ADVERTISEMENT

ದೆಹಲಿ ಅಬಕಾರಿ ಹಗರಣ: ಕರ್ನಾಟಕವೂ ಸೇರಿ ದೇಶದ 40 ಕಡೆ ಇ.ಡಿ ದಾಳಿ

ಪಿಟಿಐ
Published 16 ಸೆಪ್ಟೆಂಬರ್ 2022, 5:47 IST
Last Updated 16 ಸೆಪ್ಟೆಂಬರ್ 2022, 5:47 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

ನವದೆಹಲಿ: ದೆಹಲಿ ಅಬಕಾರಿ ನೀತಿ ಹಗರಣದಲ್ಲಿನ ಅಕ್ರಮ ಹಣ ವರ್ಗಾವಣೆಗೆ ಸಂಬಂಧಿಸಿದ ತನಿಖೆಯ ಭಾಗವಾಗಿ ಜಾರಿ ನಿರ್ದೇಶನಾಲಯ (ಇ.ಡಿ) ಶುಕ್ರವಾರ ದೇಶದಾದ್ಯಂತ ಸುಮಾರು 40 ಸ್ಥಳಗಳಲ್ಲಿ ದಾಳಿ ನಡೆಸಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ

ನೆಲ್ಲೂರು ಸೇರಿದಂತೆ ಆಂಧ್ರಪ್ರದೇಶದ ಕೆಲ ನಗರಗಳು, ಕರ್ನಾಟಕ, ತಮಿಳುನಾಡು ಮತ್ತು ದೆಹಲಿ-ಎನ್‌ಸಿಆರ್‌ನ ಇತರ ಕೆಲವು ನಗರಗಳಲ್ಲಿ ಮದ್ಯದ ಉದ್ಯಮಿಗಳು, ವಿತರಕರು ಮತ್ತು ಸರಬರಾಜು ಜಾಲಗಳ ಮೇಲೆ ದಾಳಿ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇ.ಡಿ ಸೆಪ್ಟೆಂಬರ್ 6 ರಂದು ದೇಶದಾದ್ಯಂತ ಸುಮಾರು 45 ಸ್ಥಳಗಳಲ್ಲಿ ಮೊದಲ ಬಾರಿಗೆ ದಾಳಿ ನಡೆಸಿತ್ತು. ನಂತರದಲ್ಲಿ ನಡೆಯುತ್ತಿರುವ ಎರಡನೇ ದಾಳಿ ಇದಾಗಿದೆ.

ADVERTISEMENT

ದೆಹಲಿಯ ಅಬಕಾರಿ ನೀತಿಯಲ್ಲಿನ ಅಕ್ರಮಗಳ ಕುರಿತು ಸಿಬಿಐ ಮೊದಲ ಬಾರಿಗೆ ಎಫ್‌ಐಆರ್‌ ದಾಖಲಿಸಿತ್ತು. ನಂತರ ಇ.ಡಿ ಕೂಡ ತನಿಖೆ ಕೈಗೊಂಡಿದೆ. ಸಿಬಿಐ ದಾಖಲಿಸಿದ್ದ ಎಫ್‌ಐಆರ್‌ನಲ್ಲಿ ದೆಹಲಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಮತ್ತು ಕೆಲವು ಅಧಿಕಾರಿಗಳನ್ನು ಆರೋಪಿಗಳಾಗಿ ಹೆಸರಿಸಲಾಗಿದೆ. ವಿವಾದಿತ ನೀತಿಯನ್ನು ಈಗಾಗಲೇ ರದ್ದು ಮಾಡಲಾಗಿದೆ.

ಸಿಬಿಐ ಆಗಸ್ಟ್ 19 ರಂದು ಸಿಸೋಡಿಯಾ (50), ಐಎಎಸ್ ಅಧಿಕಾರಿ ಮತ್ತು ದೆಹಲಿಯ ಮಾಜಿ ಅಬಕಾರಿ ಆಯುಕ್ತ ಅರವ ಗೋಪಿ ಕೃಷ್ಣ ಅವರ ದೆಹಲಿ ನಿವಾಸಗಳು, ಏಳು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿನ 19 ಸ್ಥಳಗಳನ್ನು ದಾಳಿ ನಡೆಸಿತ್ತು. ಸಿಸೋಡಿಯ ಮೇಲಿನ ದಾಳಿಯು ರಾಜಕೀಯ ಪ್ರೇರಿತ ಎಂದು ಆರೋಪಿಸಲಾಗಿತ್ತು. ಹೀಗಾಗಿ ಎಎಪಿ ಮತ್ತು ಬಿಜೆಪಿ ನಡುವೆ ರಾಜಕೀಯ ವಾಗ್ಯುದ್ಧ ನಡೆದಿತ್ತು.

ಸಿಸೋಡಿಯಾ ಅವರು ಅರವಿಂದ್ ಕೇಜ್ರಿವಾಲ್ ನೇತೃತ್ವದ ದೆಹಲಿ ಸರ್ಕಾರದಲ್ಲಿ ಅಬಕಾರಿ ಮತ್ತು ಶಿಕ್ಷಣ ಸೇರಿದಂತೆ ಅನೇಕ ಖಾತೆಗಳನ್ನು ನಿರ್ವಹಿಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.