ಕಿರಣ್ ರಿಜಿಜು, ಡಿ.ಕೆ. ಶಿವಕುಮಾರ್
ನವದೆಹಲಿ: ‘ಮುಸ್ಲಿಮರಿಗೆ ಧರ್ಮಾ ಧಾರಿತ ಮೀಸಲಾತಿ ನೀಡಲು ಸಂವಿಧಾನ ಬದಲಾವಣೆ ಮಾಡ್ತೀವಿ’ ಎಂಬುದಾಗಿ ಕರ್ನಾಟಕದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದ್ದಾರೆಂದು ಆರೋಪಿಸಿ ಸಂಸತ್‌ನ ಉಭಯ ಸದನಗಳಲ್ಲಿ ಆಡಳಿತರೂಢ ಬಿಜೆಪಿಯ ಸದಸ್ಯರು ಸೋಮವಾರ ಭಾರಿ ಗದ್ದಲ ಎಬ್ಬಿಸಿದರು. ಕಲಾಪ ಸ್ಥಗಿತಗೊಳಿಸಲು ಬಿಜೆಪಿಯು ‘ನಕಲಿ ವಿಷಯ’ವನ್ನು ಎತ್ತುತ್ತಿದೆ ಎಂದು ಕಾಂಗ್ರೆಸ್ ಸದಸ್ಯರು ಪ್ರತ್ಯಾರೋಪ ಮಾಡಿ ಪ್ರತಿಭಟಿಸಿದರು.
ಗದ್ದಲದ ನಡುವೆಯೇ ಲೋಕಸಭೆಯು ತಿದ್ದುಪಡಿ ಮಾಡಿರುವ ಮಸೂದೆಗಳಿಗೆ ರಾಜ್ಯಸಭೆಯಲ್ಲಿ
ಅಂಗೀಕಾರ ನೀಡಲಾಯಿತು. ಬಳಿಕ ಕಲಾಪವನ್ನು ಮಂಗಳವಾರಕ್ಕೆ ಮುಂದೂಡಲಾಯಿತು. ಇದೇ ವಿಷಯಕ್ಕೆ ಸಂಬಂಧಿಸಿತೆ ಲೋಕಸಭೆಯಲ್ಲಿ ಬೆಳಿಗ್ಗೆ ಎರಡು ಬಾರಿ ಕಲಾಪ ಮುಂದೂಡಿಕೆಯಾಯಿತು.
ಉಭಯ ಸದನಗಳಲ್ಲಿ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ವಿಷಯ ಪ್ರಸ್ತಾಪಿಸಿದರು. ಶಿವಕುಮಾರ್ ಅವರ ವಿರುದ್ಧ ಹರಿಹಾಯ್ದರು.
‘ಮುಸ್ಲಿಮರಿಗೆ ಮೀಸಲಾತಿ ನೀಡಲು ಸಂವಿಧಾನ ಬದಲಾವಣೆ ಮಾಡುವುದಾಗಿ ಸಾಂವಿಧಾನಿಕ ಹುದ್ದೆಯಲ್ಲಿರುವ ಕಾಂಗ್ರೆಸ್ ನಾಯಕರೊಬ್ಬರು ಹೇಳಿಕೆ ನೀಡಿದ್ದಾರೆ. ಇದನ್ನು ಒಪ್ಪಲು ಸಾಧ್ಯವಿಲ್ಲ’ ಎಂದು ಅವರು ಹೇಳಿದರು.
ಕಾಂಗ್ರೆಸ್ ಸಂಸದರ ಪ್ರತಿಭಟನೆಯ ನಡುವೆ, ರಾಜ್ಯಸಭೆಯಲ್ಲಿ ಸದನದ ನಾಯಕ ಜೆ.ಪಿ.ನಡ್ಡಾ, ‘ಸಂವಿಧಾನವನ್ನು ಕಾಂಗ್ರೆಸ್ ಪಕ್ಷವು ತುಂಡು ತುಂಡಾಗಿ ಹರಿದು ಹಾಕುತ್ತಿದೆ. ಧರ್ಮದ ಆಧಾರದಲ್ಲಿ ಮೀಸಲಾತಿ ನೀಡಲು ಸಾಧ್ಯವಿಲ್ಲ ಎಂದು ಸಂವಿಧಾನ ರಚನೆಯ ಸಂದರ್ಭದಲ್ಲೇ ಬಿ.ಆರ್. ಅಂಬೇಡ್ಕರ್ ಸ್ಪಷ್ಟಪಡಿಸಿದ್ದಾರೆ’ ಎಂದರು.
