ಸ್ಫೋಟ ಸಂಭವಿಸಿದ ಬಳಿಕದ ನೋಟ
– ಪಿಟಿಐ
ನವದೆಹಲಿ: ದೆಹಲಿಯ ಕೆಂಪು ಕೋಟೆ ಸಮೀಪ ನಡೆದ ಸ್ಫೋಟ ಪ್ರಕರಣ ಸಂಬಂಧ ತನಿಖೆ ನಡೆಸುತ್ತಿರುವ ಸಂಸ್ಥೆಗಳು ಹಲವು ಭಯಾನಕ ಮಾಹಿತಿಗಳನ್ನು ಬಯಲಿಗೆಳೆದಿವೆ.
ದೇಶದ ನಾಲ್ಕು ಕಡೆಗಳಲ್ಲಿ ಸರಣಿ ಸ್ಫೋಟಗಳನ್ನು ನಡೆಸಲು ಯೋಜಿಸಿದ್ದರು ಎಂದು ತನಿಖಾ ಸಂಸ್ಥೆಗಳ ಮೂಲವನ್ನು ಉಲ್ಲೇಖಿಸಿ ‘ಎಎನ್‌ಐ’ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಸುಮಾರು ಎಂಟು ಮಂದಿ ಶಂಕಿತರು ನಾಲ್ಕು ಕಡೆಗಳಲ್ಲಿ ಸ್ಫೋಟ ನಡೆಸಲು ಸಂಚು ರೂಪಿಸಿದ್ದರು. ಎರಡು ಮಂದಿಯ ಗುಂಪು ರಚಿಸಿ ನಾಲ್ಕು ನಗರಗಳಿಗೆ ತೆರಳಲು ಮುಂದಾಗಿದ್ದರು. ಪ್ರತಿ ತಂಡವು ಹಲವು ಕಚ್ಚಾ ಬಾಂಬ್‌ಗಳನ್ನು ಕೊಂಡೊಯ್ಯಲು ಯೋಜನೆ ಹಾಕಿಕೊಂಡಿತ್ತು ಎಂದು ಮೂಲಗಳು ಹೇಳಿವೆ.
ಸ್ಫೋಟ ಪ್ರಕರಣದ ಆರೋಪಿಗಳಾದ ಡಾ. ಮುಜಮ್ಮಿಲ್, ಡಾ. ಅದೀಲ್, ಉಮರ್ ಹಾಗೂ ಶಹೀನ್ ಸೇರಿಕೊಂಡು ₹ 20 ಲಕ್ಷ ಹಣ ಸಂಗ್ರಹಿಸಿದ್ದರು. ಅದನ್ನು ಉಮರ್‌ಗೆ ನೀಡಿದ್ದರು. ಬಳಿಕ ಕಚ್ಚಾ ಬಾಂಬ್ ತಯಾರಿಕೆಗೆ ಗುರುಗ್ರಾಮ, ನುಹ್ ಹಾಗೂ ಸಮೀಪದ ಪ್ರದೇಶಗಳಿಂದ ₹ 3 ಲಕ್ಷ ಮೌಲ್ಯದ 20 ಕ್ವಿಂಟಾಲ್ ಸಾರಜನಕ, ರಂಜಕ ಮತ್ತು ಪೊಟ್ಯಾಶಿಯಂ ರಸಗೊಬ್ಬರ (ಎನ್‌ಪಿಕೆ ರಸಗೊಬ್ಬರ) ಖರೀದಿ ಮಾಡಿದ್ದರು ಎಂದು ಮೂಲಗಳಿಂದ ಗೊತ್ತಾಗಿದೆ.
ಉಮರ್ ಡಾ. ಮುಜಮ್ಮಿಲ್ ನಡುವೆ ಹಣಕಾಸಿನ ವಿಷಯಕ್ಕೆ ಭಿನ್ನಾಭಿಪ್ರಾಯಗಳೂ ಉಂಟಾಗಿದ್ದವು. ಸಿಗ್ನಲ್ ಆ್ಯಪ್‌ನಲ್ಲಿ ಉಮರ್ 2–4 ಮಂದಿ ಸದಸ್ಯರ ಗುಂಪನ್ನು ರಚಿಸಿದ್ದ ಎಂದು ತನಿಖಾ ಸಂಸ್ಥೆಗಳ ಮೂಲಗಳಿಂದ ಮಾಹಿತಿ ದೊರಕಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.