ADVERTISEMENT

ದೆಹಲಿಗೆ ಬೇಕು ಶೀಲಾ ಅಭಿವೃದ್ಧಿ, ಮೋದಿ-ಕೇಜ್ರಿವಾಲ್ ಸುಳ್ಳು ಪ್ರಚಾರವಲ್ಲ: ರಾಹುಲ್

ಪಿಟಿಐ
Published 23 ಜನವರಿ 2025, 12:32 IST
Last Updated 23 ಜನವರಿ 2025, 12:32 IST
<div class="paragraphs"><p>ರಾಹುಲ್ ಗಾಂಧಿ</p></div>

ರಾಹುಲ್ ಗಾಂಧಿ

   

(ಪಿಟಿಐ ಚಿತ್ರ)

ನವದೆಹಲಿ: ದೆಹಲಿಗೆ ಈಗ ನಿಜವಾದ ಅಭಿವೃದ್ಧಿ ಮಾದರಿಯೊಂದರ ಅಗತ್ಯವಿದೆ. ಶೀಲಾ ದೀಕ್ಷಿತ್ ಮುಖ್ಯಮಂತ್ರಿಯಾಗಿದ್ದಾಗ ಅಂತಹ ಮಾದರಿ ಇತ್ತು. ಪ್ರಧಾನಿ ನರೇಂದ್ರ ಮೋದಿ ಹಾಗೂ ಎಎಪಿ ಮುಖಂಡ ಅರವಿಂದ ಕೇಜ್ರಿವಾಲ್ ಅವರ 'ಸುಳ್ಳು ಪ್ರಚಾರ' ಹಾಗೂ 'ಪಿಆರ್ ಮಾದರಿ' ದೆಹಲಿಗೆ ಬೇಕಿಲ್ಲ ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಹೇಳಿದರು. 

ADVERTISEMENT

ಹಲವು ಸಮಸ್ಯೆಗಳಿಗೆ ಬೆಳಕು ಬೀರುವಂತಹ ತುಣುಕುಗಳಿರುವ ವಿಡಿಯೊವನ್ನು ರಾಹುಲ್ ಗಾಂಧಿ ಫೇಸ್‌ಬುಕ್‌ನಲ್ಲಿ ಹಂಚಿಕೊಂಡಿದ್ದಾರೆ. 

‘ಕಳಪೆ ಮೂಲಸೌಕರ್ಯ, ದೂಳು, ಹಣದುಬ್ಬರ, ನಿರುದ್ಯೋಗ, ಮಾಲಿನ್ಯ, ಭ್ರಷ್ಟಾಚಾರ–ಇವೆಲ್ಲವೂ ದೆಹಲಿ ಜನರ ಎದುರಲ್ಲಿರುವ ಸತ್ಯಗಳು’ ಎಂದು ಹಿಂದಿಯಲ್ಲಿ ಪೋಸ್ಟ್‌ ಬರೆದು, ಅದಕ್ಕೆ ವಿಡಿಯೊ ಲಗತ್ತಿಸಿ ಅವರು ಹಂಚಿಕೊಂಡಿದ್ದಾರೆ. 

ದೆಹಲಿಯ ಸದರ್ ಬಜಾರ್ ಕ್ಷೇತ್ರದಲ್ಲಿ ಬುಧವಾರ ರಾಹುಲ್ ಅವರು ಕಾಂಗ್ರೆಸ್ ಪ್ರವಾರ ರ‍್ಯಾಲಿಯಲ್ಲಿ ಭಾಷಣ ಮಾಡಬೇಕಿತ್ತು. ಅನಾರೋಗ್ಯದ ಕಾರಣ ಅವರ ಭಾಷಣದ ವಿಡಿಯೊ ತುಣುಕನ್ನು ಅಲ್ಲಿ ಪ್ರಸಾರ ಮಾಡಲಾಗಿತ್ತು. ಬೆಳಗಾವಿಯಲ್ಲಿ ನಡೆದ ‘ಜೈ ಬಾಪು, ಜೈ ಭೀಮ್, ಜೈ ಸಂವಿಧಾನ’ ಕಾಂಗ್ರೆಸ್ ಅಧಿವೇಶನಕ್ಕೂ ಅವರಿಗೆ ಹೋಗಲು ಸಾಧ್ಯವಾಗಿರಲಿಲ್ಲ. 

