ADVERTISEMENT

ಉತ್ತರ ಕರ್ನಾಟಕದಲ್ಲಿ ಬಿಸಿಗಾಳಿಯ ಕೆಟ್ಟ ಪರಿಣಾಮ: ಹವಾಮಾನ ಇಲಾಖೆ

ಪಿಟಿಐ
Published 1 ಏಪ್ರಿಲ್ 2024, 23:30 IST
Last Updated 1 ಏಪ್ರಿಲ್ 2024, 23:30 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಪಿಟಿಐ

ನವದೆಹಲಿ: ಏಪ್ರಿಲ್‌ನಿಂದ ಜೂನ್‌ವರೆಗೆ ದೇಶದಲ್ಲಿ ಅತ್ಯಂತ ತೀವ್ರ ಪ್ರಮಾಣದ ಸೆಕೆ ಇರಲಿದೆ. ದೇಶದ ಮಧ್ಯಭಾಗ ಹಾಗೂ ದಕ್ಷಿಣ ಭಾರತದ ಪಶ್ಚಿಮ ಭಾಗದಲ್ಲಿ ಬಿಸಿಗಾಳಿಯ ತೀವ್ರತೆ ಹೆಚ್ಚಿರಲಿದೆ. ಉತ್ತರ ಕರ್ನಾಟಕವು ಬಿಸಿಗಾಳಿಯ ಕೆಟ್ಟ ಪರಿಣಾಮವನ್ನು ಎದುರಿಸಲಿದೆ.

ADVERTISEMENT

ಕೇಂದ್ರ ಹವಾಮಾನ ಇಲಾಖೆಯು (ಐಎಂಡಿ) ಸೋಮವಾರ ಈ ಎಚ್ಚರಿಕೆ ನೀಡಿದೆ. ಏಳು ಹಂತಗಳ ಲೋಕಸಭಾ ಚುನಾವಣೆಯುದ್ದಕ್ಕೂ ಬಿಸಿಗಾಳಿಯ ತೀವ್ರತೆ ಕಾಡಲಿದೆ.

ಏಪ್ರಿಲ್‌ನಿಂದ ಜೂನ್‌ವರೆಗೆ ದೇಶದ ಬಹುತೇಕ ಕಡೆಗಳಲ್ಲಿ ಗರಿಷ್ಠ ತಾಪಮಾನವು ವಾಡಿಕೆಗಿಂತ ಹೆಚ್ಚಿರಲಿದೆ. ದೇಶದ ಮಧ್ಯಭಾಗದಲ್ಲಿ ಹಾಗೂ ದಕ್ಷಿಣ ಭಾರತದ ಪಶ್ಚಿಮ ಭಾಗದಲ್ಲಿ ಹೆಚ್ಚಿನ ತಾಪಮಾನದ ಸಾಧ್ಯತೆಯು ಜಾಸ್ತಿ ಇದೆ ಎಂದು ಇಲಾಖೆಯ ಮಹಾನಿರ್ದೇಶಕ ಮೃತ್ಯುಂಜಯ ಮಹಾಪಾತ್ರ ಹೇಳಿದ್ದಾರೆ.

ಹಿಮಾಲಯದ ಪಶ್ಚಿಮ ಭಾಗದಲ್ಲಿ, ಈಶಾನ್ಯ ರಾಜ್ಯಗಳಲ್ಲಿ ಹಾಗೂ ಒಡಿಶಾದ ಉತ್ತರ ಭಾಗದಲ್ಲಿ ಗರಿಷ್ಠ ತಾಪಮಾನವು ವಾಡಿಕೆಯಂತೆ ಅಥವಾ ವಾಡಿಕೆಗಿಂತ ತುಸು ಕಡಿಮೆ ಇರುವ ಸಾಧ್ಯತೆ ಇದೆ ಎಂದು ಅವರು ಹೇಳಿದ್ದಾರೆ.

ದೇಶದ ವಿವಿಧ ಭಾಗಗಳಲ್ಲಿ ಹತ್ತರಿಂದ ಇಪ್ಪತ್ತು ದಿನಗಳವರೆಗೆ ಬಿಸಿಗಾಳಿ ಇರಲಿದೆ. ವಾಡಿಕೆಯ ಪ್ರಕಾರ ಇದು ನಾಲ್ಕರಿಂದ ಎಂಟು ದಿನ ಮಾತ್ರ ಇರುತ್ತಿತ್ತು ಎಂದು ಅವರು ತಿಳಿಸಿದ್ದಾರೆ.

