ADVERTISEMENT

ದಲಿತರ ಹತ್ತಿಕ್ಕುತ್ತಿರುವ ವ್ಯವಸ್ಥೆ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕಿಡಿ

ಸಂಜಯ್ ಪಾಂಡೆ, ಲಖನೌ
Published 20 ಫೆಬ್ರುವರಿ 2025, 12:55 IST
Last Updated 20 ಫೆಬ್ರುವರಿ 2025, 12:55 IST
<div class="paragraphs"><p>ರಾಹುಲ್ ಗಾಂಧಿ</p></div>

ರಾಹುಲ್ ಗಾಂಧಿ

   

ರಾಯಬರೇಲಿ: ದೇಶದ ಸಂವಿಧಾನ ರಚನೆಯಲ್ಲಿ ದಲಿತರ ಕೊಡುಗೆ ಅಪಾರ ಎಂದು ಶ್ಲಾಘಿಸಿರುವ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರು, ‘ದೇಶದ ಪ್ರತಿಯೊಬ್ಬ ದಲಿತನೂ ಅಂಬೇಡ್ಕರ್‌. ಇಲ್ಲಿನ ಸಂವಿಧಾನವು ನಿಮ್ಮ ಚಿಂತನೆ, ವಿಚಾರ ಮತ್ತು ಸಿದ್ಧಾಂತವನ್ನೇ ಆಧರಿಸಿದೆ. ಆದರೆ ನೀವು ಇಂದು ಎಲ್ಲಿಗೇ ಹೋದರು ವ್ಯವಸ್ಥೆ ನಿಮ್ಮನ್ನು ಹತ್ತಿಕ್ಕುತ್ತಿದೆ’ ಎಂದು ಬೇಸರ ವ್ಯಕ್ತಪಡಿಸಿದರು.

ಲೋಕಸಭೆಯ ವಿರೋಧ ಪಕ್ಷದ ನಾಯಕ ಹಾಗೂ ರಾಯಬರೇಲಿಯ ಸಂಸದರೂ ಆದ ರಾಹುಲ್‌ ಗಾಂಧಿ ಗುರುವಾರ ಬರ್ಗಡ್‌ ಚೌರಾಹಾ ಬಳಿಯ ‘ಮೂಲ ಭಾರತಿ’ ಹಾಸ್ಟೆಲ್‌ನ ದಲಿತ ವಿದ್ಯಾರ್ಥಿಗಳ ಗುಂಪನ್ನು ಉದ್ದೇಶಿಸಿ ಮಾತನಾಡಿದರು.

ADVERTISEMENT

‘ಸಂವಿಧಾನವನ್ನು ನಿರುಪಯುಕ್ತಗೊಳಿಸುವ ಹುನ್ನಾರ ನಡೆಯುತ್ತಿದ್ದು ಅದಕ್ಕೆ ಅವಕಾಶ ನೀಡಬಾರದು. ಸಂವಿಧಾನವನ್ನು ರಕ್ಷಿಸುವುದು ನಮ್ಮೆಲ್ಲರ ಜವಾಬ್ದಾರಿ’ ಎಂದು ಅವರು ಕರೆ ನೀಡಿದರು.

‘ದಲಿತ ಸಮುದಾಯದವರು ಸಹಸ್ರಾರು ವರ್ಷಗಳಿಂದ ತಾರತಮ್ಯ ಎದುರಿಸುತ್ತಿದ್ದಾರೆ. ಇದನ್ನೆಲ್ಲ ಗಮನದಲ್ಲಿ ಇಟ್ಟುಕೊಂಡೇ ಅಂಬೇಡ್ಕರ್‌ ಅವರು ಸಂವಿಧಾನ ಸಿದ್ಧಪಡಿಸಿದ್ದಾರೆ. ಆ ಮೂಲಕ ದಲಿತರಿಗೆ ಶಕ್ತಿ ತುಂಬುವ ಕೆಲಸ ಮಾಡಿದ್ದಾರೆ’ ಎಂದು ಅವರು ಹೇಳಿದರು.