‘ದಲಿತರು, ಬುಡಕಟ್ಟು ಜನಾಂಗದವರು, ಹಿಂದುಳಿದವರು, ಅಲ್ಪಸಂಖ್ಯಾತರಿಗೆ ಸಲ್ಲಬೇಕಾದುದನ್ನು ದೊರೆಯದಂತೆ ಮಾಡುವ ವಿಷಯದಲ್ಲಿ ನರೇಂದ್ರ ಮೋದಿ, ಕೇಜ್ರಿವಾಲ್ ಇಬ್ಬರಿಗೂ ಯಾವ ವ್ಯತ್ಯಾಸವೂ ಇಲ್ಲ’ ಎಂದು ಈ ತಿಂಗಳ ಪ್ರಾರಂಭದಲ್ಲೇ ರಾಹುಲ್ ಟೀಕೆ ಮಾಡಿದ್ದರು. 

ಶೀಲಾ ದೀಕ್ಷಿತ್ ಅವರು ಮುಖ್ಯಮಂತ್ರಿಯಾಗಿ ಮೂರು ವರ್ಷಗಳಲ್ಲಿ ಮಾಡಿದ ಅಭಿವೃದ್ಧಿ ಕಾರ್ಯಗಳನ್ನು ಯಾವ ಸರ್ಕಾರವೂ ದೆಹಲಿಯಲ್ಲಿ ಮಾಡಿಲ್ಲ ಎಂದೂ ರಾಹುಲ್ ಪ್ರತಿಪಾದಿಸಿದ್ದಾರೆ. 

ದೆಹಲಿಯ ವಿಶ್ವದರ್ಜೆಯ ಮೂಲಸೌಕರ್ಯವನ್ನು ನಾಶಪಡಿಸಿರುವ ಎಎಪಿ ಕಸದ ರಾಶಿಯನ್ನಾಗಿ ಅದನ್ನು ಪರಿವರ್ತಿಸಿದೆ
ಪವನ್ ಖೇರಾ ಕಾಂಗ್ರೆಸ್ ಮುಖಂಡ
ಮುಂದಿನ ಐದು ವರ್ಷಗಳಲ್ಲಿ ದೆಹಲಿಯಲ್ಲಿ ನಿರುದ್ಯೋಗ ಸಮಸ್ಯೆಯನ್ನು ಸಂಪೂರ್ಣವಾಗಿ ಬಗೆಹರಿಸುತ್ತೇವೆ. ಅದನ್ನು ಈಡೇರಿಸುವ ಮಾರ್ಗಗಳು ಎಎಪಿಗೆ ಗೊತ್ತಿದೆ
ವಿಡಿಯೊ ಸಂದೇಶದಲ್ಲಿ ಅರವಿಂದ ಕೇಜ್ರಿವಾಲ್ ಎಎಪಿ ಮುಖಂಡ

ನೀತಿ ಸಂಹಿತೆ ಉಲ್ಲಂಘನೆ: 500ಕ್ಕೂ ಹೆಚ್ಚು ಪ್ರಕರಣ

ದೆಹಲಿಯಲ್ಲಿ ವಿಧಾನಸಭಾ ಚುನಾವಣೆ ಹೊಸ್ತಿಲಲ್ಲಿ ಇರುವಾಗ ಇದುವರೆಗೆ ನೀತಿ ಸಂಹಿತೆ ಉಲ್ಲಂಘನೆಯ 500ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ ಎಂದು ಅಧಿಕಾರಿಯೊಬ್ಬರು ಗುರುವಾರ ಹೇಳಿಕೆಯಲ್ಲಿ ತಿಳಿಸಿದ್ದಾರೆ.  ಅಬಕಾರಿ ಕಾಯ್ದೆ ಉಲ್ಲಂಘನೆಯೂ ಸೇರಿ ಜನವರಿ 7ರಿಂದ 22ರ ಅವಧಿಯಲ್ಲಿ ವಿವಿಧ ಪ್ರಕರಣಗಳಲ್ಲಿ 17879 ಮಂದಿಯನ್ನು ಬಂಧಿಸಲಾಗಿದೆ. ₹1.3 ಕೋಟಿ ಮೊತ್ತದ 44265 ಲೀಟರ್ ಮದ್ಯ ವಶಪಡಿಸಿಕೊಳ್ಳಲಾಗಿದೆ. ₹4.56 ಕೋಟಿ ನಗದನ್ನು ವಶಪಡಿಸಿಕೊಳ್ಳಲಾಗಿದೆ ಎಂದೂ ಮಾಹಿತಿ ನೀಡಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.