‘ನಿಮ್ಮ ಬೇಡಿಕೆ ಏನು’ ಎಂದು ರಾಜ್ಯಸಭಾ ಸಭಾಪತಿ ಜಗದೀಪ್ ಧನಕರ್ ಅವರು ನಡ್ಡಾ ಅವರನ್ನು ಪ್ರಶ್ನಿಸಿದರು. ‘ಸರ್ಕಾರಿ ಗುತ್ತಿಗೆಗಳಲ್ಲಿ ಮುಸ್ಲಿಮರಿಗೆ ನೀಡಿರುವ ಮೀಸಲಾತಿಯನ್ನು ಹಿಂಪಡೆಯಬೇಕು ಹಾಗೂ ಈ ಸಂಬಂಧ ಕಾಂಗ್ರೆಸ್ ಅಧ್ಯಕ್ಷರೂ ಆಗಿರುವ ವಿರೋಧ ಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ
ಪ್ರತಿಕ್ರಿಯಿಸಬೇಕು’ ಎಂದು ನಡ್ಡಾ ಆಗ್ರಹಿಸಿದರು.
ಎನ್‌ಡಿಎ ಸದಸ್ಯರು ಕಾಂಗ್ರೆಸ್ ವಿರುದ್ಧ ಘೋಷಣೆಗಳನ್ನು ಕೂಗಿದರು. ಗಲಾಟೆ ಜಾಸ್ತಿಯಾದ ಕಾರಣ ಧನಕರ್ ಅವರು ಕಲಾಪವನ್ನು ಮಧ್ಯಾಹ್ನ 2ಕ್ಕೆ ಮುಂದೂಡಿದರು. ಬಳಿಕ ಕಲಾಪ ಪುನರಾರಂಭಗೊಂಡಾಗ, ಸಚಿವರು ತಮ್ಮ ಹೇಳಿಕೆಗಳಿಗೆ ಕ್ಷಮೆಯಾಚಿಸಬೇಕು ಎಂದು ಕಾಂಗ್ರೆಸ್ ಸದಸ್ಯ ರಣದೀಪ್ ಸಿಂಗ್ ಸುರ್ಜೇವಾಲಾ ಆಗ್ರಹಿಸಿದರು. ದೆಹಲಿ ಹೈಕೋರ್ಟ್ ನ್ಯಾಯಮೂರ್ತಿ ಮನೆಯಲ್ಲಿ ಭಾರಿ ಪ್ರಮಾಣದಲ್ಲಿ ನಗದು ಪತ್ತೆಯಾದ ವಿಷಯ ಎತ್ತದಂತೆ ತಡೆಯಲು ಬಿಜೆಪಿ ಬಯಸಿದೆ ಎಂದು ವಿರೋಧ ಪಕ್ಷಗಳ ಸದಸ್ಯರು ದೂರಿದರು.
‘ಸಂವಿಧಾನ ಬದಲಾವಣೆ ಮಾಡುವುದಾಗಿ ಶಿವಕುಮಾರ್ ಹೇಳಿಕೆ ನೀಡಿಯೇ ಇಲ್ಲ’ ಎಂದು ಖರ್ಗೆ ಸ್ಪಷ್ಟಪಡಿಸಿದರು. ‘ಇಂತಹ ಹೇಳಿಕೆಗಳು ಇನ್ನೊಂದು ಕಡೆಯಿಂದ ಬರುತ್ತವೆ. ಆರ್‌ಎಸ್ಎಸ್ ಮುಖ್ಯಸ್ಥ
ಮೋಹನ್ ಭಾಗವತ್ ಹಾಗೆ ಹೇಳಿಕೆ ನೀಡಿಲ್ಲವೇ? ಯಾವುದೇ ಬೆಲೆ ತೆತ್ತಾದರೂ ನಾವು ಸಂವಿಧಾನ ಉಳಿಸುತ್ತೇವೆ. ನ್ಯಾಯಮೂರ್ತಿ ಮನೆಯಲ್ಲಿ ನಗದು ಪತ್ತೆಯಾದ ವಿಷಯವು ಸಂಸತ್‌ನಲ್ಲಿ ಚರ್ಚೆಯಾಗುವುದನ್ನು ತಡೆಯಲು ಬಿಜೆಪಿಯವರು ಈ ವಿಷಯ ಎತ್ತಿದ್ದಾರೆ’ ಎಂದು ವಾಗ್ದಾಳಿ ನಡೆಸಿದರು.
