ADVERTISEMENT

ಪಿಎಫ್‌ಐ ಜೊತೆ ಬಜರಂಗದಳ ಹೋಲಿಕೆ ಕಾಂಗ್ರೆಸ್‌ಗೆ ಮಾರಕವಾಗಲಿದೆ: ಕೇಶವ್‌ ಪ್ರಸಾದ್‌

ಪಿಟಿಐ
Published 4 ಮೇ 2023, 14:30 IST
Last Updated 4 ಮೇ 2023, 14:30 IST
ಉತ್ತರ ಪ್ರದೇಶ ಉಪಮುಖ್ಯಮಂತ್ರಿ ಕೇಶವ್‌ ಪ್ರಸಾದ್‌ ಮೌರ್ಯ
ಉತ್ತರ ಪ್ರದೇಶ ಉಪಮುಖ್ಯಮಂತ್ರಿ ಕೇಶವ್‌ ಪ್ರಸಾದ್‌ ಮೌರ್ಯ   

ಪ್ರಯಾಗರಾಜ್‌ : ‘ಕಾಂಗ್ರೆಸ್ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ರಾಷ್ಟ್ರ ವಿರೋಧಿ ಸಂಘಟನೆ ಪಿಎಫ್‌ಐ ಜೊತೆಗೆ ಬಜರಂಗದಳವನ್ನು ಹೋಲಿಕೆ ಮಾಡಿದೆ. ಕಾಂಗ್ರೆಸ್‌ನ ಈ ನಿರ್ಧಾರವೇ ಚುನಾವಣೆಯಲ್ಲಿ ಅದಕ್ಕೆ ಮಾರಕವಾಗಲಿದೆ‘ ಎಂದು ಉತ್ತರ ಪ್ರದೇಶದ ಉಪ ಮುಖ್ಯಮಂತ್ರಿ ಕೇಶವ್‌ ಪ್ರಸಾದ್‌ ಮೌರ್ಯ ಹೇಳಿದ್ದಾರೆ.

ಬಜರಂಗದಳ, ಪಿಎಫ್‌ಐ(ಪಾಪುಲರ್‌ ಫ್ರಂಟ್‌ ಆಫ್‌ ಇಂಡಿಯಾ) ಸೇರಿದಂತೆ ಜಾತಿ–ಧರ್ಮ, ಸಮುದಾಯಗಳ ನಡುವೆ ದ್ವೇಷ ಹರಡುವ ಎಲ್ಲ ಸಂಘಟನೆಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಕಾಂಗ್ರೆಸ್‌ ತನ್ನ ಪ್ರಣಾಳಿಕೆಯಲ್ಲಿ ಉಲ್ಲೇಖಿಸಿದೆ. ಮುಂದುವರಿದು ಅಂತಹ ಸಂಘಟನೆಗಳನ್ನು ನಿಷೇಧಿಸುವ ಕುರಿತು ಹೇಳಿದೆ. ಕಾಂಗ್ರೆಸ್‌ ಪ್ರಣಾಳಿಕೆಗೆ ವಿರೋಧ ವ್ಯಕ್ತಪಡಿಸಿರುವ ಬಿಜೆಪಿ, ಕಾಂಗ್ರೆಸ್‌ ಪಕ್ಷ ಬಜರಂಗಬಲಿಗೆ (ಹನುಮ) ಅವಮಾನ ಮಾಡಿದೆ ಎಂದು ಹೇಳಿದೆ.

’ಕಾಂಗ್ರೆಸ್‌ ಬಜರಂಗದಳವನ್ನು ಪಿಎಫ್‌ಐ ಜೊತೆ ಹೋಲಿಕೆ ಮಾಡಿದೆ. ಪಿಎಫ್‌ಐ, ನಿಷೇಧಿತ ಸಂಘಟನೆ ಎಸ್‌ಐಎಮ್‌ಐನ (ಸ್ಟೂಡೆಂಟ್‌ ಇಸ್ಲಾಮಿಕ್‌ ಮೂವ್‌ಮೆಂಟ್‌ ಆಫ್‌ ಇಂಡಿಯಾ) ಮತ್ತೊಂದು ಆವೃತ್ತಿಯಾಗಿದೆ. ಕರ್ನಾಟಕವು ಹನುಮಂತನ ಜನ್ಮ ಸ್ಥಳವಾಗಿದ್ದು, ಖಂಡಿತವಾಗಿ ಈ ನಿರ್ಧಾರ ಕಾಂಗ್ರೆಸ್‌ಗೆ ಮುಳುವಾಗಲಿದೆ. ಚುನಾವಣೆಯಲ್ಲಿ ಇದರ ಫಲವನ್ನು ಅನುಭವಿಸಲಿದೆ‘ ಎಂದು ಮೌರ್ಯ ಹೇಳಿದರು.

ADVERTISEMENT

‘ಬಜರಂಗದಳ ಒಂದು ರಾಷ್ಟ್ರೀಯ ಸಂಘಟನೆಯಾಗಿದೆ. ಪಿಎಫ್‌ಐ ರಾಷ್ಟ್ರ ವಿರೋಧಿ ಸಂಘಟನೆಯಾಗಿದೆ. ಈ ಎರಡು ಸಂಘಟನೆಗಳ ನಡುವೆ ಹೋಲಿಕೆ ಸಲ್ಲದು. ಕರ್ನಾಟಕದ ಜೊತೆಗೆ ಇಡೀ ದೇಶದಲ್ಲಿಯೇ ಕಾಂಗ್ರೆಸ್‌ ಸೋಲು ಕಾಣಲಿದೆ‘ ಎಂದರು.

ಕಳೆದ ವರ್ಷ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಪಿಎಫ್‌ಐ ಸಂಘಟನೆಯನ್ನು ನಿಷೇಧ ಮಾಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.