ಮುಂಬೈ: ₹3 ಸಾವಿರ ಕೋಟಿ ಮೊತ್ತದ ಬ್ಯಾಂಕ್ ಸಾಲ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ಇ.ಡಿ) ಅನಿಲ್ ಅಂಬಾನಿ ಒಡೆತನದ 50ಕ್ಕೂ ಹೆಚ್ಚು ಕಂಪನಿಗಳ ಮುಂಬೈ ಮತ್ತು ದೆಹಲಿಯಲ್ಲಿನ ಕಚೇರಿಗಳ ಮೇಲೆ ಗುರುವಾರ ಏಕಕಾಲದಲ್ಲಿ ದಾಳಿ ನಡೆಸಿದೆ.
ಅನಿಲ್ ಅಂಬಾನಿ ಸಮೂಹ ಸಂಸ್ಥೆಗಳಿಗೆ ನಿಯಮ ಉಲ್ಲಂಘಿಸಿ, ಅಕ್ರಮವಾಗಿ ಸಾಲ ಮಂಜೂರು ಮಾಡಿದ ಆರೋಪದಲ್ಲಿ ಯೆಸ್ ಬ್ಯಾಂಕ್ ಮೇಲೂ ಇ.ಡಿ ದಾಳಿ ನಡೆದಿದೆ. ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆಯಡಿ (ಪಿಎಂಎಲ್‌ಎ) ದಾಳಿ ನಡೆದಿದ್ದು, ಮುಂಬೈ ಮತ್ತು ದೆಹಲಿಯಲ್ಲಿ 25ಕ್ಕೂ ಹೆಚ್ಚು ವ್ಯಕ್ತಿಗಳು ಮತ್ತು 35ಕ್ಕೂ ಹೆಚ್ಚು ಸ್ಥಳಗಳನ್ನು ಗುರಿಯಾಗಿಸಿ ಕಾರ್ಯಾಚರಣೆ ನಡೆಯಿತು.
ಅನಿಲ್ ಅಂಬಾನಿ ಸಮೂಹ ಸಂಸ್ಥೆಗಳಿಗೆ 2017–19ರ ಅವಧಿಯಲ್ಲಿ ಯೆಸ್ ಬ್ಯಾಂಕ್ ಮೂಲಕ ಅಕ್ರಮವಾಗಿ ₹ 3 ಸಾವಿರ ಕೋಟಿಯಷ್ಟು ಸಾಲ ವಿತರಿಸಲಾಗಿದೆ. ಈ ಸಾಲ ಮಂಜೂರಾದ ಕೂಡಲೇ, ಬ್ಯಾಂಕ್‌ನ ಪ್ರವರ್ತಕರ ಖಾತೆಗೂ ಹಣ ಸಂದಾಯ ಆಗಿರುವುದನ್ನು ಇ.ಡಿ ಪತ್ತೆ ಹಚ್ಚಿದೆ. ಅಕ್ರಮವಾಗಿ ಸಾಲ ಮಂಜೂರು ಮಾಡಿರುವುದು ಮತ್ತು ಇದಕ್ಕಾಗಿ ಲಂಚ ಪಡೆದಿರುವ ಬಗ್ಗೆಯೂ ತನಿಖೆ ಮುಂದುವರಿದಿದೆ. ಸಾಲ ಮಂಜೂರಾತಿ ಸಂದರ್ಭದಲ್ಲಿ ಯೆಸ್ ಬ್ಯಾಂಕ್ ‘ಗಂಭೀರ ನಿಯಮ ಉಲ್ಲಂಘನೆ’ ಮಾಡಿರುವುದು ಕಂಡು ಬಂದಿದೆ ಎಂದು ಇ.ಡಿ. ಹೇಳಿದೆ.
ಮುಂಬೈ ಮತ್ತು ದೆಹಲಿಯಲ್ಲಿ 50 ಕಂಪನಿಗಳ 35 ಕ್ಕೂ ಹೆಚ್ಚು ಸ್ಥಳಗಳಲ್ಲಿ, ಸುಮಾರು 25 ವ್ಯಕ್ತಿಗಳನ್ನು ಹಣ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್‌ಎ) ಅಡಿಯಲ್ಲಿ ಶೋಧಿಸಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.
2017 ಮತ್ತು 2019 ರ ನಡುವೆ ಯೆಸ್ ಬ್ಯಾಂಕಿನಿಂದ ಸುಮಾರು ₹ 3 ಸಾವಿರ ಕೋಟಿ ಅಕ್ರಮ ಸಾಲ ವರ್ಗಾವಣೆ ಆರೋಪಗಳನ್ನು ತನಿಖೆ ನಡೆಸಲಾಗುತ್ತಿದೆ ಎಂದು ಇ.ಡಿ ಮೂಲಗಳು ತಿಳಿಸಿವೆ.
ಸಾಲ ಮಂಜೂರು ಮಾಡುವ ಮೊದಲು, ಯೆಸ್ ಬ್ಯಾಂಕ್ ಪ್ರವರ್ತಕರು ಹಣವನ್ನು ಪಡೆದಿದ್ದಾರೆ ಎಂದು ಇ.ಡಿ ಪತ್ತೆ ಹಚ್ಚಿದೆ ಎಂದು ಮೂಲಗಳು ತಿಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.