ಇದಕ್ಕೆ ತಿರುಗೇಟು ನೀಡಿದ ನಡ್ಡಾ, ‘ಕರ್ನಾಟಕದಲ್ಲಿ ಮಾತ್ರವಲ್ಲ, ತೆಲಂಗಾಣದಲ್ಲಿಯೂ ಮುಸ್ಲಿಮರಿಗೆ ಮೀಸಲಾತಿ ನೀಡಲು ಕಾಂಗ್ರೆಸ್ ಸರ್ಕಾರ ಮಸೂದೆ ತಂದಿದೆ. ಅಲ್ಪಸಂಖ್ಯಾತ ಸಮುದಾಯವನ್ನು ಒಬಿಸಿಗೆ ಸೇರಿಸುವ ಮೂಲಕ ಕಾಂಗ್ರೆಸ್ ಹಿಂಬಾಗಿಲಿನ ಮೂಲಕ ಮುಸ್ಲಿಮರಿಗೆ ಮೀಸಲಾತಿ ಒದಗಿಸುತ್ತಿದೆ’ ಎಂದು ಆರೋಪಿಸಿದರು. ಪ್ರತಿಭಟನೆ ಮುಂದುವರಿದ ಕಾರಣ ಕಲಾಪವನ್ನು ಮಂಗಳವಾರಕ್ಕೆ ಮುಂದೂಡಲಾಯಿತು.
ಲೋಕಸಭೆಯು ಕಾರ್ಯನಿರ್ವಹಿಸದಂತೆ ನೋಡಿಕೊಳ್ಳಲು ಬಿಜೆಪಿ ನಿರ್ಧರಿಸಿದೆ ಎಂದು ಕಾಂಗ್ರೆಸ್ ಸದಸ್ಯೆ ಪ್ರಿಯಾಂಕಾ ಗಾಂಧಿ ವಾದ್ರಾ ದೂರಿದರು. ರಾಜ್ಯಸಭೆಯ ಕಲಾಪಕ್ಕೆ ಅಡ್ಡಿಪಡಿಸುವ ಮೂಲಕ ಬಿಜೆಪಿ ಹಾಗೂ ಎನ್‌ಡಿಎ ಸಂಸದರು ಕೆಳಮಟ್ಟಕ್ಕೆ ಇಳಿದಿದ್ದಾರೆ ಎಂದು ಟಿಎಂಸಿ ಸದಸ್ಯ ಡೆರೆಕ್ ಒಬ್ರಯಾನ್ ಆರೋಪಿಸಿದರು.
ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಸಂಸದರಾದ ಬಸವರಾಜ ಬೊಮ್ಮಾಯಿ, ವಿಶ್ವೇಶ್ವರ ಹೆಗಡೆ ಕಾಗೇರಿ, ಈರಣ್ಣ ಕಡಾಡಿ, ನಾರಾಯಣಸಾ ಬಾಂಡಗೆ, ರವಿಶಂಕರ ಪ್ರಸಾದ್, ಶಾಸಕ ಬಸನಗೌಡ ಪಾಟೀಲ ಯತ್ನಾಳ ಮತ್ತಿತರರು ಪತ್ರಿಕಾಗೋಷ್ಠಿ ನಡೆಸಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.
ಡಿಕೆಶಿ ಹೇಳಿದ್ದೇನು?
ನವದೆಹಲಿಯಲ್ಲಿ ಭಾನುವಾರ ನಡೆದ ನ್ಯೂಸ್ 18 ಸುದ್ದಿವಾಹಿನಿಯ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಡಿ.ಕೆ. ಶಿವಕುಮಾರ್ ಅವರು ಸುದೀರ್ಘವಾಗಿ ಮಾತನಾಡಿದ್ದರು. ಈ ಭಾಷಣದ 29 ಸೆಕೆಂಡುಗಳ ವಿಡಿಯೊವನ್ನು ಹಂಚಿಕೊಂಡು ಬಿಜೆಪಿ ವಾಗ್ದಾಳಿ ನಡೆಸಿದೆ.
