ನವದೆಹಲಿ: ಚುನಾವಣೆಯಲ್ಲಿ ಸೋತರೆ ಮಾತ್ರ ವಿದ್ಯುನ್ಮಾನ ಮತ ಯಂತ್ರದ (EVM) ದೋಷ ಅಥವಾ ತಿರುಚಲಾಗಿದೆ ಎಂದು ದೂರುವ ಜನಪ್ರತಿನಿಧಿಗಳ ಬ್ಯಾಲೆಟ್ ಪೇಪರ್ ಅನುಷ್ಠಾನಗೊಳಿಸುವ ಬೇಡಿಕೆಯನ್ನು ಮಾನ್ಯ ಮಾಡಲಾಗದು ಎಂದಿರುವ ಸುಪ್ರೀಂ ಕೋರ್ಟ್, ಅರ್ಜಿಯನ್ನು ವಜಾಗೊಳಿಸಿದೆ.
ನ್ಯಾಯಮೂರ್ತಿಗಳಾದ ವಿಕ್ರಂ ನಾಥ್ ಹಾಗೂ ಪಿ.ಬಿ. ವರಾಳೆ ಅವರಿದ್ದ ವಿಭಾಗೀಯ ಪೀಠವು ಅರ್ಜಿಯ ವಿಚಾರಣೆ ನಡೆಸಿ, ‘ಹಾಗಿದ್ದರೆ ಚುನಾವಣೆಯಲ್ಲಿ ಗೆದ್ದಾಗ ಇವಿಎಂ ತಿರುಚಲಾಗಿರುವುದಿಲ್ಲವೇ? ಚುನಾವಣೆಯಲ್ಲಿ ಸೋತರೆ ಮಾತ್ರ ಇವಿಎಂ ದೋಷವೇ?’ ಎಂದು ಖಾರವಾಗಿ ಪ್ರಶ್ನಿಸಿತು.
ಕೆ.ಎ.ಪೌಲ್ ಎಂಬುವವರು ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸಲ್ಲಿಸಿ, ‘ಬ್ಯಾಲೆಟ್ ಪೇಪರ್ ಮತದಾನಕ್ಕೆ ಆಗ್ರಹ, ಚುನಾವಣೆ ಸಂದರ್ಭದಲ್ಲಿ ಮತದಾರರಿಗೆ ಹಣ, ಹೆಂಡ ಹಾಗೂ ಇನ್ನಿತರ ಉಡುಗೊರೆಗಳನ್ನು ನೀಡಿ ಸೆಳೆಯುವ ಪ್ರಯತ್ನ ಮಾಡುವವರಿಗೆ ಐದು ವರ್ಷ ಸದಸ್ಯತ್ವ ನಿಷೇಧ ಶಿಕ್ಷೆ ಹೇರಲು ಚುನಾವಣಾ ಆಯೊಗಕ್ಕೆ ನಿರ್ದೇಶಿಸಬೇಕು’ ಎಂದು ಕೋರಿದ್ದರು. ಜತೆಗೆ ತಾವು ನಡೆಸುವ ಸಂಸ್ಥೆಯ ಮೂಲಕ ಮೂರು ಲಕ್ಷ ಅನಾಥರು ಹಾಗೂ 40 ಲಕ್ಷ ವಿಧವೆಯರನ್ನು ರಕ್ಷಿಸಲಾಗಿದೆ ಎಂದೂ ಹೇಳಿಕೊಂಡಿದ್ದಾರೆ.
‘ನಿಮ್ಮ ಅಲೋಚನೆಗಳು ಆಸಕ್ತಿದಾಯಕವಾಗಿವೆ. ಇಂಥ ಆಲೋಚನೆಗಳು ನಿಮಗೆ ಹೇಗೆ ಹೊಳೆದವು? ನಿಮ್ಮ ಕ್ಷೇತ್ರವೇ ಬೇರೆ ಇರುವಾಗ ಈ ರಾಜಕೀಯ ಕ್ಷೇತ್ರಕ್ಕೆ ನೀವೇಕೆ ಧುಮುಕುತ್ತಿದ್ದೀರಿ?’ ಎಂದು ಪೀಠ ಕೇಳಿತು.
ಇದಕ್ಕೆ ಪ್ರತಿಕ್ರಿಯಿಸಿ ಪೌಲ್, ‘ನಾನು ಸುಮಾರು 150 ರಾಷ್ಟ್ರಗಳಿಗೆ ಭೇಟಿ ನೀಡಿದ್ದೇನೆ. ಅಲ್ಲೆಲ್ಲಾ ಕಡೆ ಮತಪತ್ರವನ್ನೇ ಬಳಸಲಾಗುತ್ತಿದೆ. ಭಾರತದಲ್ಲಿ ಮಾತ್ರ ವಿದ್ಯುನ್ಮಾನ ಮತ ಯಂತ್ರ ಬಳಕೆಯಲ್ಲಿದೆ. ಹೀಗಾಗಿ ಇದನ್ನು ಬದಲಿಸಬೇಕು’ ಎಂದು ಮನವಿ ಮಾಡಿದರು.
ಇದಕ್ಕೆ ಪ್ರತಿಕ್ರಿಯಿಸಿದ ಪೀಠ, ‘ಇತರ ಜಗತ್ತಿಗಿಂತ ಭಿನ್ನವಾಗಿರಬಾರದು ಎಂದು ನೀವೇಕೆ ಬಯಸುತ್ತೀರಿ? ಒಂದೊಮ್ಮೆ ಮತಪತ್ರಕ್ಕೆ ಮರಳಿ ಬಂದರೂ, ಚುನಾವಣಾ ಅಕ್ರಮಗಳು ಕಡಿಮೆಯಾಗುವುದೇ’ ಎಂದು ಪ್ರಶ್ನಿಸಿತು.
ಇವಿಎಂ ತಿರುಚಬಹುದು ಎಂದು ಟೆಸ್ಲಾ ಮುಖ್ಯಸ್ಥ ಇಲಾನ್ ಮಸ್ಕ್ ಹೇಳಿದ್ದಾರೆ. ಟಿಡಿಪಿ ಮುಖ್ಯಸ್ಥ ಎನ್. ಚಂದ್ರಬಾಬು ನಾಯ್ಡು ಅವರೂ ಇದನ್ನೇ ಹೇಳಿದ್ದಾರೆ. ವೈ.ಎಸ್. ಜಗನ್‌ಮೋಹನ ರೆಡ್ಡಿ ಅವರೂ ಇದನ್ನು ಪುನರುಚ್ಚರಿಸಿದ್ದಾರೆ ಎಂದು ಪೌಲ್ ಹೇಳಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿ ಪೀಠ, ‘ಚಂದ್ರಬಾಬು ನಾಯ್ಡು ಅವರು ಸೋತಾಗ ಇವಿಎಂ ವಿರುದ್ಧ ಆರೋಪಿಸಿದ್ದರು. ಈ ಬಾರಿ ಜಗನ್ ಸೋತಿದ್ದಾರೆ. ಹೀಗಾಗಿ ಅವರು ಇವಿಎಂ ಮೇಲೆ ದೋಷಾರೋಪ ಹೊರಿಸಿದ್ದಾರೆ’ ಎಂದು ಹೇಳಿ, ಅರ್ಜಿಯನ್ನು ವಜಾಗೊಳಿಸಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.