ADVERTISEMENT

ಹಿಂದುತ್ವದ ಮೇಲೆ ಕೇಜ್ರಿವಾಲ್‌ ಗ್ಯಾಂಗ್‌ಗೆ ದ್ವೇಷವೇಕೆಂದೇ ಅರ್ಥವಾಗದು: ರಿಜಿಜು

'ರಾಹುಲ್‌ ಗಾಂಧಿ ಬಗ್ಗೆ ಅರ್ಥವಾಗುತ್ತದೆ. ಆದರೆ ಅರವಿಂದ ಕೇಜ್ರಿವಾಲ್‌...' - ಕಿರಣ್‌ ರಿಜಿಜು

ಪಿಟಿಐ
Published 8 ಅಕ್ಟೋಬರ್ 2022, 7:09 IST
Last Updated 8 ಅಕ್ಟೋಬರ್ 2022, 7:09 IST
ಕಿರಣ್‌ ರಿಜಿಜು
ಕಿರಣ್‌ ರಿಜಿಜು   

ನವದೆಹಲಿ: ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಮತ್ತು ಅವರ ಗ್ಯಾಂಗ್‌ ಏಕೆ ಹಿಂದೂ, ಹಿಂದುತ್ವವನ್ನು ಅತಿಯಾಗಿ ದ್ವೇಷಿಸುತ್ತಾರೆ ಎಂಬುದೇ ಅರ್ಥವಾಗುತ್ತಿಲ್ಲ ಎಂದು ಕೇಂದ್ರ ಕಾನೂನು ಸಚಿವ ಕಿರಣ್‌ ರಿಜಿಜು ಆಪಾದಿಸಿದ್ದಾರೆ.

ನೂರಾರು ಹಿಂದೂಗಳು ಬೌದ್ಧ ಧರ್ಮಕ್ಕೆ ಮತಾಂತರಗೊಂಡು ಪ್ರಮಾಣ ಸ್ವೀಕರಿಸುವ ಕಾರ್ಯಕ್ರಮದಲ್ಲಿ ದೆಹಲಿಯ ಸಮಾಜ ಕಲ್ಯಾಣ ಸಚಿವ ರಾಜೇಂದ್ರ ಪಾಲ್‌ ಗೌತಮ್‌ ಇದ್ದಾರೆ ಎನ್ನಲಾದ ವೈರಲ್‌ ವಿಡಿಯೊ ಬಗ್ಗೆ ಕಿರಣ್‌ ರಿಜಿಜು ಪ್ರತಿಕ್ರಿಯಿಸಿದ್ದಾರೆ. ವಿಡಿಯೊದಲ್ಲಿ ಗೌತಮ್‌ ಅವರು ಹಿಂದೂ ದೇವರನ್ನು ನಿಂದಿಸಿದ್ದಾರೆ ಎಂದು ಆರೋಪಿಸಲಾಗಿದೆ.

ಶುಕ್ರವಾರ ರಾತ್ರಿ ಮತ್ತು ಶನಿವಾರ ಬೆಳಗ್ಗೆ ಸರಣಿ ಟ್ವೀಟ್‌ ಮಾಡಿರುವ ರಿಜಿಜು, 'ಅರವಿಂದ ಕೇಜ್ರಿವಾಲ್‌ ಮತ್ತು ಅವರ ಗುಂಪು ಹಿಂದೂ ಮತ್ತು ಹಿಂದುತ್ವವನ್ನು ಏಕೆ ಅಷ್ಟು ದ್ವೇಷಿಸುತ್ತಾರೆ ಎಂಬುದು ನಿಜಕ್ಕೂ ಅರ್ಥವಾಗುತ್ತಿಲ್ಲ' ಎಂದಿದ್ದಾರೆ.

