ಮುಂಬೈ: ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ಮತ್ತು ಉಪ ಮುಖ್ಯಮಂತ್ರಿ ಏಕನಾಥ ಶಿಂದೆ ನಡುವಿನ ವೈಷಮ್ಯದಿಂದ ಮಹಾರಾಷ್ಟ್ರ ಪ್ರಗತಿಗೆ ಅಡ್ಡಿಯಾಗುತ್ತಿದೆ ಎಂದು ಶಿವಸೇನಾ (ಯುಬಿಟಿ) ಸಂಸದ ಸಂಜಯ್ ರಾವುತ್ ಹೇಳಿದ್ದಾರೆ.
ಶಿವಸೇನಾ ಮುಖವಾಣಿ 'ಸಾಮ್ನಾ'ದ ಸಾಪ್ತಾಹಿಕ ಅಂಕಣ 'ರೋಖ್‌ತೋಕ್'ನಲ್ಲಿ ಮಹಾರಾಷ್ಟ್ರದ ಪ್ರಸ್ತುತ ರಾಜಕೀಯ ವಿದ್ಯಮಾನಗಳ ಕುರಿತು ರಾವುತ್ ಮೆಲುಕು ಹಾಕಿದ್ದಾರೆ.
2024ರ ನವೆಂಬರ್‌ನಲ್ಲಿ ನಡೆದ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯ ನಂತರ ಏಕನಾಥ ಶಿಂದೆ ಅವರಿಗೆ ಮತ್ತೊಮ್ಮೆ ಮುಖ್ಯಮಂತ್ರಿ ಹುದ್ದೆ ಗಿಟ್ಟಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಹೇಗಾದರೂ ಮಾಡಿ ಮರಳಿ ಸಿಎಂ ಹುದ್ದೆ ಪಡೆಯಲು ನಿರಂತರವಾಗಿ ಪ್ರಯತ್ನಿಸುತ್ತಿದ್ದಾರೆ ಎಂದು ರಾವುತ್ ಉಲ್ಲೇಖಿಸಿದ್ದಾರೆ.
‘ಚುನಾವಣೆ ಮುಗಿದು ಹಲವು ತಿಂಗಳು ಕಳೆದರೂ ಕೂಡ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ಮತ್ತು ಬಿಜೆಪಿ ಬೆಂಬಲಿತ ಉಪ ಮುಖ್ಯಮಂತ್ರಿ ಏಕನಾಥ ಶಿಂದೆ ಅವರ ನಡುವೆ ಇನ್ನು ಕೂಡಾ ಉತ್ತಮ ಸಂವಹನ ಸಾಧ್ಯವಾಗಿಲ್ಲ. ಇದು ಸಾರ್ವಜನಿಕರಿಗೆ ಮನರಂಜನೆಯ ಮೂಲವಾಗಿ ಮಾರ್ಪಟ್ಟಿದೆ’ ಎಂದು ಸಂಜಯ್ ರಾವುತ್ ಆರೋಪಿಸಿದ್ದಾರೆ.
‘ದೇವೇಂದ್ರ ಫಡಣವೀಸ್ ಮತ್ತು ಏಕನಾಥ ಶಿಂದೆ ನಡುವಿನ ವೈಷಮ್ಯ ಸರ್ಕಾರದ ಕಾರ್ಯನಿರ್ವಹಣೆಯ ಮೇಲೆ ಪರಿಣಾಮ ಬೀರಿದೆ. ