ADVERTISEMENT

ಹಣ ಅಕ್ರಮ ವರ್ಗಾವಣೆ ಪ್ರಕರಣ: ‘ಗುಜರಾತ್ ಸಮಾಚಾರ್‌’ ಪತ್ರಿಕೆಯ ಮಾಲೀಕನಿಗೆ ಜಾಮೀನು

ಸತೀಶ್ ಝಾ
Published 16 ಮೇ 2025, 11:29 IST
Last Updated 16 ಮೇ 2025, 11:29 IST
ಇಡಿ ಲೋಗೊ
ಇಡಿ ಲೋಗೊ    

ಅಹಮದಾಬಾದ್‌: ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿ ಜಾರಿ ನಿರ್ದೇಶನಾಯ (ಇ.ಡಿ) ಬಂಧಿಸಿದ್ದ, ‘ಗುಜರಾತ್‌ ಸಮಾಚಾರ್‌’ ದಿನಪತ್ರಿಕೆಯ ಮಾಲೀಕರಲ್ಲಿ ಒಬ್ಬರಾದ ಬಾಹುಬಲಿ ಶಾ ಅವರಿಗೆ ನ್ಯಾಯಾಲಯ ಶುಕ್ರವಾರ ಮಧ್ಯಂತರ ಜಾಮೀನು ನೀಡಿದೆ.

ಬಂಧನಕ್ಕೆ ಒಳಗಾದ ನಂತರ, ಅವರು ಅಸ್ವಸ್ಥರಾದರು. ಹೀಗಾಗಿ ಅವರನ್ನು ಗುರುವಾರ ರಾತ್ರಿ ಆಸ್ಪತ್ರೆಗೆ ದಾಖಲಾಗಿದೆ.

ಶಾ ಪರ ವಾದ ಮಂಡಿಸಿದ ವಕೀಲ ದೇವಾಂಗ ವ್ಯಾಸ್,‘ನನ್ನ ಕಕ್ಷಿದಾರ ತನಿಖೆಗೆ ಸಹಕರಿಸುತ್ತಿದ್ದಾರೆ. ತುಸು ಅಸ್ವಸ್ಥರಾಗಿರುವ ಕಾರಣ ವೈದ್ಯಕೀಯ ಕಾರಣಗಳಿಗಾಗಿ ಅವರು ಜಾಮೀನು ಕೋರಿದ್ದಾರೆ’ ಎಂದು ನ್ಯಾಯಾಲಯಕ್ಕೆ ತಿಳಿಸಿದರು.

ADVERTISEMENT

ಇ.ಡಿ ಅಧಿಕಾರಿಗಳು ಆಕ್ಷೇಪಣೆ ಸಲ್ಲಿಸದ ಕಾರಣ, ವೈದ್ಯಕೀಯ ಕಾರಣಗಳಿಂದಾಗಿ ಅವರಿಗೆ ಮೇ 31ರ ವರೆಗೆ ಜಾಮೀನು ನೀಡಿ, ಪಿಎಂಎಲ್‌ಎ ವಿಶೇಷ ನ್ಯಾಯಾಲಯ ಆದೇಶಿಸಿದೆ.

‘ಶಾ ಬಂಧನಕ್ಕೆ ಕಾರಣ ಗೊತ್ತಾಗಿಲ್ಲ. 30 ವರ್ಷಗಳ ಹಳೆಯ ಪ್ರಕರಣಕ್ಕೆ ಸಂಬಂಧಿಸಿ ಅವರನ್ನು ಬಂಧಿಸಿರಬಹುದು’ ಎಂದು ಅವರ ಅಣ್ಣ ಶ್ರೇಯಾಂಶ್ ಶಾ ‘ಪ್ರಜಾವಾಣಿ‘ಗೆ ತಿಳಿಸಿದ್ದಾರೆ.

ಶಾ ಅವರು ‘ಗುಜರಾತ್‌ ಸಮಾಚಾರ್‌’ ಪತ್ರಿಕೆಯ ಮಾತೃಸಂಸ್ಥೆ ಲೋಕ್ ಪ್ರಕಾಶನ ಲಿಮಿಟೆಡ್‌ ನಿರ್ದೇಶಕರಾಗಿದ್ದಾರೆ. ಶೇಯಾಂಶ್‌ ಶಾ ಅವರು ಪತ್ರಿಕೆಯ ಕಾರ್ಯನಿರ್ವಾಹಕ ಸಂಪಾದಕರಾಗಿದ್ದಾರೆ.

ಶಾ ಅವರನ್ನು ಇ.ಡಿ ಗುರುವಾರ ತಡರಾತ್ರಿ ವಶಕ್ಕೆ ಪಡೆದಿತ್ತು. ಇದಕ್ಕೂ ಮುನ್ನ ಇ.ಡಿ ಅಧಿಕಾರಿಗಳು ಅವರ ಕಚೇರಿಗಳಲ್ಲಿ ಶೋಧ ನಡೆಸಿದ್ದರು.  

