ADVERTISEMENT

ಮುಂಬೈಗೆ ಮತ್ತೊಂದು ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: DGCA, AAI ಪರಿಶೀಲನೆ

ಪಿಟಿಐ
Published 26 ಫೆಬ್ರುವರಿ 2025, 16:02 IST
Last Updated 26 ಫೆಬ್ರುವರಿ 2025, 16:02 IST
<div class="paragraphs"><p>ನವಿ ಮುಂಬೈನ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ ವಿಮಾನಕ್ಕೆ ನೀಡಲಾದ ಜಲ ಫಿರಂಗಿ ಸಲಾಂ</p></div>

ನವಿ ಮುಂಬೈನ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ ವಿಮಾನಕ್ಕೆ ನೀಡಲಾದ ಜಲ ಫಿರಂಗಿ ಸಲಾಂ

   

ಎಕ್ಸ್ ಚಿತ್ರ

ಠಾಣೆ: ನವಿ ಮುಂಬೈನ 1,160 ಹೆಕ್ಟೇರ್ ಪ್ರದೇಶದಲ್ಲಿ ನಿರ್ಮಿಸಲಾಗಿರುವ ನೂತನ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ನಿರ್ಮಾಣ ಕಾರ್ಯ ಪೂರ್ಣಗೊಂಡಿದ್ದು, ವಾಣಿಜ್ಯ ಬಳಕೆ ಆರಂಭಿಸುವ ನಿಟ್ಟಿನಲ್ಲಿ ನಾಗರಿಕ ವಿಮಾನಯಾನ ಮಹಾ ನಿರ್ದೇಶನಾಲಯ (DGCA) ಹಾಗೂ ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರದ (AAI) ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ.‌

ADVERTISEMENT

ವಿಮಾನ ನಿಲ್ದಾಣ ಕಾರ್ಯಾಚರಣೆಗೆ ಸಿದ್ಧವಿದೆಯೇ ಎಂಬುದನ್ನು ಪರಿಶೀಲಿಸಲು ಡಿಜಿಸಿಎ ಮಹಾ ನಿರ್ದೇಶಕ ಫಯಾಜ್ ಅಹ್ಮದ್ ಕಿದ್ವಾಯಿ ಅವರು ನವಿ ಮುಂಬೈ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಭೇಟಿ ನೀಡಿದ್ದರು. ಇದಕ್ಕೂ ಪೂರ್ವದಲ್ಲಿ 2024ರ ಅ. 11ರಂದು ಭಾರತೀಯ ವಾಯು ಸೇನೆಯ ಸರಕು ಸಾಗಣೆ ವಿಮಾನವು ಇಲ್ಲಿ ಪರೀಕ್ಷಾರ್ಥ ಲ್ಯಾಂಡಿಂಗ್ ನಡೆಸಿತ್ತು. ಅದು ಯಶಸ್ವಿಯಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ರನ್‌ವೇ, ನೆಲಗಟ್ಟು, ಟ್ಯಾಕ್ಸಿ ಮಾರ್ಗ, ಎಟಿಸಿ ಗೋಪುರ, ಟರ್ಮಿನಲ್ ಕಟ್ಟಡ, ಬ್ಯಾಗೇಜ್‌ ನಿರ್ವಹಣಾ ವ್ಯವಸ್ಥೆ ಮತ್ತು ಪ್ರಮುಖ ಮೂಲಸೌಕರ್ಯಗಳನ್ನು ಅಧಿಕಾರಿಗಳು ಪರಿಶೀಲಿಸಿದ್ದಾರೆ. ಈ ಸಂದರ್ಭದಲ್ಲಿ ಪ್ರಯೋಗಾರ್ಥ ಬೋರ್ಡಿಂಗ್ ಪಾಸ್‌ಗಳನ್ನು ನೀಡಿ, ಬ್ಯಾಗೇಜ್‌ ಟ್ಯಾಗ್‌ಗಳನ್ನು ನೀಡುವುದರಿಂದ ವಿಮಾನ ನಿಲ್ದಾಣದಲ್ಲಿ ನಿರ್ವಹಿಸುವ ಪ್ರತಿಯೊಂದು ಕಾರ್ಯಚಟುವಟಿಕೆಗಳನ್ನೂ ನಡೆಸಲಾಯಿತು. ಈ ಎಲ್ಲಾ ಹಂತಗಳ ಕುರಿತೂ ತಂಡ ತೃಪ್ತಿ ವ್ಯಕ್ತಪಡಿಸಿತು ಎಂದು ತಿಳಿಸಿದ್ದಾರೆ.

ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ್‌ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಮೇಲಿನ ಒತ್ತಡ ತಗ್ಗಿಸುವ ನಿಟ್ಟಿನಲ್ಲಿ ನಿರ್ಮಾಣಗೊಂಡಿರುವ ನವಿ ಮುಂಬೈ ವಿಮಾನ ನಿಲ್ದಾಣವು ವಾರ್ಷಿಕ 2 ಕೋಟಿ ಪ್ರಯಾಣಿಕರು ಸುಮಾರು 8 ಲಕ್ಷ ಟನ್‌ ಸರಕು ನಿರ್ವಹಣೆಯ ಸಾಮರ್ಥ್ಯವನ್ನು ಹೊಂದಿದೆ. 

ಮುಂಬೈನ ಕೇಂದ್ರ ಭಾಗದಲ್ಲಿರುವ ಈ ವಿಮಾನ ನಿಲ್ದಾಣಕ್ಕೆ ರಸ್ತೆ ಸಾರಿಗೆ, ಉಪನಗರ ರೈಲು, ಮೆಟ್ರೊ ಹಾಗೂ ಜಲ ಮಾರ್ಗದ ಮೂಲಕವೂ ಸಂಪರ್ಕ ಕಲ್ಪಿಸುವ ಯೋಜನೆಯನ್ನು ವಿಮಾನ ನಿಲ್ದಾಣ ನಿರ್ಮಾಣ ಸಂಸ್ಥೆ ಹೊಂದಿದೆ. ಜತೆಗೆ ಮುಂಬೈ ಹಾಗೂ ಹೈದರಾಬಾದ್‌ ಅತಿ ವೇಗದ ರೈಲು ಮಾರ್ಗದ ಪ್ರಸ್ತಾವವನ್ನೂ ಸಲ್ಲಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.