‘ನಾನು ಧರ್ಮದಲ್ಲಿ ನಂಬಿಕೆ ಇಟ್ಟವನಲ್ಲ. ಮಾನವೀಯತೆಯಲ್ಲಿ ನಂಬಿಕೆ ಇಟ್ಟವನು. ಮಾನವ ಧರ್ಮವೇ ಶ್ರೇಷ್ಠ ಎಂದು ನಂಬಿದವನು’ ಎಂದು ಶಿವಕುಮಾರ್ ಹೇಳುತ್ತಾರೆ. ಆಗ, ಸರ್ಕಾರಿ ಗುತ್ತಿಗೆ
ಗಳಲ್ಲಿ ಮುಸ್ಲಿಮರಿಗೆ ಶೇ 4 ಮೀಸಲಾತಿ ನೀಡುವ ಅಗತ್ಯ ಏನಿತ್ತು? ಧರ್ಮಾಧಾರಿತ ಮೀಸಲಾತಿಗೆ ಸಂವಿಧಾನ ಅವಕಾಶ ನೀಡುವುದಿಲ್ಲ ಎಂಬ ಟೀಕೆ ಇದೆಯಲ್ಲ ಎನ್ನುವ ಪ್ರಶ್ನೆಗೆ ಉತ್ತರಿಸಿದ ಶಿವಕುಮಾರ್, ‘ಹೌದು, ನಾನು ಅದನ್ನು ಒಪ್ಪುತ್ತೇನೆ. ನ್ಯಾಯಾಲಯ ಏನು ತೀರ್ಪು ನೀಡುತ್ತದೆ ಎಂಬುದನ್ನು ನೋಡೋಣ. ನಾವು ಏನೋ ಪ್ರಾರಂಭಿಸಿ ದ್ದೇವೆ. ಪ್ರತಿಯೊಬ್ಬರೂ ನ್ಯಾಯಾಲಯಕ್ಕೆ ಹೋಗುತ್ತಾರೆ ಎಂಬುದು ನನಗೆ ಗೊತ್ತು. ಒಳ್ಳೆಯ ದಿನ ಬರಲಿದೆ. ಸಾಕಷ್ಟು ಬದಲಾವಣೆ ಆಗಲಿದೆ. ಸಂವಿಧಾನದಲ್ಲಿ ಬದಲಾವಣೆ ಆಗಲಿದೆ. ನ್ಯಾಯಾಲಯಗಳ ಕೆಲವೊಂದು ತೀರ್ಪುಗಳು ಸಂವಿಧಾನದ ಪರಿಷ್ಕರಣೆ ಮಾಡಿವೆ’ ಎಂದು ಹೇಳಿದ್ದರು.
ಇಂತಹ ಸಂದರ್ಭದಲ್ಲಿ ಸದನ ಮೌನವಾಗಿರಲು ಹೇಗೆ ಸಾಧ್ಯ? ಶಿವಕುಮಾರ್ ಹೇಳಿಕೆ ಬಗ್ಗೆ ಕಾಂಗ್ರೆಸ್ ಸ್ಪಷ್ಟನೆ ನೀಡಬೇಕು ಹಾಗೂ ಅವರನ್ನು ವಜಾಗೊಳಿಸಬೇಕು. ಒಂದು ಕಡೆಯಲ್ಲಿ ಮುಸ್ಲಿಮರಿಗೆ ಮೀಸಲಾತಿ ನೀಡುವುದಾಗಿ ಹೇಳುತ್ತೀರಿ. ಇನ್ನೊಂದು ಕಡೆಯಲ್ಲಿ ಅಂಬೇಡ್ಕರ್ ಭಾವಚಿತ್ರ ಹಾಗೂ ಸಂವಿಧಾನದ ಪ್ರತಿಯನ್ನು ನಿಮ್ಮ ಜೇಬಿನಲ್ಲಿ ಇಟ್ಟುಕೊಂಡು ನಾಟಕವಾಡುತ್ತೀರಿಕಿರಣ್ ರಿಜಿಜು, ಸಂಸದೀಯ ವ್ಯವಹಾರಗಳ ಸಚಿವ
‘ಹೇಳಿಕೆ ತಿರುಚಿದ ಬಿಜೆಪಿಗರು’
ಬೆಂಗಳೂರು: ‘ಸಂವಿಧಾನ ಬದಲಾವಣೆ ಮಾಡುವುದಾಗಿ ಹೇಳಿಲ್ಲ. ನನ್ನ ಹೇಳಿಕೆ ತಿರುಚಿ ಅಪಪ್ರಚಾರ ಮಾಡಲಾಗುತ್ತಿದೆ. ಬಿಜೆಪಿ ವಿರುದ್ಧ ಕಾನೂನು ಹೋರಾಟ ಮಾಡುವೆ’ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು.
