ADVERTISEMENT

ನ್ಯಾಷನಲ್ ಹೆರಾಲ್ಡ್‌ ಪ್ರಕರಣ: ವಿಚಾರಣೆಗೆ ರಾಹುಲ್‌ಗೆ ಮತ್ತೊಂದು ದಿನಾಂಕ

ಪಿಟಿಐ
Published 3 ಜೂನ್ 2022, 7:42 IST
Last Updated 3 ಜೂನ್ 2022, 7:42 IST
ರಾಹುಲ್‌ ಗಾಂಧಿ –ಸಂಗ್ರಹ ಚಿತ್ರ
ರಾಹುಲ್‌ ಗಾಂಧಿ –ಸಂಗ್ರಹ ಚಿತ್ರ   

ನವದೆಹಲಿ: ನ್ಯಾಷನಲ್‌ ಹೆರಾಲ್ಡ್‌ ಪತ್ರಿಕೆಗೆ ಸಂಬಂಧಿಸಿದ ಪ್ರಕರಣದಲ್ಲಿ ವಿಚಾರಣೆಗಾಗಿ ಕಾಂಗ್ರೆಸ್‌ ಸಂಸದ ರಾಹುಲ್‌ ಗಾಂಧಿ (51) ಅವರನ್ನು ಜೂನ್‌ 13ಕ್ಕೆ ಹಾಜರಾಗುವಂತೆ ಜಾರಿ ನಿರ್ದೇಶನಾಲಯವು (ಇ.ಡಿ) ಸೂಚಿಸಿ ಸಮನ್ಸ್‌ ನೀಡಿದೆ.

ಹಣ ಅಕ್ರಮ ವರ್ಗಾವಣೆಯ ಬಗ್ಗೆ ಆರೋಪಿಸಿರುವ ಇ.ಡಿ. ಜೂನ್‌ 2ಕ್ಕೆ ಹಾಜರಾಗುವಂತೆ ಈ ಹಿಂದೆ ಸೂಚಿಸಿತ್ತು. ಆದರೆ, ವಿದೇಶದಲ್ಲಿರುವ ಕಾರಣ ವಿಚಾರಣೆಗೆ ಹಾಜರಾಗಲು ಕಾಲಾವಕಾಶ ನೀಡುವಂತೆ ರಾಹುಲ್ ಕೋರಿದ್ದರು. ಇದೀಗ ಜೂನ್‌ 13ಕ್ಕೆ ದೆಹಲಿಯಲ್ಲಿರುವ ಇ.ಡಿ ಮುಖ್ಯ ಕಚೇರಿಗೆ ಬರುವಂತೆ ಸೂಚಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ರಾಹುಲ್‌ ಅವರ ತಾಯಿ, ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ (75) ಅವರಿಗೂ ಇದೇ ಪ್ರಕರಣದ ಸಂಬಂಧ ವಿಚಾರಣೆಗೆ ಜೂನ್‌ 8ರಂದು ಹಾಜರಾಗುವಂತೆ ಸಮನ್ಸ್‌ ನೀಡಲಾಗಿದೆ. ಆದರೆ, ಗುರುವಾರ ಸೋನಿಯಾ ಅವರಿಗೆ ಕೋವಿಡ್‌ ದೃಢಪಟ್ಟಿದೆ. ಅವರು ಮನೆಯಲ್ಲಿಯೇ ಪ್ರತ್ಯೇಕ ವಾಸದಲ್ಲಿದ್ದಾರೆ.

ADVERTISEMENT

ಹಣ ಅಕ್ರಮ ವರ್ಗಾವಣೆ ನಿಯಂತ್ರಣ ಕಾಯ್ದೆ ಅಡಿಯಲ್ಲಿ ರಾಹುಲ್‌ ಮತ್ತು ಸೋನಿಯಾ ಗಾಂಧಿ ಅವರ ಹೇಳಿಕೆಗಳನ್ನು ದಾಖಲಿಸಲು ಇ.ಡಿ. ಮುಂದಾಗಿದೆ.

ನ್ಯಾಷನಲ್‌ ಹೆರಾಲ್ಡ್‌ ಪತ್ರಿಕೆಯ ಮಾಲೀಕತ್ವವನ್ನು ಯಂಗ್‌ ಇಂಡಿಯಾ ಪ್ರೈವೇಟ್‌ ಲಿಮಿಟೆಡ್‌ ಹೊಂದಿದೆ.

ಇದೇ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯವು ಇತ್ತೀಚೆಗೆ ಕಾಂಗ್ರೆಸ್ ಮುಖಂಡ ಮಲ್ಲಿಕಾರ್ಜುನ ಖರ್ಗೆ ಮತ್ತು ಪವನ್‌ ಬನ್ಸಾಲ್‌ ಅವರ ವಿಚಾರಣೆ ನಡೆಸಿತ್ತು.

ಇ.ಡಿ. ಕ್ರಮವನ್ನು ಕಾಂಗ್ರೆಸ್‌ ಪಕ್ಷವು 'ಹಗೆತನ' ಎಂದು ಆರೋಪಿಸಿದೆ.

‘ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಹರಿಯಾಣದ ಮಾಜಿ ಮುಖ್ಯಮಂತ್ರಿ ಭೂಪಿಂದರ್ ಸಿಂಗ್ ಹೂಡಾ ಸೇರಿದಂತೆ ಪ್ರಕರಣದ ಆರೋಪಿಗಳು ಪಂಚಕುಲಾದಲ್ಲಿ ಅಸೋಸಿಯೇಟೆಡ್ ಜರ್ನಲ್ಸ್ ಲಿಮಿಟೆಡ್‌ಗೆ (ಎಜೆಎಲ್‌) ಅಕ್ರಮವಾಗಿ ಹಂಚಿಕೆಯಾದ ನಿವೇಶನದ ಜಾಗವನ್ನು ಬಳಸಿಕೊಂಡಿದ್ದಾರೆ. ಮುಂಬೈನ ಬಾಂದ್ರಾದಲ್ಲಿ ಕಟ್ಟಡ ನಿರ್ಮಿಸುವ ಉದ್ದೇಶದಿಂದ ಈ ಜಾಗವನ್ನು ಸಿಂಡಿಕೇಟ್ ಬ್ಯಾಂಕ್‌ನಲ್ಲಿ ಅಡಮಾನವಾಗಿ ಇರಿಸಲಾಗಿದೆ. ಈ ಆಸ್ತಿಯ ಮೌಲ್ಯ ₹16.38 ಕೋಟಿಯಷ್ಟಿದೆ’ ಎಂದು ಇ.ಡಿ. ಆರೋಪಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.