ದಿಕ್ಕಿನಿಂದ ಮಾರುತಗಳು ರಾಷ್ಟ್ರ ರಾಜಧಾನಿಯ ಕಡೆಗೆ ಚಲಿಸುವ ನಿರೀಕ್ಷೆಯಿದೆ ಎಂದೂ ಅವರು ಹೇಳಿದ್ದಾರೆ.

ದೆಹಲಿ ವಿಮಾನ ನಿಲ್ದಾಣದಲ್ಲಿ ದಟ್ಟ ಮಂಜು ಮತ್ತು ಕಡಿಮೆ ಗೋಚರತೆಯ ಪರಿಸ್ಥಿತಿಯಿಂದಾಗಿ ಬುಧವಾರ ಕನಿಷ್ಠ 148 ವಿಮಾನಗಳ ಹಾರಾಟ ರದ್ದಾಗಿದ್ದು, 150 ವಿಮಾನಗಳು ವಿಳಂಬವಾಗಿದ್ದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.