
ಚುನಾವಣಾ ಆಯೋಗ
ಪಿಟಿಐ ಚಿತ್ರ
ಕೋಲ್ಕತ್ತ/ಪಣಜಿ: ನೊಬೆಲ್ ಪ್ರಶಸ್ತಿ ಪುರಸ್ಕೃತ ಅಮರ್ತ್ಯ ಸೆನ್ ಮತ್ತು ಕ್ರಿಕೆಟಿಗ ಮೊಹಮ್ಮದ್ ಶಮಿ ಅವರಿಗೆ ಎಸ್‌ಐಆರ್ ಸಂಬಂಧಿತ ವಿಚಾರಣೆಗೆ ಹಾಜರಾಗುವಂತೆ ಚುಣಾವಣಾ ಆಯೋಗವು ನೋಟಿಸ್ ನೀಡಿದ್ದು ವಿವಾದ ಸೃಷ್ಟಿಸಿತ್ತು. ಇದಕ್ಕೆ ಪಶ್ಚಿಮ ಬಂಗಾಳದ ಮುಖ್ಯ ಚುನಾವಣಾ ಅಧಿಕಾರಿ (ಸಿಇಒ) ಸ್ಪಷ್ಟನೆ ನೀಡಿದ್ದು, ‘ಇದು ಸುಳ್ಳು ಸುದ್ದಿ’ ಎಂದು ಹೇಳಿದ್ದಾರೆ.
‘ಇವರಿಗೆ ನೋಟಿಸ್ ನೀಡಿರುವುದು ಎಸ್ಐಆರ್ ಪ್ರಕ್ರಿಯೆಯ ಭಾಗವೇ ಹೊರತು ಯಾವುದನ್ನೂ ಉದ್ದೇಶಪೂರ್ವಕವಾಗಿ, ಯಾರನ್ನೂ ಗುರಿಯಾಗಿಸಿ ಮಾಡಿದ್ದಲ್ಲ’ ಎಂದು ಆಯೋಗವು ‘ಎಕ್ಸ್’ನಲ್ಲಿ ಬುಧವಾರ ಪೋಸ್ಟ್ ಹಂಚಿಕೊಂಡಿದೆ.
‘ಅಮರ್ತ್ಯ ಸೆನ್ ಅವರು ಸಾಗರೋತ್ತರ ಮತದಾರರೆಂದು ಎಸ್‌ಐಆರ್ ನಮೂನೆಯನ್ನು ಭರ್ತಿ ಮಾಡಿದ್ದಾರೆ. ಇದನ್ನು ಅವರ ತಾಯಿ ಅಮಿತಾ ಸೆನ್ ಅವರ ಸಂಬಂಧಿ ಶಾಂತಬಾನು ಸೆನ್ ಅವರ ಮೂಲಕ ಸಲ್ಲಿಸಲಾಗಿತ್ತು. ಅಮರ್ತ್ಯ ಸೆನ್ ಮತ್ತು ಅವರ ತಾಯಿ ವಯಸ್ಸಿನ ಅಂತರವು 15 ವರ್ಷಕ್ಕಿಂತ ಕಡಿಮೆ ಇರುವುದು ನಮೂನೆಯಿಂದ ಕಂಡುಬಂದಿತು’ ಎಂದು ಆಯೋಗ ಹೇಳಿದೆ.
‘ಇಂಥ ವ್ಯತ್ಯಾಸಗಳು ಕಂಡುಬಂದಾಗ ಸಾಮಾನ್ಯವಾಗಿ ಎಲ್ಲರಿಗೂ ನೋಟಿಸ್ ಜಾರಿ ಮಾಡಲಾಗುತ್ತದೆ. ಬೇರೆ ಎಲ್ಲರಂತೆಯೇ ಸೆನ್ ಅವರಿಗೂ ನೋಟಿಸ್ ನೀಡಲಾಗಿದೆ. ಅವರಿಗೆ 85 ವರ್ಷ ದಾಟಿದ್ದರಿಂದ ಅಧಿಕಾರಿಗಳು ಅವರ ಮನೆಗೇ ತೆರಳಿ ಕೆಲವು ಔಪಚಾರಿಕವಾದ ಕಾರ್ಯಗಳನ್ನು ಪೂರ್ಣಗೊಳಿಸಿದ್ದಾರೆ’ ಎಂದರು.
‘ಶಮಿ ಅವರು ನಮೂನೆಯಲ್ಲಿನ ಕೆಲವು ಕಡ್ಡಾಯವಾದ ಕಾಲಂಗಳನ್ನು ಭರ್ತಿ ಮಾಡದೇ ಖಾಲಿ ಬಿಟ್ಟಿದ್ದರು. ಈ ಕಾರಣದಿಂದ ಶಮಿ ಮತ್ತು ಅವರ ಕುಟುಂಬದವರಿಗೆ ಸ್ವಯಂಚಾಲಿತವಾಗಿ ನೋಟಿಸ್ ಜಾರಿಯಾಗಿದೆ’ ಎಂದು ಆಯೋಗ ತನ್ನ ಸ್ಪಷ್ಟನೆಯಲ್ಲಿ ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.