ಶಿಮ್ಲಾ: ಹಿಮಾಚಲ ಪ್ರದೇಶವನ್ನು ‘ವಿಪತ್ತು ಪೀಡಿತ’ ರಾಜ್ಯ ಎಂದು ಘೋಷಿಸಲಾಗಿದ್ದು, ಸಂಕಷ್ಟದಲ್ಲಿ ಸಿಲುಕಿರುವವರ ರಕ್ಷಣಾ ಕಾರ್ಯ ಭರದಿಂದ ಸಾಗಿದೆ ಎಂದು ಮುಖ್ಯಮಂತ್ರಿ ಸುಖವಿಂದರ್ ಸಿಂಗ್ ಸೋಮವಾರ ವಿಧಾನಸಭೆಗೆ ತಿಳಿಸಿದರು.
‘ಚಂಬಾ ಜಿಲ್ಲೆಯ ಮಣಿಮಹೇಶ ಯಾತ್ರೆಗೆ ತೆರಳಿ ಪ್ರವಾಹದಲ್ಲಿ ಸಿಲುಕಿದ್ದ 15 ಸಾವಿರ ಯಾತ್ರಾರ್ಥಿಗಳಲ್ಲಿ 10 ಸಾವಿರ ಜನರನ್ನು ರಕ್ಷಣೆ ಮಾಡಲಾಗಿದ್ದು, ಕಾರ್ಯಾಚರಣೆ ಮುಂದುವರಿದಿದೆ. ಸದ್ಯ ಪರಿಸ್ಥಿತಿಯನ್ನು ಅವಲೋಕಿಸಲಾಗುತ್ತಿದೆ. ಮೇಘಸ್ಫೋಟ, ಪ್ರವಾಹ, ಭೂಕುಸಿತದಿಂದಾಗಿ ರಾಜ್ಯಕ್ಕೆ ₹3,560 ಕೋಟಿಯಷ್ಟು ನಷ್ಟವಾಗಿದೆ. ರಸ್ತೆ, ಸೇತುವೆ, ನೀರು ಮತ್ತು ವಿದ್ಯುತ್ ಪೂರೈಕೆ ವ್ಯವಸ್ಥೆಗೆ ಹೆಚ್ಚು ಹಾನಿಯಾಗಿದೆ. ಪ್ರವಾಹ ಪೀಡಿತ ಪ್ರದೇಶಗಳಲ್ಲಿ ವೈಮಾನಿಕ ಸಮೀಕ್ಷೆ ನಡೆಸಿದ್ದೇನೆ’ ಎಂದು ಸಿಎಂ ವಿವರಿಸಿದರು.
ರಕ್ಷಣಾ ಕಾರ್ಯದ ಬಗ್ಗೆ ಮಾಹಿತಿ ನೀಡಿದ ಅವರು, ‘ಕುಲ್ಲು– ಮಂಡಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರ ಆರಂಭವಾಗಿದೆ. ರಸ್ತೆಯಲ್ಲಿ ಸಿಲುಕಿದ್ದ ಹಣ್ಣು, ತರಕಾರಿಗಳ ವಾಹನಗಳು ಕುಲ್ಲು ಮೂಲಕ ಸಾಗಿವೆ. ಬಹುತೇಕ ಪ್ರದೇಶಗಳಲ್ಲಿ ವಿದ್ಯುತ್, ಟೆಲಿಫೋನ್ ಸಂಪರ್ಕವನ್ನು ಮರುಸ್ಥಾಪಿಸಲಾಗಿದೆ. ಕಿಲಾಂಗ್ ಪ್ರದೇಶದಲ್ಲಿ ಕಿರಾಣಿ ಸಾಮಾನುಗಳನ್ನು ಭಾರತೀಯ ವಾಯುಸೇನೆಯ ಹೆಲಿಕಾಪ್ಟರ್‌ಗಳ ಮೂಲಕ ತಲುಪಿಸಲಾಗಿದೆ. ಇಲ್ಲಿ ಅನಾರೋಗ್ಯ ಸಮಸ್ಯೆ ಎದುರಿಸುತ್ತಿದ್ದ ಐವರು ಮತ್ತು ಗರ್ಭಿಣಿಯೊಬ್ಬರನ್ನು ಏರ್‌ಲಿಫ್ಟ್ ಮಾಡಲಾಗಿದೆ’ ಎಂದು ತಿಳಿಸಿದರು.
76 ವರ್ಷಗಳಲ್ಲೇ ಅಧಿಕ ಮಳೆ
ಹಿಮಾಚಲ ಪ್ರದೇಶದಲ್ಲಿ 76 ವರ್ಷಗಳಲ್ಲೇ ಈ ಬಾರಿ ಅಧಿಕ ಮಳೆಯಾಗಿದೆ. ಆಗಸ್ಟ್‌ನಲ್ಲಿ 431.3 ಮಿಲಿ ಮೀಟರ್ ಮಳೆಯಾಗಿದೆ ಎಂದು ಶಿಮ್ಲಾ ಹವಾಮಾನ ಇಲಾಖೆ ಹೇಳಿದೆ.
ಸಾಮಾನ್ಯವಾಗಿ ಪ್ರತಿವರ್ಷ 256.8 ಮಿ.ಮೀಟರ್ ಮಳೆಯಾಗುತ್ತಿತ್ತು. ಈ ಬಾರಿ 431.3 ಮಿ.ಮೀಟರ್ ಮಳೆಯಾಗಿದ್ದು ಶೇ 68ರಷ್ಟು ಹೆಚ್ಚು ಮಳೆಯಾದಂತಾಗಿದೆ ಎಂದು ಇಲಾಖೆ ಮಾಹಿತಿ ನೀಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.