ADVERTISEMENT

ಅಬಕಾರಿ ನೀತಿ ಹಗರಣ:ವಿಚಾರಣೆಗೆ ಗೈರಾದ ಕೇಜ್ರಿವಾಲ್ ವಿರುದ್ಧ ಪ್ರಕರಣ ದಾಖಲಿಸಿದ ED

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 19 ಫೆಬ್ರುವರಿ 2024, 10:04 IST
Last Updated 19 ಫೆಬ್ರುವರಿ 2024, 10:04 IST
<div class="paragraphs"><p>ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್</p></div>

ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್

   

ನವದೆಹಲಿ: ದೆಹಲಿ ಅಬಕಾರಿ ನೀತಿಯಲ್ಲಿ ನಡೆದಿದೆ ಎನ್ನಲಾದ ಹಣ ಅಕ್ರಮ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ 6 ಬಾರಿ ಸಮನ್ಸ್ ನೀಡಿದರೂ ವಿಚಾರಣೆಗೆ ಹಾಜರಾಗದ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ವಿರುದ್ಧ ಜಾರಿ ನಿರ್ದೇಶನಾಲಯದ (ಇ.ಡಿ) ಅಧಿಕಾರಿಗಳು ಪ್ರಕರಣ ದಾಖಲಿಸಿದ್ದಾರೆ.

‘ಕೇಜ್ರಿವಾಲ್ ಅವರಿಗೆ ನೀಡಲಾದ ಮೊದಲ ಮೂರು ಸಮನ್ಸ್‌ಗಳನ್ನು ಉದ್ದೇಶಪೂರ್ವಕವಾಗಿ ಪಾಲಿಸದ ಆರೋಪದ ಮೇಲೆ ಐಪಿಸಿಯ ಸೆಕ್ಷನ್ 174ರ ಅಡಿಯಲ್ಲಿ ದೂರು ದಾಖಲಿಸಲಾಗಿದೆ. ಕೇಜ್ರಿವಾಲ್ ಅವರು ಸತತವಾಗಿ ವಿಚಾರಣೆಗೆ ಗೈರಾದ ಬಗ್ಗೆ ನ್ಯಾಯಾಲಯದ ಗಮನಕ್ಕೂ ತರಲಾಗಿದೆ. ಹಾಗಾಗಿ ಕೇಜ್ರಿವಾಲ್ ಅವರು ಕಾನೂನು ಕ್ರಮಕ್ಕೆ ಅರ್ಹರಾಗಿದ್ದಾರೆ. ಸಮನ್ಸ್‌ನ ಸಿಂಧುತ್ವದ ಬಗ್ಗೆ ಯಾವುದೇ ಪ್ರಶ್ನೆ ಉದ್ಭವಿಸುವುದಿಲ್ಲ. ಕೇಜ್ರಿವಾಲ್ ಅವರು ಉದ್ದೇಶಪೂರ್ವಕವಾಗಿ ವಿಚಾರಣೆಗೆ ಹಾಜರಾಗದಿರುವುದು ಅಪರಾಧ’ ಎಂದು ಇ.ಡಿ ಮೂಲಗಳು ತಿಳಿಸಿವೆ.

ADVERTISEMENT

ತಮ್ಮ ವಿರುದ್ಧ ಇ.ಡಿ ದಾಖಲಿಸಿರುವ ದೂರಿನ ಕುರಿತು ಪ್ರತಿಕ್ರಿಯಿಸಿರುವ ಕೇಜ್ರಿವಾಲ್, ‘ನಾವು ಇ.ಡಿ ಅಧಿಕಾರಿಗಳಿಗೆ ಕಾನೂನಿನ ಪ್ರಕಾರ ಉತ್ತರ ನೀಡುತ್ತಿದ್ದೇವೆ. ಈಗ ಅವರು ಪ್ರಕರಣ ದಾಖಲಿಸಿದ್ದಾರೆ. ಇ.ಡಿ ಯಾವುದೇ ಹೊಸ ಸಮನ್ಸ್ ನೀಡುವ ಮೊದಲು ನ್ಯಾಯಾಲಯದ ತೀರ್ಪಿಗೆ ಕಾಯಬೇಕು’ ಎಂದಿದ್ದಾರೆ.

ಹಣ ಅಕ್ರಮ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇ.ಡಿ ಒಟ್ಟು 6 ಬಾರಿ ಸಮನ್ಸ್‌ ಜಾರಿ ಮಾಡಿದ್ದು, ಇದುವರೆಗೆ ಕೇಜ್ರಿವಾಲ್‌ ವಿಚಾರಣೆಗೆ ಹಾಜರಾಗಿಲ್ಲ. ಸಮನ್ಸ್‌ ಅನ್ನು ಕಾನೂನುಬಾಹಿರ ಎಂದು ಕರೆದಿರುವ ಪಕ್ಷ, ಪದೇ ಪದೇ ಸಮನ್ಸ್ ಕಳುಹಿಸುವ ಬದಲು ನ್ಯಾಯಾಲಯದ ವಿಚಾರಣೆ ಮುಗಿಯುವವರೆಗೆ ಕಾಯಬೇಕು ಎಂದು ತಾಕೀತು ಮಾಡಿದೆ‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.