ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ‘ಭಾರತ್ ಶೃಂಗ – 2025’ರಲ್ಲಿ ಮಾತನಾಡಿದರು.
–ಪಿಟಿಐ ಚಿತ್ರ
ಹೈದರಾಬಾದ್: ಪ್ರಜಾತಾಂತ್ರಿಕ ರಾಜಕಾರಣವು ಜಗತ್ತಿನ ಎಲ್ಲೆಡೆ ಬದಲಾವಣೆ ಕಂಡಿದೆ, ದಶಕದ ಹಿಂದೆ ಅನ್ವಯವಾಗುತ್ತಿದ್ದ ನಿಯಮಗಳು ಈಗ ಅಪ್ರಸ್ತುತವಾಗಿವೆ ಎಂದು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.
‘ಭಾರತ್ ಶೃಂಗ – 2025’ರಲ್ಲಿ ಮಾತನಾಡಿದ ಅವರು, ಇಂದಿನ ಆಕ್ರಮಣಕಾರಿ ರಾಜಕೀಯ ಸನ್ನಿವೇಶದಲ್ಲಿ ವಿರೋಧ ಪಕ್ಷಗಳನ್ನು ಹೊಸಕಿಹಾಕುವ ಹಾಗೂ ಮಾಧ್ಯಮಗಳನ್ನು ದುರ್ಬಲಗೊಳಿಸುವ ಗುರಿಯನ್ನು ಕೆಲವರು ಇರಿಸಿಕೊಂಡಿದ್ದಾರೆ ಎಂದು ಹೇಳಿದ್ದಾರೆ.
‘ಭಾರತ್ ಜೋಡೊ ಯಾತ್ರೆ’ ಅನುಭವಗಳನ್ನು ನೆನಪಿಸಿಕೊಂಡ ರಾಹುಲ್ ಅವರು, ಜನರ ಧ್ವನಿಗೆ ಕಿವಿಗೊಡಲು ರಾಜಕಾರಣಿಗಳು ವಿಫಲರಾಗಿದ್ದಾರೆ ಎಂಬುದನ್ನು ತಾವು ಅರ್ಥ ಮಾಡಿಕೊಂಡಿದ್ದಾಗಿ ಹೇಳಿದರು.
‘ಹಳೆಯ ಮಾದರಿಯ ರಾಜಕಾರಣಿ ಇನ್ನಿಲ್ಲವಾಗಿದ್ದಾನೆ. ಹೊಸ ಬಗೆಯ ರಾಜಕಾರಣಿಯನ್ನು ನಾವು ಸೃಷ್ಟಿಸಬೇಕಿದೆ’ ಎಂದರು.
‘ಭಾರತ್ ಜೋಡೊ ಯಾತ್ರೆ’ಯು ತಾವು ಜನರ ಜೊತೆ ಹೊಂದಿರುವ ಸಂಪರ್ಕದಲ್ಲಿ ಬದಲಾವಣೆ ತಂದಿತು ಎಂದು ಅವರು ಹೇಳಿದರು. ಯಾತ್ರೆಯ ನಂತರದಲ್ಲಿ ತಮಗೆ ಜನರ ಜೊತೆ ಸಂವಾದ ನಡೆಸುವುದು ಸುಲಭವಾಯಿತು ಎಂದರು.
ತಮ್ಮ ವಿರೋಧಿಗಳು ಜಗತ್ತನ್ನು ಭೀತಿ, ಸಿಟ್ಟು ಮತ್ತು ದ್ವೇಷದ ಕನ್ನಡಕದ ಮೂಲಕ ಕಾಣುತ್ತಿದ್ದರೆ ತಾವು ಜಗತ್ತನ್ನು ಪ್ರೀತಿ ಮತ್ತು ಮಮತೆಯ ಮೂಲಕ ಕಾಣುತ್ತಿರುವುದಾಗಿ ಹೇಳಿದರು. ‘ಭಾರತ್ ಶೃಂಗ’ವನ್ನು ತೆಲಂಗಾಣ ಸರ್ಕಾರ ಆಯೋಜಿಸಿದೆ.
ಅಂತರರಾಷ್ಟ್ರೀಯ ಮಟ್ಟದ ಈ ಕಾರ್ಯಕ್ರಮದಲ್ಲಿ 100ಕ್ಕೂ ಹೆಚ್ಚು ದೇಶಗಳ 450ಕ್ಕೂ ಹೆಚ್ಚು ಪ್ರತಿನಿಧಿಗಳು ಭಾಗಿಯಾಗಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.