ಖಾಸಗಿ ವಲಯದಲ್ಲಿ ಮುಂಚೂಣಿಯಲ್ಲಿರುವ 500 ಕಂಪನಿಗಳಲ್ಲಿ ದಲಿತ ಸಮುದಾಯದ ಎಷ್ಟು ಮಂದಿ ಚುಕ್ಕಾಣಿ ಹಿಡಿದಿದ್ದಾರೆ ಎಂದು ರಾಹುಲ್‌ ಇದೇ ವೇಳೆ ಪ್ರಶ್ನಿಸಿದರು. 

ಸಭೆಯಲ್ಲಿದ್ದ ಯುವಕನೊಬ್ಬ ‘ಯಾರೂ ಇಲ್ಲ’ ಎಂದು ಉತ್ತರಿಸಿದಾಗ, ರಾಹುಲ್‌ ಅವರು ‘ಏಕಿಲ್ಲ’ ಎಂದು ಮರು ಪ್ರಶ್ನೆ ಹಾಕಿದರು. ‘ಏಕೆಂದರೆ, ನಮ್ಮ ಬಳಿ ಅಗತ್ಯ ಸೌಲಭ್ಯವಿಲ್ಲ’ ಎಂದು ಮತ್ತೊಬ್ಬ ಯುವಕನಿಂದ ಉತ್ತರ ಬಂದಿತು.

ಇದನ್ನು ಒಪ್ಪದ ರಾಹುಲ್‌, ‘ಬಿ.ಆರ್‌.ಅಂಬೇಡ್ಕರ್‌ ಅವರ ಬಳಿ ಯಾವುದೇ ಸೌಲಭ್ಯಗಳು ಇರಲಿಲ್ಲ. ಅವರು ಒಬ್ಬರೇ ಪ್ರಯತ್ನಿಸಿ, ದೇಶದ ರಾಜಕೀಯವನ್ನೇ ಅಲುಗಾಡಿಸಿದರು’ ಎಂದರು.

‘ಇಲ್ಲಿ ಇಡೀ ವ್ಯವಸ್ಥೆ ನಿಮ್ಮ ವಿರುದ್ಧ ಇದ್ದು, ಅದಕ್ಕೆ ನಿಮ್ಮ ಪ್ರಗತಿ ಬೇಕಿಲ್ಲ. ಆ ವ್ಯವಸ್ಥೆಯು ನಿಮ್ಮ ಮೇಲೆ ನಿತ್ಯ ದಾಳಿ ನಡೆಸುತ್ತಿರುತ್ತದೆ. ಆದರೆ, ಬಹುತೇಕ ಬಾರಿ ಅದು ಹೇಗೆ ದಾಳಿ ನಡೆಸುತ್ತಿದೆ ಎಂಬುದೇ ನಿಮಗೆ ಗೊತ್ತಾಗುವುದಿಲ್ಲ’ ಎಂದು ಅವರು ಹೇಳಿದರು.

‘ದೇಶದ ಸಂವಿಧಾನದ ಸಿದ್ಧಾಂತವು ನಿಮ್ಮದೇ ಸಿದ್ಧಾಂತವಾಗಿದೆ ಎಂಬುದನ್ನು ಮೊದಲು ನೀವು ಅರಿತುಕೊಳ್ಳಿ. ಈ ದೇಶದಲ್ಲಿ ದಲಿತರು ಇರದೇ ಹೋಗಿದ್ದರೆ, ಸಂವಿಧಾನವೇ ಇರುತ್ತಿರಲಿಲ್ಲ ಎಂಬುದನ್ನು ಖಚಿತವಾಗಿ ನಾನು ಹೇಳಬಲ್ಲೆ’ ಎಂದು ಅವರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.