ADVERTISEMENT

ಡಿ.ಕೆ. ಸುರೇಶ್ ಹೇಳಿಕೆ: ಪ್ರಲ್ಹಾದ ಜೋಶಿ ಮೇಲೆ ಶಶಿ ತರೂರ್ ಅಸಮಾಧಾನ

ಸದನದ ಹೊರಗಿನ ವಿಷಯಕ್ಕೆ ಪ್ರಲ್ಹಾದ ಜೋಶಿ ಅವರು ಸದನದ ಸಮಯವನ್ನು ಏಕೆ ಹಾಳು ಮಾಡುತ್ತಿದ್ದಾರೆ? ಎಂದು ಆಕ್ರೋಶ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 2 ಫೆಬ್ರುವರಿ 2024, 9:58 IST
Last Updated 2 ಫೆಬ್ರುವರಿ 2024, 9:58 IST
ಕಾಂಗ್ರೆಸ್ ಸಂಸದ ಶಶಿ ತರೂರ್
ಕಾಂಗ್ರೆಸ್ ಸಂಸದ ಶಶಿ ತರೂರ್   

ಬೆಂಗಳೂರು: ಕಾಂಗ್ರೆಸ್ ಸಂಸದ ಡಿ.ಕೆ. ಸುರೇಶ್ ಅವರ, ‘ದಕ್ಷಿಣಕ್ಕೆ ಪ್ರತ್ಯೇಕ ರಾಷ್ಟ್ರ ಬೇಡಿಕೆ’ ಎಂಬ ಹೇಳಿಕೆ ರಾಷ್ಟ್ರ ಮಟ್ಟದಲ್ಲಿ ವಿವಾದವೆಬ್ಬಿಸಿದೆ.

ಡಿ.ಕೆ ಸುರೇಶ್ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ ಜೋಶಿ ಅವರು ಲೋಕಸಭೆಯಲ್ಲಿ ಹೇಳಿದ್ದರಿಂದ ಕಾಂಗ್ರೆಸ್ ಸಂಸದ ಶಶಿ ತರೂರ್ ತೀವ್ರ ಅಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಶುಕ್ರವಾರ ಎಎನ್‌ಐ ಸುದ್ದಿಸಂಸ್ಥೆ ಜೊತೆ ಮಾತನಾಡಿರುವ ತರೂರ್ ಅವರು, ‘ಇದು ಸಂಸತ್ ವಿಚಾರಕ್ಕೆ ಸಂಬಂಧಿಸಿರದಿದ್ದರೂ ಜೋಶಿ ಅವರು ಸಂಸತ್‌ನಲ್ಲಿ ಏಕೆ ಈ ವಿಷಯವನ್ನು ಪ್ರಸ್ತಾಪಿಸಿದ್ದಾರೆ? ಎಂಬುದು ಅರ್ಥವಾಗುತ್ತಿಲ್ಲ. ಡಿ.ಕೆ ಸುರೇಶ್ ಆ ಮಾತನ್ನು ಸಂಸತ್‌ನಲ್ಲಿ ಆಡಿಲ್ಲ‘ ಎಂದಿದ್ದಾರೆ.

ADVERTISEMENT

‘ಕೇವಲ ಮಾಧ್ಯಮ ವರದಿಗಳನ್ನು ಆಧರಿಸಿ, ಅವುಗಳನ್ನು ಪರಿಶೀಲಿಸದೇ ಜೋಶಿ ಅವರು ಸಂಸತ್‌ನಲ್ಲಿ ಆರ್ಭಟ ತೋರಿಸಿದ್ದಾರೆ. ಅವರ ಆಕ್ಷೇಪದ ಹೇಳಿಕೆಗಳು ಸಂಸತ್‌ನಲ್ಲಿ ಸ್ವೀಕಾರ್ಹವಲ್ಲ. ಅವರು ಏಕೆ ಸದನದ ಸಮಯವನ್ನು ಹಾಳು ಮಾಡುತ್ತಿದ್ದಾರೆ?’ ಎಂದು ಜೋಶಿ ಮೇಲೆ ಕಿಡಿಕಾರಿದ್ದಾರೆ.

‘ಸುರೇಶ್ ಅವರ ಮೇಲೆ ದೇಶದ್ರೋಹ ಪ್ರಕರಣ ದಾಖಲಿಸಬೇಕು’ ಎಂದು ಪ್ರಲ್ಹಾದ ಜೋಶಿ ಒತ್ತಾಯಿಸಿದ್ದರು.

‘ದಕ್ಷಿಣ ರಾಜ್ಯಗಳಿಂದ ಸಂಗ್ರಹಿಸಿದ ಹಣವನ್ನು ಉತ್ತರದ ರಾಜ್ಯಗಳಿಗೆ ಹಂಚಿಕೆ ಮಾಡಲಾಗುತ್ತಿದೆ. ಇದರಿಂದ ನಮಗೆ ಆರ್ಥಿಕವಾಗಿ ತೊಂದರೆಯಾಗುತ್ತಿದೆ. ನಾವು ನ್ಯಾಯಯುತವಾದ ಪಾಲನ್ನು ಕೇಳುತ್ತಿದ್ದೇವೆ. ನಮಗೆ ಅನ್ಯಾಯ ಮಾಡುವ ಮೂಲಕ ಪ್ರತ್ಯೇಕ ರಾಷ್ಟ್ರದ ಬೇಡಿಕೆಯನ್ನು ಹಿಂದಿ ಭಾಗದವರು ಹೇರುತ್ತಿದ್ದಾರೆ’ ಎಂದು ಡಿ.ಕೆ ಸುರೇಶ್ ಹೇಳಿದ್ದರು.

ಈ ಬಗ್ಗೆ ಗುರುವಾರ ರಾತ್ರಿ ಸ್ಪಷ್ಟನೆ ನೀಡಿದ್ದ ಸುರೇಶ್‌, ‘ವಿವಾದ ಸೃಷ್ಟಿಸಲು ಬಿಜೆಪಿಯವರು ತಮ್ಮ ಹೇಳಿಕೆಯನ್ನು ತಿರುಚಿದ್ದಾರೆ’ ಎಂದು ದೂರಿದರು. ‘ಕರ್ನಾಟಕವು ಭಾರತದ ಭಾಗವಾಗಿಯೇ ಇರುತ್ತದೆ. ನಮ್ಮದು ಒಕ್ಕೂಟ ವ್ಯವಸ್ಥೆ. ದಕ್ಷಿಣದ ರಾಜ್ಯಗಳಿಗೆ ಅನ್ಯಾಯವಾಗುತ್ತಿರುವುದನ್ನು ಹೇಳಿದ್ದೇನೆ’ ಎಂದಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.