ಸುದ್ದಿಗಾರರ ಜತೆ ಸೋಮವಾರ ಮಾತನಾಡಿದ ಅವರು, ‘ವಿವಿಧ ಕೋರ್ಟ್‌ಗಳು ನೀಡಿರುವ ತೀರ್ಪುಗಳ ಪ್ರಕಾರ ತಿದ್ದುಪಡಿ ಮಾಡಿರುವ ನಿದರ್ಶನವಿದೆ ಎಂದು ಸಂದರ್ಶನವೊಂದರಲ್ಲಿ ಹೇಳಿದ್ದೆ, ಸಂವಿಧಾನ ಬದಲಾವಣೆ ಮಾಡುತ್ತೇವೆ ಎಂದು ಹೇಳಿಲ್ಲ. ಹೇಳಿಕೆಯನ್ನು ಬಿಜೆಪಿ ನಾಯಕರು ತಿರುಚಿದ್ದಾರೆ’ ಎಂದು ಆರೋಪಿಸಿದರು.
ಜನರ ದಾರಿ ತಪ್ಪಿಸುತ್ತಿದ್ದಾರೆ. 36 ವರ್ಷಗಳಿಂದ ಶಾಸಕನಾಗಿರುವ ನನಗೆ ಸಾಮಾನ್ಯ ಜ್ಞಾನವಿದೆ. ಇಂತಹ ವಿಚಾರದಲ್ಲಿ ಜೆ.ಪಿ. ನಡ್ಡಾ ಅವರಿಗಿಂತಲೂ ನಾನು ಉತ್ತಮ ಸಂವೇದನೆ ಇರುವ ರಾಜಕಾರಣಿ. ಸುಳ್ಳು ಹೇಳಿಕೆ ಸೃಷ್ಟಿಸಿ, ನನ್ನ ಹೆಸರನ್ನು ಎಳೆದು ತರಲಾಗುತ್ತಿದೆ’ ಎಂದು ಆರೋಪಿಸಿದರು.
‘ಕಾಂಗ್ರೆಸ್ ಸಹ ರಾಷ್ಟ್ರೀಯ ಪಕ್ಷ, ಸಂವಿಧಾನವನ್ನು ಜಾರಿಗೆ ತಂದ ಕಾಂಗ್ರೆಸ್‌ಗೆ ಸಂವಿಧಾನದ ಮಹತ್ವ ಬೇರೆಲ್ಲರಿಗಿಂತ ಚೆನ್ನಾಗಿ ಗೊತ್ತಿದೆ. ಕೇಂದ್ರ ಬಜೆಟ್‌ನಲ್ಲಿ ಏನೂ ಇಲ್ಲದ ಕಾರಣಕ್ಕೆ ಬಿಜೆಪಿ ಇಂತಹ ಇಲ್ಲಸಲ್ಲದ ವಿಚಾರ ಪ್ರಸ್ತಾಪ ಮಾಡುತ್ತಿದೆ. ತನ್ನ ಲೋಪಗಳನ್ನು ಮುಚ್ಚಿಕೊಳ್ಳಲು ಇಂತಹ ಸುಳ್ಳು ವಿಚಾರ ಮುನ್ನೆಲೆಗೆ ತರುತ್ತಿದೆ. ಇದೊಂದು ರಾಜಕೀಯ ಪಿತೂರಿ’ ಎಂದರು.
‘ರಾಜ್ಯದ ಹಿಂದುಳಿದ ವರ್ಗಗಳ ಆಯೋಗದ ವರದಿ ಆಧಾರದ ಮೇಲೆ ಮುಸ್ಲಿಮರಿಗೆ ಶೇ 4ರಷ್ಟು ಮೀಸಲಾತಿ ನೀಡಲಾಗಿದೆ. ಮಹಾರಾಷ್ಟ್ರ, ಹರಿಯಾಣ ಸೇರಿದಂತೆ ಹಲವು ರಾಜ್ಯಗಳ ನ್ಯಾಯಾಲಯಗಳು ನೀಡಿದ ತೀರ್ಪುಗಳ ಆಧಾರದ ಮೇಲೆ ಕೆಲವು ಬದಲಾವಣೆ ಮಾಡಿ ಅವಕಾಶ ನೀಡಲಾಗಿದೆ’ ಎಂದು ಸಮರ್ಥಿಸಿಕೊಂಡರು.
