ADVERTISEMENT

ಮಹಾರಾಷ್ಟ್ರ ಬಿಜೆಪಿ ಶಾಸಕಾಂಗ ಪಕ್ಷದ ನಾಯಕನಾಗಿ ಫಡಣವೀಸ್ ಆಯ್ಕೆ

ಏಜೆನ್ಸೀಸ್
Published 30 ಅಕ್ಟೋಬರ್ 2019, 10:44 IST
Last Updated 30 ಅಕ್ಟೋಬರ್ 2019, 10:44 IST
ದೇವೇಂದ್ರ ಫಡಣವೀಸ್ (ಸಂಗ್ರಹ ಚಿತ್ರ)
ದೇವೇಂದ್ರ ಫಡಣವೀಸ್ (ಸಂಗ್ರಹ ಚಿತ್ರ)   

ಮುಂಬೈ:ಬಿಜೆಪಿಯ ಮಹಾರಾಷ್ಟ್ರ ಘಟಕದ ಶಾಸಕಾಂಗ ಪಕ್ಷದ ನಾಯಕನಾಗಿ ದೇವೇಂದ್ರ ಫಡಣವೀಸ್ ಮತ್ತೊಂದು ಅವಧಿಗೆ ಆಯ್ಕೆಯಾದರು.

ಬಿಜೆಪಿ ನೂತನ ಶಾಸಕರು ಬುಧವಾರ ಸಭೆ ಸೇರಿ ಫಡಣವೀಸ್ ಅವರನ್ನುಆಯ್ಕೆ ಮಾಡಿದರು. ಕೇಂದ್ರ ಸಚಿವರ ನರೇಂದ್ರ ಸಿಂಗ್ ತೋಮರ್ ಮತ್ತು ಪಕ್ಷದ ಉಪಾಧ್ಯಕ್ಷ ಅವಿನಾಶ್ ರೈ ಖನ್ನಾ ಶಾಸಕಾಂಗ ಪಕ್ಷದ ಸಭೆಯ ವೀಕ್ಷಕರಾಗಿದ್ದರು.

ಶಾಸಕಾಂಗ ಪಕ್ಷದ ನಾಯಕನಾಗಿ ಆಯ್ಕೆಯಾದ ಬಳಿಕ ಮಾತನಾಡಿದ ಫಡಣವೀಸ್, ‘ಭಿನ್ನಮತಗಳನ್ನು ಸರಿಪಡಿಸಿ ಬಿಜೆಪಿ–ಶಿವಸೇನಾ ಮೈತ್ರಿ ಸರ್ಕಾರ ರಾಜ್ಯದಲ್ಲಿ ಮತ್ತೊಮ್ಮೆ ಅಧಿಕಾರಕ್ಕೆ ಬರಲಿದೆ’ ಎಂದರು.

ADVERTISEMENT

ಇತ್ತೀಚೆಗೆ ಮಹಾರಾಷ್ಟ್ರ ವಿಧಾನಸಭೆಗೆ ನಡೆದ ಚುನಾವಣೆಯಲ್ಲಿ ಯಾವೊಂದು ಪಕ್ಷವೂ ಬಹುಮತ ಪಡೆದಿಲ್ಲ. 288 ಸದಸ್ಯ ಬಲದ ಮಹಾರಾಷ್ಟ್ರ ವಿಧಾನಸಭೆಯಲ್ಲಿ ಬಿಜೆಪಿ 105 ಮತ್ತು ಶಿವಸೇನಾ 56 ಸ್ಥಾನ ಗಳಿಸಿವೆ. ಫಲಿತಾಂಶದ ಬೆನ್ನಲ್ಲೇ 50:50 ಅಧಿಕಾರ ಹಂಚಿಕೆ ಮತ್ತು ಎರಡೂವರೆ ವರ್ಷ ಅವಧಿಗೆ ಮುಖ್ಯಮಂತ್ರಿ ಹುದ್ದೆ ನೀಡಬೇಕು ಎಂದು ಶಿವಸೇನಾ ಪಟ್ಟುಹಿಡಿದಿತ್ತು. ಆದರೆ, ಮುಂದಿನ ಐದು ವರ್ಷ ನಾನೇ ಮುಖ್ಯಮಂತ್ರಿ ಎಂದು ಫಡಣವೀಸ್ ಹೇಳಿದ್ದರು.

‘ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ಜತೆ ಮೈತ್ರಿ ಮಾಡಿಕೊಳ್ಳುವಾಗಲೇ50:50ರಂತೆ ಅಧಿಕಾರ ಹಂಚಿ ಮಾಡಿಕೊಳ್ಳುವ ಬಗ್ಗೆ ಒಪ್ಪಂದ ಮಾಡಿಕೊಳ್ಳಲಾಗಿತ್ತು’ ಎಂದು ಶಿವಸೇನಾ ಹೇಳಿತ್ತು. ಇದನ್ನು ಅಲ್ಲಗಳೆದಿದ್ದಫಡಣವೀಸ್, ಮುಖ್ಯಮಂತ್ರಿ ಹುದ್ದೆ ಬಿಟ್ಟುಕೊಡುವ ಬಗ್ಗೆ ಶಿವಸೇನಾಗೆ ಭರವಸೆ ನೀಡಿಲ್ಲ ಎಂದಿದ್ದರು. ಇದಕ್ಕೆ ಪ್ರತಿಯಾಗಿ ಶಿವಸೇನಾ ವಿಡಿಯೊವೊಂದನ್ನು ಬಿಡುಗಡೆ ಮಾಡಿತ್ತು.ಲೋಕಸಭೆ ಚುನಾವಣೆಗೂ ಮುನ್ನ ಮಾಧ್ಯಮಗೋಷ್ಠಿ ಒಂದರಲ್ಲಿ ದೇವೇಂದ್ರ ಫಡಣವೀಸ್ ಅವರು ಮಾತನಾಡಿದ್ದ ದೃಶ್ಯವಿರುವ ವಿಡಿಯೊ ಅದಾಗಿದೆ. ‘ಮತ್ತೆ ಅಧಿಕಾರಕ್ಕೆ ಬಂದರೆ, ಅಧಿಕಾರ ಮತ್ತು ಜವಾಬ್ದಾರಿಯನ್ನು ಸಮಾನವಾಗಿ ಹಂಚಿಕೊಳ್ಳಲು ನಿರ್ಧರಿಸಿದ್ದೇವೆ’ ಎಂದು ದೇವೇಂದ್ರ ಫಡಣವೀಸ್ ಅವರು ಮರಾಠಿಯಲ್ಲಿ ಹೇಳಿದ್ದನ್ನು ವಿಡಿಯೊ ಒಳಗೊಂಡಿತ್ತು.

ಇನ್ನಷ್ಟು...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.