
ನವದೆಹಲಿ: ದೆಹಲಿಯ ಕೆಂಪು ಕೋಟೆ ಬಳಿ ನಡೆದ ಸ್ಫೋಟಕ್ಕೆ ಸಂಬಂಧಿಸಿದಂತೆ ಫರೀದಾಬಾದ್ ಮೂಲದ ಕಾರ್ ಡೀಲರ್ ಒಬ್ಬರನ್ನು ವಿಶೇಷ ದಳ ವಶಕ್ಕೆ ಪಡೆದಿದೆ. ಫರೀದಾಬಾದ್ ಪೊಲೀಸರ ನೆರವಿನೊಂದಿಗೆ ಅವರನ್ನು ಸೋಮವಾರ ರಾತ್ರಿ ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸ್ ಮೂಲಗಳು ಬುಧವಾರ ತಿಳಿಸಿವೆ.
ಫರೀದಾಬಾದ್ ಸೆಕ್ಟರ್ 37ರ ರೋಯಲ್ ಕಾರ್ ಪ್ಲಾಜಾದ ಮಾಲೀಕ ಅಮಿತ್ ಬಂಧಿತ ವ್ಯಕ್ತಿ.
ಸೋಮವಾರ ಕೆಂಪು ಕೋಟೆಯ ಬಳಿ ನಡೆದ ಪ್ರಬಲ ಸ್ಪೋಟದಲ್ಲಿ ಬಳಕೆಯಾದ ಹುಂಡೈ ಐ20 ಕಾರನ್ನು ಮಾರಾಟ ಮಾಡಲು ಅಮಿತ್ ನೆರವಾಗಿದ್ದರು ಎಂದು ಆರೋಪಿಸಲಾಗಿದೆ.
‘ಅಮಿತ್ ಅವರನ್ನು ವಿಚಾರಣೆ ನಡೆಸಲಾಗುತ್ತಿದೆ. ಸ್ಫೋಟಕ್ಕೆ ಬಳಸಲಾದ ಹುಂಡೈ ಐ20 ಕಾರು ಶಂಕಿತರ ಕೈಗೆ ಹೇಗೆ ದೊರಕಿತು ಎಂಬ ಬಗ್ಗೆ ಮತ್ತು ಅದರ ಮಾಲೀಕರು ಯಾರಾಗಿದ್ದರು ಎಂದು ಪತ್ತೆಹಚ್ಚಲಾಗುತ್ತಿದೆ. ಶೋರೂಂಗೆ ಕಾರನ್ನು ಯಾರು ತಂದರು ಮತ್ತು ಡಾ. ಉಮರ್ ನಬಿ ಯಾರ ಮೂಲಕ ಅಮಿತ್ ಅವರನ್ನು ಸಂಪರ್ಕಿಸಿದರು ಎಂದನ್ನು ನಾವು ಪರಿಶೀಲಿಸುತ್ತಿದ್ದೇವೆ’ ಎಂದು ಮೂಲಗಳು ತಿಳಿಸಿವೆ.
ತನಿಖೆಯ ಭಾಗವಾಗಿ ದೆಹಲಿ ಮತ್ತು ಪಕ್ಕದ ರಾಜ್ಯಗಳ ಎಲ್ಲಾ ಸೆಕೆಂಡ್ ಹ್ಯಾಂಡ್ ಕಾರ್ ಡೀಲರ್‌ಗಳಿಗೆ, ಇತ್ತೀಚೆಗೆ ನಡೆಸಿದ ವಾಹನ ಮಾರಾಟದ ವಿವರಗಳನ್ನು ಪರಿಶೀಲಿಸಲು ಮತ್ತು ಮಾಹಿತಿ ಹಂಚಿಕೊಳ್ಳುವಂತೆ ನಿರ್ದೇಶನ ನೀಡಲಾಗಿದೆ ಎಂದು ಅಧಿಕಾರಿಗಳು ಬುಧವಾರ ಹೇಳಿದ್ದಾರೆ.
ಆಕ್ಷೇಪಾರ್ಹ ಹೇಳಿಕೆ: ಅಸ್ಸಾಂನಲ್ಲಿ ಐವರ ಬಂಧನ
ಗುವಾಹಟಿ: ದೆಹಲಿಯಲ್ಲಿ ನಡೆದ ಸ್ಫೋಟಕ್ಕೆ ಸಂಬಂಧಿಸಿ ಆನ್‌ಲೈನ್‌ನಲ್ಲಿ ಆಕ್ಷೇಪಾರ್ಹ ಮತ್ತು ಪ್ರಚೋದನಾಕಾರಿ ವಿಚಾರಗಳನ್ನು ಹರಡಿದ ಆರೋಪದಲ್ಲಿ ಅಸ್ಸಾಂನಲ್ಲಿ ಐವರನ್ನು ಬಂಧಿಸಲಾಗಿದೆ ಎಂದು ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಬುಧವಾರ ಹೇಳಿದ್ದಾರೆ.
ದ್ವೇಷ ಹರಡಲು ಮತ್ತು ಭಯೋತ್ಪಾದನೆಯನ್ನು ವೈಭವೀಕರಿಸಲು ಸಾಮಾಜಿಕ ಮಾಧ್ಯಮವನ್ನು ದುರುಪಯೋಪಡಿಸಿದವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಹೇಳಿದ್ದಾರೆ.
ಬಂಧಿತರನ್ನು ದರಂಗ್‌ನ ಮತಿಉರ್ ರಹಮಾನ್ ಗೋವಲಪಾರಾದ ಹಸ್ಸಾಮ್ ಅಲಿ ಚಿರಾಂಗ್‌ನ ಅಬ್ದುಲ್ ಲತೀಫ್ ಕಾಪರೂಪದ ವಜುಲ್ ಕಮಲ್ ಮತ್ತು ಬಂಗಾಯಿಗಾವ್‌ನ ನೂರ್ ಅಮೀನ್ ಅಹ್ಮದ್ ಎಂದು ಗುರುತಿಸಲಾಗಿದೆ ಎಂದು ಮುಖ್ಯಮಂತ್ರಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.