ADVERTISEMENT

ಸಂವಿಧಾನ ಹಳಿಗೆ ತರಲು ಎಮರ್ಜೆನ್ಸಿ: 1975ರ ಶ್ವೇತಪತ್ರ ಬಿಡುಗಡೆ ಮಾಡಿದ ಕಾಂಗ್ರೆಸ್

ಪಿಟಿಐ
Published 26 ಜೂನ್ 2025, 3:00 IST
Last Updated 26 ಜೂನ್ 2025, 3:00 IST
<div class="paragraphs"><p>ಕಾಂಗ್ರೆಸ್ ಬಿಡುಗಡೆ ಮಾಡಿದ ಶ್ವೇತ ಪತ್ರ</p></div>

ಕಾಂಗ್ರೆಸ್ ಬಿಡುಗಡೆ ಮಾಡಿದ ಶ್ವೇತ ಪತ್ರ

   

ನವದೆಹಲಿ: ಫ್ಯಾಸಿಸ್ಟ್ ಗುಂಪುಗಳ ಚುಟುವಟಿಕೆ ಅನುಮತಿಸಿದ ಎಲ್ಲಾ ಮಿತಿಗಳನ್ನು ಮೀರಿದ್ದರಿಂದ ಪ್ರಜಾಪ್ರಭುತ್ವವನ್ನು ಹಳಿಗೆ ತರಲು 1975ರಲ್ಲಿ ಸರ್ಕಾರ ತುರ್ತು ಪರಿಸ್ಥಿತಿ ಘೋಷಣೆ ಮಾಡಿತು ಎಂದು ಉಲ್ಲೇಖ ಇರುವ ಶ್ವೇತಪತ್ರವನ್ನು ಕಾಂಗ್ರೆಸ್ ಬುಧವಾರ ಹಂಚಿಕೊಂಡಿದೆ.

ದೇಶದಲ್ಲಿ ತುರ್ತು ಪರಿಸ್ಥಿತಿ ಹೇರಿಕೆಗೆ 50 ವರ್ಷ ತುಂಬಿದ ಹಿನ್ನೆಲೆಯಲ್ಲಿ ಆಡಳಿತರೂಢ ಬಿಜೆಪಿ ‘ಸಂವಿಧಾನ ಹತ್ಯಾ ದಿನ’ ಎಂದು ಆಚರಿಸಿತ್ತು. ಅಲ್ಲದೆ ಕೇಂದ್ರ ಸಚಿವ ಸಂಪುಟದಲ್ಲಿ ಮೌನಾಚರಣೆ ಮಾಡುವ ಮೂಲಕ ತುರ್ತು ಪರಿಸ್ಥಿತಿಯ ಸಂತ್ರಸ್ತರಿಗೆ ಶ್ರದ್ಧಾಂಜಲಿ ಸಲ್ಲಿಸಿತ್ತು.

ADVERTISEMENT

ತುರ್ತು ಪರಿಸ್ಥಿತಿಯನ್ನು ಸಮರ್ಥಿಸಿಕೊಂಡು 1975ರ ಜುಲೈ 21 ರಂದು ಸಂಸತ್ತಿನಲ್ಲಿ ಮಂಡಿಸಲಾದ ‌ಶ್ವೇತಪತ್ರವನ್ನು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಹಂಚಿಕೊಂಡಿದ್ದಾರೆ.

‘ಪ್ರಧಾನಮಂತ್ರಿ ಹಾಗೂ ದೇಶದ ಇತರ ನಾಯಕರು ಕಳೆದ ಎರಡು ವರ್ಷಗಳಲ್ಲಿ ದುಷ್ಕರ್ಮಿಗಳು, ತಪ್ಪು ನಿರ್ದೇಶನ ಪಡೆದ ರಾಜಕಾರಣಿಗಳು ಮತ್ತು ಸುಸಂಘಟಿತ ಫ್ಯಾಸಿಸ್ಟ್ ಗುಂಪುಗಳ ಚಟುವಟಿಕೆಗಳ ಪರಿಣಾಮಗಳ ಬಗ್ಗೆ ದೇಶಕ್ಕೆ ಎಚ್ಚರಿಕೆ ನೀಡಿದ್ದಾರೆ. ಇಂತಹ ಚಟುವಟಿಕೆಗಳು ಅನುಮತಿಸಿದ ಎಲ್ಲಾ ಮಿತಿಗಳನ್ನು ಮೀರಿದಾಗ ತುರ್ತು ಪರಿಸ್ಥಿತಿ ಹೇರುವುದು ಅನಿವಾರ್ಯವಾಯಿತು’ ಎಂದು ಶ್ವೇತಪತ್ರದಲ್ಲಿ ಉಲ್ಲೇಖವಿದೆ.

‘ಸಂಸತ್ತಿನಲ್ಲಿ ಕೆಲವೇ ಕೆಲವು ಶ್ವೇತಪತ್ರಗಳನ್ನು ಮಂಡಿಸಲಾಗಿದೆ. 1975ರ ಜುಲೈ 21ರಂದು ಮಂಡಿಸಿದ್ದು ಇಲ್ಲಿದೆ. ಇದು ಐತಿಹಾಸಿಕ ಆಸಕ್ತಿ‍’ ಹೊಂದಿದೆ ಎಂದು ರಮೇಶ್‌ ‘ಎಕ್ಸ್’ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ.

