
ಕೋಲ್ಕತ್ತ: ಐ–ಪ್ಯಾಕ್ ಕಚೇರಿ ಹಾಗೂ ನಿರ್ದೇಶಕ ಪ್ರತೀಕ್ ಜೈನ್ ನಿವಾಸದಲ್ಲಿ ಶೋಧ ನಡೆಸಿದ ಇ.ಡಿ ಅಧಿಕಾರಿಗಳ ಗುರುತನ್ನು ಕೋಲ್ಕತ್ತದ ಹಿರಿಯ ಪೊಲೀಸರು ಪರಿಶೀಲಿಸುತ್ತಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಜೈನ್ ಅವರ ನಿವಾಸದ ಮೇಲೆ ಇ.ಡಿ ದಾಳಿ ಮಾಡಿದ ವೇಳೆ ನೆರೆಹೊರೆಯವರು ನೋಡಿದ್ದಾರೆಯೇ, ಮನೆಯನ್ನು ಪ್ರವೇಶಿಸಿದ ರೀತಿಯನ್ನು ಖಚಿತಪಡಿಸಿಕೊಳ್ಳಲು ನೆರೆಹೊರೆಯವರ ಹೇಳಿಕೆಗಳನ್ನು ದಾಖಲಿಸಿಕೊಳ್ಳಲು ಪೊಲೀಸರು ನಿರ್ಧರಿಸಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಈ ಸಂಬಂಧ ವಿಚಾರಣೆಗೆ ಹಾಜರಾಗುವಂತೆ ಜೈನ್ ನೆರೆಹೊರೆಯವರಿಗೆ ನೋಟಿಸ್ ನೀಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ನೆರೆಹೊರೆಯವರು ಇ.ಡಿ ದಾಳಿಯನ್ನು ನೋಡಿದ್ದರೆ, ಅವರ ಹೇಳಿಕೆಗಳು ಮುಖ್ಯವಾಗುತ್ತದೆ. ಈ ಮೂಲಕ ಅಧಿಕಾರಿಗಳು ಪ್ರವೇಶ ಹಾಗೂ ಶೋಧ ಸಂಬಂಧಿಸಿದಂತೆ ಘಟನೆಯನ್ನು ಅನುಕ್ರಮವಾಗಿ ದಾಖಲಿಸಬಹುದು ಎಂದು ಪೊಲೀಸರು ಹೇಳಿದ್ದಾರೆ.
ಜೈನ್ ಮನೆ ಒಳಗೆ ಪ್ರವೇಶಿಸುವ ಮುನ್ನ ರಿಜಿಸ್ಟರ್ ಬುಕ್‌ನಲ್ಲಿ ಅಧಿಕಾರಿಗಳ ಹೆಸರು ಉಲ್ಲೇಖವಾಗಿಲ್ಲ. ಮನೆಯನ್ನು ಪ್ರವೇಶಿಸಲು ಕಾರ್ಯವಿಧಾನವನ್ನು ಅನುಸರಿಸಿಲ್ಲ, ಭದ್ರತಾ ಸಿಬ್ಬಂದಿಯನ್ನು ತಳ್ಳಿಕೊಂಡು ಮನೆ ಒಳಗೆ ಪ್ರವೇಶಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಕಾರ್ಯಾಚರಣೆಯ ಸಮಯದಲ್ಲಿ ಭದ್ರತಾ ಸಿಬ್ಬಂದಿಯ ಮೊಬೈಲ್ ಫೋನ್‌ಗಳನ್ನು ಬಲವಂತವಾಗಿ ಕಿತ್ತುಕೊಳ್ಳಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಇ.ಡಿ ದಾಳಿಯು ಯಾವುದೇ ಹಣಕಾಸಿಗೆ ಸಂಬಂಧಿಸಿದ ದಾಳಿಯಾಗಿಲ್ಲ. ಬದಲಾಗಿ ಅವರು ನನ್ನ ಪಕ್ಷಕ್ಕೆ ಸಂಬಂಧಿಸಿದ ರಹಸ್ಯ ದಾಖಲೆಗಳು ಮತ್ತು ಹಾರ್ಡ್ ಡಿಸ್ಕ್‌ಗಳನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಮುಂಬರುವ ವಿಧಾನಸಭಾ ಚುನಾವಣೆಗೆ ಸಂಬಂಧಿಸಿದಂತೆ ಪಕ್ಷದ ಕಾರ್ಯತಂತ್ರ, ಅಭ್ಯರ್ಥಿಗಳ ವಿವರಗಳು ಅದರಲ್ಲಿದ್ದವು. ಹೊತ್ತೊಯುತ್ತಿದ್ದ ಕೆಲವು ದಾಖಲೆಗಳನ್ನು ಮರಳಿ ಪಡೆದುಕೊಂಡಿದ್ದೇನೆ ಎಂದು ಮಮತಾ ತಿಳಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.