ADVERTISEMENT

'ಪೊಲೀಸರನ್ನು ಹೊಡೆಯಿರಿ' ಕೂಗು: ಆಘಾತಕಾರಿ ಸಂಗತಿ ಬಿಚ್ಚಿಟ್ಟ ಗಾಯಾಳು ಪೊಲೀಸರು

ಏಜೆನ್ಸೀಸ್
Published 28 ಜನವರಿ 2021, 2:27 IST
Last Updated 28 ಜನವರಿ 2021, 2:27 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

ನವದೆಹಲಿ: 72ನೇ ಗಣರಾಜ್ಯೋತ್ಸವ ದಿನದಂದು ದೆಹಲಿಯ ಕೆಂಪುಕೋಟೆಯಲ್ಲಿ ನಡೆದ ಗಲಾಟೆಯಲ್ಲಿ ಗಾಯಗೊಂಡಿರುವ ಪೊಲೀಸರು ಸುದ್ದಿಸಂಸ್ಥೆ 'ಪಿಟಿಐ' ಜೊತೆ ತಮ್ಮ ಅನುಭವ ಹಂಚಿಕೊಂಡಿದ್ದಾರೆ.

'ಶಸ್ತ್ರಾಸ್ತ್ರಗಳನ್ನು ಹಿಡಿದ ನೂರಾರು ಪ್ರತಿಭಟನಾಕಾರರು 'ಪೊಲೀಸ್‌ ಕೊ ಮಾರೊ'(ಪೊಲೀಸರನ್ನು ಹೊಡೆಯಿರಿ) ಎಂದು ಕೂಗುತ್ತಾ ಆವರಣಕ್ಕೆ ನುಗ್ಗಿದಾಗ ನಾನು ಕೆಂಪು ಕೋಟೆಯೊಳಗಿದ್ದೆ. ಸುಮಾರು ಐದರಿಂದ ಹತ್ತು ಜನರು ನನ್ನ ಮೇಲೆ ದಾಳಿ ನಡೆಸಿದರು. ನನ್ನನ್ನು ಲಾಠಿಯಿಂದ ಹೊಡೆದರು. ಇತರ ಕೆಲವು ಸಿಬ್ಬಂದಿಗಳೊಂದಿಗೆ ನಾನು ಓಡಿಹೋಗಿ ವಾಶ್ ರೂಮ್‌ ಬಳಿ ಅಡಗಿಕೊಂಡೆ. ಆದರೆ, ಅವರು ಅಲ್ಲಿಗೂ ಬಂದು ಮತ್ತೆ ನಮ್ಮನ್ನು ಹೊಡೆದರು. ನಾವೆಲ್ಲರೂ ಗಾಯಗೊಂಡೆವು. ನಮಗೆ ತೀವ್ರ ಭಯ ಶುರುವಾಯಿತು' ಎಂದು ಉತ್ತರ ದೆಹಲಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಪೊಲೀಸ್‌ ಕಾನ್‌ಸ್ಟೇಬಲ್ ಸಂದೀಪ್‌ ತಮ್ಮ ಹೇಳಿಕೆ ದಾಖಲಿಸಿದ್ದಾರೆ.

ದೆಹಲಿಯ ತೀರ್ಥ್‌ ರಾಮ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸಂದೀಪ್‌ ಅವರ ಬೆನ್ನು, ಕೈ ಮತ್ತು ಹೊಟ್ಟೆಗೆ ಗಾಯಗಳಾಗಿವೆ.

ADVERTISEMENT

ಇದೇ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಹೆಡ್ ಕಾನ್‌ಸ್ಟೆಬಲ್ ಪಂಜಾಬ್ ಸಿಂಗ್ ಅವರ ಹಣೆ ಮತ್ತು ತಲೆಗೆ ಗಾಯಗಳಾಗಿವೆ.

ಕೆಂಪುಕೋಟೆಯೊಳಗೆ ನುಗ್ಗಿದ್ದ ಪ್ರತಿಭಟನಾಕಾರರನ್ನು ಚದುರಿಸಲು ನಮಗೆ ಆದೇಶ ನೀಡಲಾಗಿತ್ತು ಎಂದಿರುವ ಪಂಜಾಬ್‌ ಸಿಂಗ್‌, 'ಕೋಟೆಯೊಳಗೆ ನುಗ್ಗದಂತೆ ಪ್ರತಿಭಟನಾಕಾರರ ಮನವೊಲಿಸಲು ನಾವು ಪ್ರಯತ್ನಿಸಿದೆವು. ಆದರೆ, ಅವರು ನಮ್ಮ ಮೇಲೆ ಲಾಠಿಗಳಿಂದ ದಾಳಿ ಮಾಡಲು ಪ್ರಾರಂಭಿಸಿದರು. ಆಗ ನಾವು ಓಡಿಹೋಗಲು ಪ್ರಯತ್ನಿಸಿದೆವು. ಅವರು ನಮ್ಮನ್ನು ಬೆನ್ನಟ್ಟಿದರು. ಅವರ ದಾಳಿಯಿಂದ ನನ್ನ ಹಣೆ ಮತ್ತು ತಲೆಗೆ ಗಾಯಗಳಾಗಿವೆ. ನಾನು ನಿಲ್ಲುವ ಸ್ಥಿತಿಯಲ್ಲಿ ಇರಲಿಲ್ಲ. ಕುಸಿದು ನೆಲಕ್ಕೆ ಬಿದ್ದೆ' ಎಂದು ತಿಳಿಸಿದ್ದಾರೆ.

