ADVERTISEMENT

ಚುನಾವಣಾ ಆಯುಕ್ತರ ದುಂಡು ಮೇಜಿನ ಸಮ್ಮೇಳನ: ಇ.ಸಿ–ಎಸ್‌ಇಸಿ ಸಮನ್ವಯಕ್ಕೆ ನಿರ್ಧಾರ

ಪಿಟಿಐ
Published 24 ಫೆಬ್ರುವರಿ 2026, 16:07 IST
Last Updated 24 ಫೆಬ್ರುವರಿ 2026, 16:07 IST
ಜ್ಞಾನೇಶ್ ಕುಮಾರ್‌
ಜ್ಞಾನೇಶ್ ಕುಮಾರ್‌   

ನವದೆಹಲಿ: ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಗಳಿಗೆ ಸಂಬಂಧಿಸಿದ ಕಾನೂನುಗಳೊಂದಿಗೆ ಸ್ಥಳೀಯ ಸಂಸ್ಥೆ ಚುನಾವಣೆಗಳಿಗೆ ಸಂಬಂಧಿಸಿದ ಕಾನೂನುಗಳನ್ನು ಸಮನ್ವಯಗೊಳಿಸುವ ಸಂಬಂಧ ಜತೆಯಾಗಿ ಕೆಲಸ ಮಾಡಲು ಚುನಾವಣಾ ಆಯೋಗ (ಇ.ಸಿ) ಹಾಗೂ ವಿವಿಧ ರಾಜ್ಯಗಳ ಚುನಾವಣಾ ಆಯೋಗಗಳು (ಎಸ್‌ಇಸಿ) ನಿರ್ಧರಿಸಿವೆ.

ಮಂಗಳವಾರ ಇಲ್ಲಿ ನಡೆದ ಮುಖ್ಯ ಚುನಾವಣಾ ಆಯುಕ್ತರ ಮತ್ತು ವಿವಿಧ ರಾಜ್ಯಗಳ ಚುನಾವಣಾ ಆಯುಕ್ತರ ದುಂಡು ಮೇಜಿನ ಸಮ್ಮೇಳನದಲ್ಲಿ ಈ ಕುರಿತ ಘೋಷಣೆಯನ್ನು ಅಂಗೀಕರಿಸಲಾಯಿತು.

‘ರಾಷ್ಟ್ರೀಯ ಮತ್ತು ಸಾಂವಿಧಾನಿಕ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ದೇಶದಾದ್ಯಂತ ಎಲ್ಲಾ ರಾಜ್ಯಗಳ ಚುನಾವಣಾ ಆಯೋಗಗಳ ಜತೆ ಸಮನ್ವಯದಿಂದ ಕೆಲಸ ಮಾಡಲು ನಿರ್ಧರಿಸಲಾಗಿದೆ. ಇಸಿಐನೆಟ್, ಇವಿಎಂಗಳು ಮತ್ತು ಮತದಾರರ ಪಟ್ಟಿಗಳ ಹಂಚಿಕೆಯೂ ಇದರಲ್ಲಿ ಸೇರಿವೆ’ ಎಂದು ಘೋಷಣೆಯಲ್ಲಿ ಹೇಳಲಾಗಿದೆ.

ADVERTISEMENT

‘ಪಂಚಾಯತ್‌ಗಳು ಮತ್ತು ಇತರ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಿಗೆ ಸಂಬಂಧಿಸಿದ ಕಾನೂನುಗಳನ್ನು ಸಂಸತ್ತು ಮತ್ತು ರಾಜ್ಯ ಶಾಸಕಾಂಗಗಳ ಚುನಾವಣೆಗಳಿಗೆ ಸಂಬಂಧಿಸಿದ ಕಾನೂನುಗಳೊಂದಿಗೆ ‘ಸಮನ್ವಯಗೊಳಿಸಲು’ ಇ.ಸಿ ಮತ್ತು ಎಸ್‌ಇಸಿಗಳು ಒಟ್ಟಾಗಿ ಕೆಲಸ ಮಾಡುತ್ತವೆ’ ಎಂದು ಹೇಳಿದೆ.

