ADVERTISEMENT

Election 2021: ಪ.ಬಂಗಾಳ, ಅಸ್ಸಾಂನಲ್ಲಿ 2ನೇ ಹಂತದ ಮತದಾನ ಆರಂಭ

​ಪ್ರಜಾವಾಣಿ ವಾರ್ತೆ
Published 1 ಏಪ್ರಿಲ್ 2021, 2:24 IST
Last Updated 1 ಏಪ್ರಿಲ್ 2021, 2:24 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಕೋಲ್ಕತ್ತ: ಪಶ್ಚಿಮ ಬಂಗಾಳ ಮತ್ತು ಅಸ್ಸಾಂ ರಾಜ್ಯಗಳಲ್ಲಿ ಎರಡನೇ ಹಂತದ ಚುನಾವಣೆ ಪ್ರಕ್ರಿಯೆ ಏಪ್ರಿಲ್ 1, ಗುರುವಾರದಂದು ಆರಂಭಗೊಂಡಿದೆ.

ಪಶ್ಚಿಮ ಬಂಗಾಳದ 30 ಕ್ಷೇತ್ರಗಳಿಗೆ ಮತ್ತು ಅಸ್ಸಾಂನ 39 ಕ್ಷೇತ್ರಗಳಿಗೆ ಮತದಾನ ನಡೆಯುತ್ತಿದೆ. ಬೆಳಗ್ಗೆ 7ಕ್ಕೆ ಸರಿಯಾಗಿ ಮತದಾನ ಆರಂಭವಾಗಿದೆ. ಮತದಾರರು ಮುಂಜಾನೆಯಿಂದಲೇ ಸರದಿ ಸಾಲಿನಲ್ಲಿ ನಿಂತು ಮತ ಚಲಾಯಿಸುತ್ತಿದ್ದಾರೆ.

ಎರಡು ರಾಜ್ಯಗಳಲ್ಲೂ ಮತದಾನ ಪ್ರಕ್ರಿಯೆ ಶಾಂತಿಯುತವಾಗಿ ನಡೆಯುತ್ತಿದ್ದು, ಇದುವರೆಗೆ ಯಾವುದೇ ಅಹಿತಕರ ಘಟನೆ ವರದಿಯಾಗಿಲ್ಲ.

ADVERTISEMENT

ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸ್ಪರ್ಧಿಸುತ್ತಿರುವ ನಂದಿಗ್ರಾಮ ವಿಧಾನಸಭಾ ಕ್ಷೇತ್ರದಲ್ಲಿ ಎರಡನೇ ಹಂತದಲ್ಲಿ ಮತದಾನ ನಡೆಯುತ್ತಿದ್ದು, ಭಾರಿ ಕುತೂಹಲ ಮನೆ ಮಾಡಿದೆ.

ಮಾಜಿ ಆಪ್ತ ಹಾಗೂ ಟಿಎಂಸಿ ಪಕ್ಷವನ್ನು ತೊರೆದು ಬಿಜೆಪಿ ಸೇರ್ಪಡೆಗೊಂಡಿರುವ ಸುವೇಂದು ಅಧಿಕಾರಿ ಮಮತಾ ವಿರುದ್ದ ನೇರ ಸ್ಪರ್ಧೆಗಿಳಿದಿದ್ದಾರೆ.

ನಂದಿಗ್ರಾಮದಲ್ಲಿ ಅಹಿತಕರ ಘಟನೆ ತಡೆಯುವ ಹಿನ್ನೆಲೆಯಲ್ಲಿ ಈಗಾಗಲೇ ಸೆಕ್ಷನ್ 144ರಡಿ ನಿಷೇಧಾಜ್ಞೆಜಾರಿ ಮಾಡಲಾಗಿದೆ. ಅಲ್ಲದೆ ಎಲ್ಲ ಮತಗಟ್ಟೆಗಳನ್ನು ಸೂಕ್ಷ್ಮ ಮತಗಟ್ಟೆಗಳೆಂದು ಚುನಾವಣಾ ಆಯೋಗವು ಘೋಷಿಸಿದೆ.

ಪಶ್ಚಿಮ ಬಂಗಾಳದಲ್ಲಿ ಎರಡನೇ ಹಂತದಲ್ಲಿ ಎಲ್ಲ 30 ವಿಧಾನಸಭಾ ಕ್ಷೇತ್ರಗಳಲ್ಲಿ ಟಿಎಂಸಿ ಹಾಗೂ ಬಿಜೆಪಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.