ಜನವರಿ 26ರಂದು ಕೆಂಪು ಕೋಟೆ ಸಮೀಪ ಸೇರಿದ್ದ ಪ್ರತಿಭಟನಾ ನಿರತರಲ್ಲಿ ಕೆಲವು ಮಂದಿ ಕೋಟೆಯ ಗೋಪುರಗಳ ಮೇಲೆ ಏರಿದ್ದರು. ಅನ್ಯ ಬಾವುಟಗಳನ್ನು ಹಾರಿಸಿ ಘೋಷಣೆಗಳನ್ನು ಕೂಗಿದ್ದರು. ಈ ನಡುವೆ, ಕೆಂಪು ಕೋಟೆಯಲ್ಲಿ ಪರಿಸ್ಥಿತಿ ನಿಯಂತ್ರಿಸಲು ನಿಯೋಜನೆಯಾಗಿದ್ದ ಪೊಲೀಸರೊಂದಿಗೆ ಪ್ರತಿಭಟನಾಕಾರರು ಘರ್ಷಣೆಗೆ ಇಳಿದಿದ್ದರು.

ಪೊಲೀಸರಿಗೇ ಲಾಠಿ ಬೀಸಿದ ಗುಂಪೊಂದು, ಅವರಿಗೆ ಸ್ಥಳದಿಂದ ಎಲ್ಲೂ ಹೋಗಲು ಸಾಧ್ಯವಾಗದಂತೆ ಇಕ್ಕಟ್ಟಿಗೆ ಸಿಲುಕಿಸಿದ್ದರು. ಮನಸ್ಸಿಗೆ ಬಂದಂತೆ ಲಾಠಿ ಬೀಸುತ್ತಿದ್ದ ಗುಂಪು ದೊಡ್ಡದಾಗುತ್ತಿದ್ದಂತೆ ಪೊಲೀಸರು ತಪ್ಪಿಸಿಕೊಳ್ಳಲು ಎತ್ತರದ ಗೋಡೆಯಿಂದ ಕೆಳಕ್ಕೆ ಜಿಗಿದಿದ್ದರು. ಇನ್ನೂ ಕೆಲವರು ಜಿಗಿಯಲೂ ಆಗದೆ, ಹೊಡೆತದಿಂದ ತಪ್ಪಿಸಿಕೊಳ್ಳಲು ಆಗದ ಸ್ಥಿತಿಯಲ್ಲಿ ಸಿಲುಕಿದ್ದರು. ಹೇಗೋ ಗೇಟ್‌ ತೆರೆದ ಪೊಲೀಸ್‌ ಸಿಬ್ಬಂದಿ ಅಲ್ಲಿಂದ ಮುಂದೆ ಓಡಿರುವುದು ವಿಡಿಯೊದಲ್ಲಿ ದಾಖಲಾಗಿತ್ತು.

ದೆಹಲಿಯಲ್ಲಿ ರೈತರ ‘ಟ್ರ್ಯಾಕ್ಟರ್ ರ‍್ಯಾಲಿ‘ ವೇಳೆ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ದೆಹಲಿ ಪೊಲೀಸರು 22 ಎಫ್‌ಐಆರ್ ದಾಖಲಿಸಿದ್ದಾರೆ.

‘ಈ ಘಟನೆಯಲ್ಲಿ 300ಕ್ಕೂ ಹೆಚ್ಚು ಪೊಲೀಸರು ಗಾಯಗೊಂಡಿದ್ದಾರೆ. ಇಲ್ಲಿವರೆಗೂ 22 ಎಫ್‌ಐಆರ್‌ಗಳನ್ನು ದಾಖಲಿಸಲಾಗಿದೆ‘ ಎಂದು ದೆಹಲಿ ಪೊಲೀಸ್‌ನ ಹೆಚ್ಚುವರಿ ಪಿಆರ್‌ಒ ಅನಿಲ್ ಮಿತ್ತಲ್‌ ತಿಳಿಸಿದ್ದಾರೆ.

ಇವುಗಳನ್ನೂ ಓದಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.