ಆದಾಯ ತೆರಿಗೆ ಇಲಾಖೆಯು ಅಹಮದಾಬಾದ್‌ನಲ್ಲಿರುವ ಜಿಎಸ್‌ಟಿವಿ ಕಚೇರಿಯಲ್ಲಿ ಸುಮಾರು 36 ಗಂಟೆ ಶೋಧ ನಡೆಸಿತ್ತು. ಈ ಬೆನ್ನಲ್ಲೇ ಗುರುವಾರ ಸಂಜೆ ಇ.ಡಿ ದಾಳಿ ನಡೆಸಿದೆ ಎಂದು ಜಿಎಸ್‌ಟಿ.ವಿ (’ಗುಜರಾತ್‌ ಸಮಾಚಾರ್‌’ನ ಅಂಗಸಂಸ್ಥೆ) ಡಿಜಿಟಲ್ ವಿಭಾಗದ ಮುಖ್ಯಸ್ಥ ತುಷಾರ್‌ ದವೆ ಅವರು ಫೇಸ್‌ಬುಕ್‌ನಲ್ಲಿ ಪೋಸ್ಟ್‌ ಮಾಡಿದ್ದಾರೆ.

ಕಾಂಗ್ರೆಸ್‌ ಖಂಡನೆ

‘ಗುಜರಾತ್‌ ಸಮಾಚಾರ್‌’ ಮಾಲೀಕರ ವಿರುದ್ಧದ ಇ.ಡಿ ಕೈಗೊಂಡರುವ ಕ್ರಮವವನ್ನು ಖಂಡಿಸಿರುವ ಕಾಂಗ್ರೆಸ್‌ ‘ಕೇಂದ್ರ ಸರ್ಕಾರದ ವಿರುದ್ಧ ಧ್ವನಿ ಎತ್ತುವವರು ಅಥವಾ ಬಿಜೆಪಿ ಜೊತೆ ಹೊಂದಾಣಿಕೆ ಮಾಡಿಕೊಳ್ಳದವರು ಜೈಲಿಗೆ ಹೋಗಬೇಕಾಗುತ್ತದೆ’ ಎಂದು ಟೀಕಿಸಿದೆ.

‘ಸರ್ಕಾರವು ಸ್ವತಂತ್ರ ಮಾಧ್ಯಮಗಳ ಮೇಲೆ ಒತ್ತಡ ಹೇರುತ್ತಿದ್ದು ಇದು ಪ್ರಜಾಪ್ರಭುತ್ವಕ್ಕೆ ಮಾರಕವಾಗಿದೆ’ ಎಂದು ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ‘ಎಕ್ಸ್‌’ನ‌ಲ್ಲಿ ಪೋಸ್ಟ್ ಮಾಡಿದ್ದಾರೆ.

‘ಟೀಕೆಯು ಪ್ರಜಾಪ್ರಭುತ್ವದ ಆತ್ಮ’ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಇತ್ತೀಚಿನ ಸಂದರ್ಶನವೊಂದರಲ್ಲಿ ಹೇಳಿರುವುದನ್ನು ಉಲ್ಲೇಖಿಸಿದ ಖರ್ಗೆ ‘ಟೀಕಿಸುವವರನ್ನು ಬಂಧಿಸುವುದು ಭಯಭೀತ ಸರ್ವಾಧಿಕಾರಿಯ ಮೊದಲ ಲಕ್ಷಣ’ ಎಂದು ಹೇಳಿದ್ದಾರೆ.

‘ಇದು ಮಾಧ್ಯಮಗಳ ಧ್ವನಿ ಅಡಗಿಸುವುದು ಮಾತ್ರವಲ್ಲ ಪ್ರಜಾಪ್ರಭುತ್ವವನ್ನೂ ದಮನ ಮಾಡುವ ಪ್ರಯತ್ನ’ ಎಂದು ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕರಾದ ರಾಹುಲ್‌ ಗಾಂಧಿ ಟೀಕಿಸಿದ್ದಾರೆ. ‘ಗುಜರಾತ್‌ ಸಮಾಚಾರ್‌ ಮತ್ತು ಅದರ ಮಾಲೀಕರನ್ನು ಗುರಿಯಾಗಿಸಲಾಗಿದೆ. ಯಾಕೆಂದರೆ ಈ ಪತ್ರಿಕೆಯು ಕಳೆದ 25 ವರ್ಷಗಳಿಂದ ಕೇಂದ್ರ ಸರ್ಕಾರವನ್ನು ಟೀಕಿಸುತ್ತಿದೆ’ ಎಂದು ಕಾಂಗ್ರೆಸ್‌ನ ಮತ್ತೊಬ್ಬ ನಾಯಕ ಜಿಗ್ನೇಶ್‌ ಮೇವಾನಿ ಹೇಳಿದ್ದಾರೆ. 

ಎಎಪಿ ಸಂಚಾಲಕ ಅರವಿಂದ ಕೇಜ್ರಿವಾಲ್ ಕೂಡ ಬಾಹುಬಲಿ ಶಾ ಬಂಧನ ಖಂಡಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.