‘ದೇಶದಲ್ಲಿ ಕಾನೂನು ಸುವ್ಯವಸ್ಥೆ ಹಾಗೂ ಸ್ಥಿರತೆ ಕಾಪಾಡಿಕೊಳ್ಳಲು ತುರ್ತು ಪರಿಸ್ಥಿತಿ ಹಾಗೂ ಇತರ ಕ್ರಮಗಳನ್ನು ತೆಗೆದುಕೊಳ್ಳಲಾಯಿತು. ಭಾರತೀಯ ಸಮಾಜದ ವಿವಿಧ ಸ್ತರಗಳ ಜನರು ಸ್ವಾಗತಿಸಿದ್ದಾರೆ’ ಎನ್ನುವ ಉಲ್ಲೇಖ ಶ್ವೇತಪತ್ರದಲ್ಲಿ ಇದೆ.

‘ಪ್ರಜಾಪ್ರಭುತ್ವವನ್ನು ಮತ್ತೆ ಹಳಿ ಮೇಲೆ ತರುವುದು ಮತ್ತು ಕೆಲವು ಸಂಘಟಿತ ಪ್ರಜಾಪ್ರಭುತ್ವ ವಿರೋಧಿ ಚಟುವಟಿಕೆಗಳಿಂದಾಗಿ ದೇಶವು ವರ್ಷಗಳಿಂದ ಅಭಿವೃದ್ಧಿಪಡಿಸಿದ ಪ್ರಾತಿನಿಧಿಕ ಸಂಸ್ಥೆಗಳ ಅಂತ್ಯಕ್ಕೆ ಕಾರಣವಾಗದಂತೆ ನೋಡಿಕೊಳ್ಳುವುದು ಸರ್ಕಾರದ ಪ್ರಯತ್ನವಾಗಿದೆ’ ಎಂದು ಪ್ರಧಾನಿ ಇಂದಿರಾ ಗಾಂಧಿ ಹೇಳಿದ್ದರು.

‘ಫ್ಯಾಸಿಸ್ಟ್ ಒಲವು ಹೊಂದಿರುವ ಕೆಲವು ರಾಜಕೀಯ ಪಕ್ಷಗಳು ನಿರಾಶೆಗೊಂಡ ರಾಜಕಾರಣಿಗಳ ಗುಂಪಿನೊಂದಿಗೆ ಸೇರಿಕೊಂಡು ದೇಶದ ಆತ್ಮ ವಿಶ್ವಾಸವನ್ನು ನಾಶಮಾಡಲು ಮತ್ತು ಪ್ರಜಾಪ್ರಭುತ್ವದ ಕಾರ್ಯಚಟುವಟಿಕೆಗಳ ಅಡಿಪಾಯವನ್ನೇ ಪ್ರಶ್ನಿಸಲು ಪ್ರಯತ್ನಿಸಿದವು. ಅವರು ಪ್ರಜಾಪ್ರಭುತ್ವದ ಹೆಸರಿನಲ್ಲಿ ಹಿಂಸಾತ್ಮಕ ಆಂದೋಲನಗಳನ್ನು ಪ್ರಾರಂಭಿಸಲು, ದೇಶದ ಆರ್ಥಿಕ ಜೀವನವನ್ನು ದುರ್ಬಲಗೊಳಿಸಲು, ರಾಷ್ಟ್ರದ ಗಮನವನ್ನು ಅದರ ಸಾಮಾಜಿಕ ಮತ್ತು ಆರ್ಥಿಕ ಕಾರ್ಯಗಳಿಂದ ಬೇರೆಡೆಗೆ ತಿರುಗಿಸಲು ಮತ್ತು ಜನರಿಂದ ಚುನಾಯಿತ ಪ್ರತಿನಿಧಿಗಳನ್ನು ಉರುಳಿಸಲು ಅರಾಜಕತೆ ಮತ್ತು ಅವ್ಯವಸ್ಥೆಯನ್ನು ಸೃಷ್ಟಿಸಲು ಪ್ರಚಾರ ಮಾಡಿದರು’ ಎಂದು ಶ್ವೇತ ಪತ್ರದಲ್ಲಿ ಹೇಳಲಾಗಿತ್ತು.

‘ರಾಜಕೀಯ ಸುವ್ಯವಸ್ಥೆಯನ್ನು ಖಚಿತಪಡಿಸಿಕೊಂಡರೆ ಮಾತ್ರ ಜನರ ಪ್ರಜಾಸತ್ತಾತ್ಮಕ ಹಕ್ಕುಗಳನ್ನು ರಕ್ಷಿಸಬಹುದು. ಪ್ರಜಾಪ್ರಭುತ್ವ ವಿರೋಧಿ ಮತ್ತು ಫ್ಯಾಸಿಸ್ಟ್ ಅಂಶಗಳು ಅಧಿಕಾರಕ್ಕೆ ಏರಲು ಮತ್ತು ಜನರ ಎಲ್ಲಾ ರಾಜಕೀಯ ಮತ್ತು ಆರ್ಥಿಕ ಹಕ್ಕುಗಳನ್ನು ಕೊನೆಗೊಳಿಸಲು ಸುವ್ಯವಸ್ಥೆಯ ಕೊರತೆಯನ್ನು ಹೆಚ್ಚಾಗಿ ಬಳಸಿಕೊಳ್ಳುತ್ತವೆ’ ಎಂದು ಅದರಲ್ಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.