ಸಂವಿಧಾನದ ಪ್ರತಿ ಹಾಗೂ ದತ್ತಾತ್ರೇಯ ಹೊಸಬಾಳೆ
ನವದೆಹಲಿ: 'ಸಮಾಜವಾದಿ' ಹಾಗೂ 'ಜಾತ್ಯಾತೀತ ಪದಗಳನ್ನು ಸಂವಿಧಾನದ ಪ್ರಸ್ತಾವನೆಯಿಂದ ಕೈಬಿಡಬೇಕು ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರ್‌ಎಸ್‌ಎಸ್) ಪ್ರಧಾನ ಕಾರ್ಯದರ್ಶಿ ದತ್ತಾತ್ರೇಯ ಹೊಸಬಾಳೆ ಆಗ್ರಹಿಸಿದ್ದಾರೆ.
ದೆಹಲಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಹೊಸಬಾಳೆ, ಮಾಜಿ ಪ್ರಧಾನಿ, ದಿ. ಇಂದಿರಾ ಗಾಂಧಿ ಅವರು 1975ರ ಜೂನ್ 25ರಂದು ತುರ್ತುಪರಿಸ್ಥಿತಿ ಹೇರಿದ್ದರು. ಆ ಸಂದರ್ಭದಲ್ಲಿ 'ಸಮಾಜವಾದಿ' ಹಾಗೂ 'ಜಾತ್ಯಾತೀತ ಪದಗಳನ್ನು ಸಂವಿಧಾನದ ಪ್ರಸ್ತಾವನೆಯಲ್ಲಿ ಸೇರಿಸಲಾಗಿತ್ತು ಎಂದು ಹೇಳಿದ್ದಾರೆ.
'ತುರ್ತುಪರಿಸ್ಥಿತಿ ಸಂದರ್ಭದಲ್ಲಿ ಸಾವಿರಾರು ಜನರನ್ನು ಜೈಲಿಗಟ್ಟಲಾಗಿತ್ತು. ನ್ಯಾಯಾಂಗ ಮತ್ತು ಪತ್ರಿಕಾ ಸ್ವಾತಂತ್ರ್ಯವನ್ನು ಹತ್ತಿಕ್ಕಲಾಗಿತ್ತು' ಎಂದು ಆಕ್ರೋಶ ವ್ಯಕ್ತಪಡಿಸಿರುವ ಅವರು, 'ಆ ಸಂದರ್ಭದಲ್ಲಿ ಸಾಕಷ್ಟು ಜನರಿಗೆ ಬಲವಂತವಾಗಿ ಸಂತಾನಹರಣ ಶಸ್ತ್ರಚಿಕಿತ್ಸೆ ಮಾಡಲಾಗಿತ್ತು' ಎಂದೂ ದೂರಿದ್ದಾರೆ.
'ಆಗ ಆ ಕೆಲಸ ಮಾಡಿದವರು ಇಂದು ಸಂವಿಧಾನದ ಪ್ರತಿಗಳನ್ನು ಹಿಡಿದುಕೊಂಡು ಓಡಾಡುತ್ತಿದ್ದಾರೆ. ಈಗಲೂ ಅವರು ಕ್ಷಮೆ ಕೋರಿಲ್ಲ' ಎಂದು ಕಿಡಿಕಾರಿರುವ ಆರ್‌ಎಸ್‌ಎಸ್ ನಾಯಕ, 50 ವರ್ಷಗಳ ಹಿಂದೆ ತುರ್ತುಪರಿಸ್ಥಿತಿ ಹೇರಿದ್ದಕ್ಕಾಗಿ ಕಾಂಗ್ರೆಸ್ ಪಕ್ಷವು ದೇಶದ ಜನರ ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.