ರಿಜಿಜು, ನಡ್ಡಾ ವಿರುದ್ಧ ಹಕ್ಕುಚ್ಯುತಿ ನೋಟಿಸ್
ಕೇಂದ್ರ ಸಚಿವರಾದ ಜೆ.ಪಿ.ನಡ್ಡಾ ಹಾಗೂ ಕಿರಣ್ ರಿಜಿಜು ಅವರ ವಿರುದ್ಧ ಕಾಂಗ್ರೆಸ್‌ನ ರಾಜ್ಯಸಭೆ ಮುಖ್ಯ ಸಚೇತಕ ಜೈರಾಮ್ ರಮೇಶ್ ಅವರು ಹಕ್ಕುಚ್ಯುತಿ ನೀಡಿದ್ದಾರೆ. ಈ ಸಚಿವರು ಸುಳ್ಳು ಹಾಗೂ ದಾರಿ ತಪ್ಪಿಸುವ ಹೇಳಿಕೆ ನೀಡಿದ್ದಾರೆ ಎಂದೂ ಆರೋಪಿಸಿದ್ದಾರೆ.
ಈ ಸಂಬಂಧ ಜಗದೀಪ್ ಧನಕರ್ ಅವರಿಗೆ ಪತ್ರ ಬರೆದಿರುವ ಜೈರಾಮ್, ‘ನಡ್ಡಾ ಹೇಳಿಕೆ ಸಂಪೂರ್ಣ ಸುಳ್ಳು. ಕಾಂಗ್ರೆಸ್ ನಾಯಕರ ತೇಜೋವಧೆ ಮಾಡುವ ಉದ್ದೇಶದಿಂದ ಈ ಹೇಳಿಕೆ ನೀಡಿದ್ದಾರೆ’ ಎಂದು ದೂರಿದ್ದಾರೆ. ಕೆಲವು ಸುಳ್ಳು ಹೇಳಿಕೆಗಳನ್ನು ಶಿವಕುಮಾರ್ ಮೇಲೆ ಹೊರಿಸುವ ಮೂಲಕ ರಿಜಿಜು ಸದನದ ದಾರಿ ತಪ್ಪಿಸಿದ್ದಾರೆ ಎಂದಿದ್ದಾರೆ.
ಕಾಂಗ್ರೆಸ್‌ನ ಗುಪ್ತ ಕಾರ್ಯಸೂಚಿ ಬಯಲಿಗೆ ಬಂದಿದೆ. ಈ ಬಗ್ಗೆ ಕಾಂಗ್ರೆಸ್ ನಾಯಕರಾದ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಸ್ಪಷ್ಟನೆ ನೀಡಬೇಕುರವಿಶಂಕರ ಪ್ರಸಾದ್, ಬಿಜೆಪಿ ಸಂಸದ
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಸಂವಿಧಾನ ವಿರೋಧಿ ಕೆಲಸ ಮಾಡುತ್ತಿದೆ. ಈ ಸರ್ಕಾರಕ್ಕೆ ಆಡಳಿತ ನಡೆಸಲು ಯಾವುದೇ ನೈತಿಕ ಹಕ್ಕಿಲ್ಲ. ಇಡೀ ಸಂಪುಟವೇ ರಾಜೀನಾಮೆ ನೀಡಬೇಕುಬಸವರಾಜ ಬೊಮ್ಮಾಯಿ, ಸಂಸದ
ರಾಷ್ಟ್ರದ ಉದ್ದಗಲಕ್ಕೂ ಕಾಂಗ್ರೆಸ್ ಮೀಸಲು ಅರಾಜಕತೆ ಸೃಷ್ಟಿಸುತ್ತಿದೆ. ಮೀಸಲು ಧರ್ಮಾಧಾರಿತ ಅಲ್ಲ. ಅದು ಸಾಮಾಜಿಕ ನ್ಯಾಯದ ತಳಹದಿಯ ಮೇಲೆ ನಿಂತಿರಬೇಕುಎಚ್.ಡಿ.ಕುಮಾರಸ್ವಾಮಿ, ಕೇಂದ್ರ ಸಚಿವ
ಅಂಬೇಡ್ಕರ್ ಒದಗಿಸಿರುವ ಸಂವಿಧಾನವನ್ನು ಯಾರೂ ಬದಲಾಯಿಸಲು ಸಾಧ್ಯವಿಲ್ಲ. ಸಂವಿಧಾನವನ್ನು ರಕ್ಷಿಸುವವರು ನಾವುಮಲ್ಲಿಕಾರ್ಜುನ ಖರ್ಗೆ, ರಾಜ್ಯಸಭೆಯ ವಿಪಕ್ಷ ನಾಯಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.