ADVERTISEMENT

'ರಾಹುಲ್‌ ಗಾಂಧಿ ಬಗ್ಗೆ ಅರ್ಥವಾಗುತ್ತದೆ. ಆದರೆ ಅರವಿಂದ ಕೇಜ್ರಿವಾಲ್‌...' ಎಂದು ಅರುಣಾಚಲ ಪ್ರದೇಶದ ಬಿಜೆಪಿ ಸಂಸದರೂ ಆಗಿರುವ ರಿಜಿಜು ಟ್ವೀಟ್‌ ಮಾಡಿದ್ದಾರೆ. ಈ ಮೂಲಕ ರಾಹುಲ್‌ ಗಾಂಧಿ ಹಿಂದೂ ಮತ್ತು ಹಿಂದುತ್ವವನ್ನು ದ್ವೇಷಿಸುವುದು ಏಕೆ ಎಂಬುದು ತಮಗೆ ಗೊತ್ತು ಎಂಬರ್ಥದಲ್ಲಿಟ್ವೀಟ್‌ ಮಾಡಿದ್ದಾರೆ.


ಎಲ್ಲ ಭಾರತೀಯರು 'ಸಬ್‌ ಕಾ ಸಾತ್, ಸಬ್‌ ಕಾ ವಿಕಾಸ್‌, ಸಬ್‌ ಕಾ ವಿಶ್ವಾಸ್‌ ಮತ್ತು ಸಬ್‌ ಕಾ ಪ್ರಯಾಸ್‌' ಮಂತ್ರವನ್ನು ಅನುಸರಿಸಬೇಕು ಎಂದು ರಿಜಿಜು ಆಗ್ರಹಿಸಿದ್ದಾರೆ.

ಗೌತಮ್‌ ಅವರು ಭಾಗಿಯಾಗಿದ್ದ ಕಾರ್ಯಕ್ರಮದ ವಿಡಿಯೊ ವೈರಲ್‌ ಆದ ಬೆನ್ನಲ್ಲೇ ಸಚಿವರ ರಾಜೀನಾಮೆಗೆ ಬಿಜೆಪಿ ಒತ್ತಾಯಿಸಿದೆ. ಎಎಪಿ ಹಿಂದೂಗಳ ಮೇಲೆ ದ್ವೇಷ ಹೊಂದಿರುವುದನ್ನು ಗೌತಮ್‌ ಅವರ ಮಾತುಗಳು ಸಾರಿ ಹೇಳುತ್ತಿವೆ ಎಂದು ಬಿಜೆಪಿ ನಾಯಕರು ವಾಗ್ದಾಳಿ ನಡೆಸಿದ್ದಾರೆ.

ವೈರಲ್‌ ವಿಡಿಯೊ ಬಗ್ಗೆ ಪ್ರತಿಕ್ರಿಯಿಸಿರುವ ಗೌತಮ್‌, 'ನಾನೊಬ್ಬ ಕಟ್ಟುನಿಟ್ಟಿನ ಧಾರ್ಮಿಕ ವ್ಯಕ್ತಿಯಾಗಿದ್ದೇನೆ. ಕನಸಿನಲ್ಲೂ ನಾನು ಯಾವುದೇ ಧರ್ಮವನ್ನು ದ್ವೇಷಿಸಲು ಬಯಸುವುದಿಲ್ಲ. ದೇವರ ನಿಂದನೆ ಅಥವಾ ಅಪಮಾನ ಮಾಡುವುದಿಲ್ಲ' ಎಂದು ಸ್ಪಷ್ಟಪಡಿಸಿದ್ದಾರೆ. ಬಿಜೆಪಿ ನಾಯಕರು ಸುಳ್ಳನ್ನು ಹರಿಯಬಿಡುತ್ತಿದ್ದಾರೆ ಎಂದೂ ಆರೋಪಿಸಿದ್ದಾರೆ.

ಎಎಪಿ ಅಥವಾ ದೆಹಲಿ ಸರ್ಕಾರದಿಂದ ಈ ವಿವಾದದ ಕುರಿತು ಯಾವುದೇ ಅಧಿಕೃತ ಹೇಳಿಕೆ ಹೊರಬಿದ್ದಿಲ್ಲ. ಆದರೆ ಗೌತಮ್‌ ಅವರ ಹೇಳಿಕೆ ಕುರಿತು ಸಿಎಂ ಕೇಜ್ರಿವಾಲ್‌ ಅತ್ಯಂತ ಅಸಮಾಧಾನಗೊಂಡಿದ್ದಾರೆ ಎನ್ನಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.