ದೋಷರಹಿತ ಮತದಾರರ ಪಟ್ಟಿಯನ್ನು ಸಿದ್ಧಪಡಿಸುವುದು ಪ್ರಜಾಪ್ರಭುತ್ವದ ಮೂಲಾಧಾರವಾಗಿದೆ ಮತ್ತು ಎಲ್ಲ ಚುನಾವಣೆಗಳನ್ನು ಪಾರದರ್ಶಕವಾಗಿ ನಡೆಸುವುದು ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬಲಪಡಿಸುತ್ತದೆ ಎಂಬುದನ್ನು ಸಮ್ಮೇಳನದಲ್ಲಿ ಪಾಲ್ಗೊಂಡ ಎಲ್ಲರೂ ಒಪ್ಪಿಕೊಂಡರು.

27 ವರ್ಷಗಳ ಬಿಡುವಿನ ಬಳಿಕ ನಡೆದ ದುಂಡು ಮೇಜಿನ ಸಮ್ಮೇಳನದಲ್ಲಿ ಮಾತನಾಡಿದ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್‌, ‘ಚುನಾವಣಾ ಆಯೋಗ ಮತ್ತು ರಾಜ್ಯ ಚುನಾವಣಾ ಆಯೋಗಗಳು ಮತದಾರರನ್ನು ಗಮನದಲ್ಲಿಟ್ಟುಕೊಂಡು ಒಟ್ಟಾಗಿ ಕೆಲಸ ಮಾಡಬೇಕು’ ಎಂದು ಹೇಳಿದರು.

ರಾಷ್ಟ್ರಪತಿ, ಉಪರಾಷ್ಟ್ರಪತಿ, ಲೋಕಸಭೆ, ರಾಜ್ಯಸಭೆ ಮತ್ತು ರಾಜ್ಯ ವಿಧಾನಸಭೆಗಳಿಗೆ ಚುನಾವಣೆ ನಡೆಸುವ ಜವಾಬ್ದಾರಿಯು ಚುನಾವಣಾ ಅಯೋಗದ್ದಾಗಿದ್ದರೆ, ರಾಜ್ಯ ಚುನಾವಣಾ ಆಯೋಗಗಳು ಪಂಚಾಯತ್ ಮತ್ತು ಇತರ ಸ್ಥಳೀಯ ಸಂಸ್ಥೆಗಳಿಗೆ ನಡೆಸುತ್ತವೆ.

‘ಪ್ರತಿ ವರ್ಷ ಸಮ್ಮೇಳನ

ಚುನಾವಣಾ ಆಯೋಗವು ಪಾಲ್ಗೊಳ್ಳುವ ಅಂತರರಾಷ್ಟ್ರೀಯ ಸಮ್ಮೇಳನಗಳಲ್ಲಿ ಎಸ್‌ಇಸಿಗಳೂ ಪಾಲ್ಗೊಳ್ಳಬೇಕು ಎಂದು ಮುಖ್ಯ ಚುನಾವಣಾ ಆಯುಕ್ತರು ಮನವಿ ಮಾಡಿದರು. ಇಂತಹ ರಾಷ್ಟ್ರೀಯ ದುಂಡುಮೇಜಿನ ಸಮ್ಮೇಳನವನ್ನು ಪ್ರತಿ ವರ್ಷ ನಡೆಸುವ ಪ್ರಸ್ತಾಪವನ್ನೂ ಅವರು ಮುಂದಿಟ್ಟರು.  ಈ ಸಮ್ಮೇಳನದಲ್ಲಿ ಎಸ್‌ಇಸಿಗಳು ನೀಡಿರುವ ಎಲ್ಲಾ ಸಲಹೆಗಳನ್ನು ಆಯೋಗದ ಕಾನೂನು ಮತ್ತು ತಾಂತ್ರಿಕ ಅಧಿಕಾರಿಗಳ ಜಂಟಿ ತಂಡವು ವಿವರವಾಗಿ ಅಧ್ಯಯನ ನಡೆಸಲಿದೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.