ADVERTISEMENT

ಜನರು ರಸ್ತೆಯಲ್ಲೂ ಓಡಾಡಲಾಗದ ಸ್ಥಿತಿ: ಪೆಟ್ರೋಲ್ ದರ ಏರಿಕೆಗೆ ಪ್ರಿಯಾಂಕಾ ಟೀಕೆ

ಪಿಟಿಐ
Published 18 ಅಕ್ಟೋಬರ್ 2021, 8:24 IST
Last Updated 18 ಅಕ್ಟೋಬರ್ 2021, 8:24 IST
ಪ್ರಿಯಾಂಕಾ ಗಾಂಧಿ
ಪ್ರಿಯಾಂಕಾ ಗಾಂಧಿ   

ನವದೆಹಲಿ (ಪಿಟಿಐ): ಪೆಟ್ರೋಲ್, ಡೀಸೆಲ್‌ ದರ ಏರಿಕೆಯ ಸಂಬಂಧ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿರುವ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ, ದರ ತೀವ್ರ ಏರಿಕೆಯಿಂದಾಗಿ ಮಧ್ಯಮವರ್ಗದ ಜನರು ರಸ್ತೆಯಲ್ಲಿ ಸಂಚರಿಸುವುದು ದುಸ್ತರವಾಗಿದೆ ಎಂದು ಹೇಳಿದ್ದಾರೆ.

ಹವಾಯಿ ಚಪ್ಪಲಿಯನ್ನು ಧರಿಸಿರುವವರೂ ವಿಮಾನದಲ್ಲಿ ಪ್ರಯಾಣಿಸುವಂತೆ ಮಾಡುವ ಭರವಸೆಯನ್ನು ನೀಡಲಾಗಿತ್ತು. ಆದರೆ, ಈಗ ಮಧ್ಯಮವರ್ಗದ ಜನರಿಗೂ ರಸ್ತೆಯಲ್ಲಿ ಚಲಿಸಲಾಗದ ಸ್ಥಿತಿಯನ್ನು ತರಲಾಗಿದೆ ಎಂದು ಟೀಕಿಸಿದ್ದಾರೆ.

ವಿಮಾನಗಳಿಗೆ ಬಳಸುವ ಎಟಿಎಫ್‌ ತೈಲದ ದರಕ್ಕಿಂತಲೂ ಪೆಟ್ರೋಲ್, ಡೀಸೆಲ್‌ ದರ ಈಗ ಮೂರು ಪಟ್ಟು ಹೆಚ್ಚಾಗಿದೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯೂ ಆದ ಅವರು ಹೇಳಿದ್ದಾರೆ.

ADVERTISEMENT

ಬಿಜೆಪಿ ಭರವಸೆ ಕುರಿತಂತೆ ಮಾಧ್ಯಮ ವರದಿಯ ಜೊತೆಗೆ ಟ್ವೀಟ್ ಮಾಡಿರುವ ಅವರು, ‘ಬಿಜೆಪಿಯು ದುಬಾರಿ ದಿನಗಳನ್ನು ತಂದಿಟ್ಟಿದೆ’ ಎಂದು ವ್ಯಂಗ್ಯಮಾಡಿದ್ದಾರೆ. ಪೆಟ್ರೋಲ್‌, ಡೀಸೆಲ್‌ ದರವನ್ನು ಭಾನುವಾರ ಲೀಟರಿಗೆ 35 ಪೈಸೆ ಏರಿಸಲಾಗಿತ್ತು.

ಇದರ ಪರಿಣಾಮ, ದ್ವಿಚಕ್ರ ವಾಹನ ಮತ್ತು ಕಾರುಗಳಿಗೆ ಬಳಸುವ ಪೆಟ್ರೋಲ್‌ದರವು, ವಿಮಾನಗಳಿಗೆ ಬಳಸುವ ಎಟಿಎಫ್‌ ತೈಲಕ್ಕಿಂತಲೂ ಶೇ 33ರಷ್ಟು ಅಧಿಕವಾಗಿದೆ. ದೆಹಲಿಯಲ್ಲಿ ಎಟಿಎಫ್‌ ತೈಲ ಲೀಟರಿಗೆ ₹ 79 ಇದ್ದರೆ, ಪೆಟ್ರೋಲ್‌ ದರ ಲೀಟರಿಗೆ ₹ 105.84 ರೂಪಾಯಿ ಆಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.