ಹವಾಮಾನ ಇಲಾಖೆ ನೀಡಿದ ಎಚ್ಚರಿಕೆ

* ದೇಶದ ಬಹುತೇಕ ಕಡೆಗಳಲ್ಲಿ ಏಪ್ರಿಲ್‌ನಲ್ಲಿ ಗರಿಷ್ಠ ತಾಪಮಾನವು ವಾಡಿಕೆಗಿಂತ ಹೆಚ್ಚಿರುವ ಸಾಧ್ಯತೆ ಇದೆ. ಈ ಸಾಧ್ಯತೆಯು ದಕ್ಷಿಣ ಭಾರತದ ಮಧ್ಯಭಾಗದಲ್ಲಿ ಜಾಸ್ತಿ

* ಗುಜರಾತ್, ಮಹಾರಾಷ್ಟ್ರದ ಮಧ್ಯಭಾಗ, ಉತ್ತರ ಕರ್ನಾಟಕ, ರಾಜಸ್ಥಾನ, ಮಧ್ಯಪ್ರದೇಶ, ಒಡಿಶಾ, ಛತ್ತೀಸಗಢದ ಉತ್ತರ ಭಾಗ ಮತ್ತು ಆಂಧ್ರ ಪ್ರದೇಶದಲ್ಲಿ ಬಿಸಿಗಾಳಿಯ ಪರಿಣಾಮವು ತೀರಾ ಕೆಟ್ಟದ್ದಾಗಿರಲಿದೆ

* ಮಧ್ಯ ಭಾರತ, ಉತ್ತರದ ಬಯಲು ಪ್ರದೇಶಗಳಿಗೆ ಹೊಂದಿಕೊಂಡಿರುವ ಪ್ರದೇಶಗಳಲ್ಲಿ ಹಾಗೂ ದಕ್ಷಿಣ ಭಾರತದ ಹಲವು ಕಡೆಗಳಲ್ಲಿ ಬಿಸಿಗಾಳಿಯು ಏಪ್ರಿಲ್‌ನಲ್ಲಿ ವಾಡಿಕೆಗಿಂತ ಹೆಚ್ಚಾಗಿರುವ ಸಾಧ್ಯತೆ ಇದೆ

* ಈ ಪ್ರದೇಶಗಳಲ್ಲಿ ಬಿಸಿಗಾಳಿಯ ಪರಿಣಾಮವು ಒಂದರಿಂದ ಮೂರು ದಿನಗಳವರೆಗೆ ಇರುವುದು ವಾಡಿಕೆ. ಆದರೆ ಈ ಬಾರಿ ಅದು ಎರಡರಿಂದ ಎಂಟು ದಿನಗಳವರೆಗೆ ಇರಬಹುದು

* ಉತ್ತರ ಭಾರತದ ಹಲವೆಡೆ, ಪೂರ್ವ ಹಾಗೂ ಪಶ್ಚಿಮದ ಕರಾವಳಿ ಪ್ರದೇಶಗಳಲ್ಲಿ ತಾಪಮಾನವು ವಾಡಿಕೆಗಿಂತ 2–3 ಡಿಗ್ರಿ ಸೆಲ್ಸಿಯಸ್‌ನಷ್ಟು ಹೆಚ್ಚಿರಬಹುದು

‘ಗೋಧಿ ಮೇಲೆ ಪರಿಣಾಮ ಇಲ್ಲ’

ನವದೆಹಲಿ: ಗರಿಷ್ಠ ತಾಪಮಾನದಲ್ಲಿನ ಹೆಚ್ಚಳವು ಈಗ ಕೊಯ್ಲಿಗೆ ಸಿದ್ಧವಾಗಿರುವ ಗೋಧಿ ಬೆಳೆಯ ಮೇಲೆ ಕೆಟ್ಟ ಪರಿಣಾಮ ಉಂಟುಮಾಡದು ಎಂದು ಕೇಂದ್ರ ಹವಾಮಾನ ಇಲಾಖೆ ಹೇಳಿದೆ.

ಮಧ್ಯಪ್ರದೇಶ ಹೊರತುಪಡಿಸಿದರೆ ಗೋಧಿಯನ್ನು ಬೆಳೆಯುವ ಬೇರೆ ಯಾವುದೇ ರಾಜ್ಯದಲ್ಲಿ ಬಿಸಿಗಾಳಿ ತೀವ್ರವಾಗುವ ಅಪಾಯ ಇಲ್ಲ ಎಂದು ಇಲಾಖೆಯ ಮಹಾನಿರ್ದೇಶಕ ಮೃತ್ಯುಂಜಯ ಮಹಾಪಾತ್ರ ಹೇಳಿದ್ದಾರೆ.

‘ಮಧ್ಯಪ್ರದೇಶದಲ್ಲಿ ಈಗ ತಾಪಮಾನವು 37–40 ಡಿಗ್ರಿ ಸೆಲ್ಸಿಯಸ್ ಇದೆ. ಇದು ಮುಂದಿನ ವಾರ 42 ಡಿಗ್ರಿ ಸೆಲ್ಸಿಯಸ್‌ವರೆಗೆ ಏರಿಕೆಯಾಗಬಹುದು. ಗೋಧಿ ಕೊಯ್ಲು ಶೇಕಡ 90ರಷ್ಟು ಪೂರ್ಣಗೊಂಡಿರುವ ಕಾರಣ ಬೆಳೆಯ ಮೇಲೆ ಪರಿಣಾಮ ಇರುವುದಿಲ್ಲ’ ಎಂದು ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.