ADVERTISEMENT

ಅಬಕಾರಿ ಹಗರಣ: ಕೇಜ್ರಿವಾಲ್‌ರನ್ನು ವಿಚಾರಣೆಗೊಳಪಡಿಸಲು EDಗೆ ಕೇಂದ್ರ ಒಪ್ಪಿಗೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 15 ಜನವರಿ 2025, 5:09 IST
Last Updated 15 ಜನವರಿ 2025, 5:09 IST
<div class="paragraphs"><p>ಅರವಿಂದ ಕೇಜ್ರಿವಾಲ್‌ ಹಾಗೂ ಮನೀಶ್‌ ಸಿಸೋಡಿಯಾ</p></div>

ಅರವಿಂದ ಕೇಜ್ರಿವಾಲ್‌ ಹಾಗೂ ಮನೀಶ್‌ ಸಿಸೋಡಿಯಾ

   

ನವದೆಹಲಿ: ದೆಹಲಿಯ ಅಬಕಾರಿ ನೀತಿ ಪ್ರಕರಣದಲ್ಲಿ ಎಎಪಿ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಹಾಗೂ ಮಾಜಿ ಉಪಮುಖ್ಯಮಂತ್ರಿ ಮನೀಶ್‌ ಸಿಸೋಡಿಯಾ ಅವರಿಗೆ ಸಂಕಷ್ಟ ಎದುರಾಗಿದೆ.

ದೆಹಲಿಯ ಅಬಕಾರಿ ನೀತಿ ಹಗರಣದೊಂದಿಗೆ ನಂಟು ಹೊಂದಿರುವ ಹಣ ಅಕ್ರಮ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿ ಹಣ ಅಕ್ರಮ ವರ್ಗಾವಣೆ ಕಾಯ್ದೆ (ಪಿಎಂಎಲ್‌ಎ) ಅಡಿಯಲ್ಲಿ ಅರವಿಂದ ಕೇಜ್ರಿವಾಲ್ ಮತ್ತು ಮನೀಶ್ ಸಿಸೋಡಿಯಾ ಅವರನ್ನು ವಿಚಾರಣೆಗೆ ಒಳಪಡಿಸಲು ಜಾರಿ ನಿರ್ದೇಶನಾಲಯಕ್ಕೆ (ಇ.ಡಿ) ಕೇಂದ್ರ ಗೃಹ ಸಚಿವಾಲಯವು ಅನುಮತಿ ನೀಡಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ADVERTISEMENT

ಈಚೆಗೆ ವಿಚಾರಣಾ ನ್ಯಾಯಾಲಯದ ಆದೇಶ ಪ್ರಶ್ನಿಸಿ ಜಾರಿ ನಿರ್ದೇಶನಾಲಯ (ಇ.ಡಿ) ಸಲ್ಲಿಸಿರುವ ಅರ್ಜಿಗೆ ಪ್ರತಿಕ್ರಿಯಿಸುವಂತೆ ದೆಹಲಿಯ ಮಾಜಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಸೇರಿದಂತೆ 40 ಆರೋಪಿಗಳಿಗೆ ದೆಹಲಿ ಹೈಕೋರ್ಟ್‌ ಸೂಚನೆ ನೀಡಿತ್ತು.

ಮನೀಷ್‌ ಸಿಸೋಡಿಯಾ, ಸಂಜಯ್‌ ಸಿಂಗ್‌ ಮತ್ತು ಇತರ ಎಎಪಿ ನಾಯಕರು, ಬಿಆರ್‌ಎಸ್ ನಾಯಕಿ ಕೆ. ಕವಿತಾ ಹಾಗೂ ಪ್ರಕರಣದ ಆರೋಪಿಗಳಾದ ಹಲವು ಉದ್ಯಮಿಗಳಿಗೆ ನೋಟಿಸ್ ಜಾರಿ ಮಾಡಿತ್ತು.

ದೆಹಲಿಯ ಅಬಕಾರಿ ನೀತಿ ಹಗರಣದೊಂದಿಗೆ ನಂಟು ಹೊಂದಿರುವ ಹಣ ಅಕ್ರಮ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದ ದಾಖಲೆಗಳನ್ನು ಆರೋಪಿಗಳಿಗೆ ಒದಗಿಸಬೇಕು ಎಂದು ಇ.ಡಿಗೆ ವಿಚಾರಣಾ ನ್ಯಾಯಾಲಯ ಆದೇಶಿಸಿತ್ತು. ಆದರೆ ಸುಪ್ರೀಂ ಕೋರ್ಟ್ ಪ್ರಕಾರ ಈ ರೀತಿ ದಾಖಲೆಗಳನ್ನು ಒದಗಿಸಲಾಗುವುದಿಲ್ಲ ಎಂದು ಇ.ಡಿ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿತ್ತು.

70 ಸದಸ್ಯ ಬಲ ಹೊಂದಿರುವ ದೆಹಲಿ ವಿಧಾನಸಭೆಗೆ ಫೆಬ್ರುವರಿ 5ರಂದು ಚುನಾವಣೆ ನಡೆಯಲಿದ್ದು, ಫೆಬ್ರುವರಿ 8ರಂದು ಫಲಿತಾಂಶ ಹೊರಬೀಳಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.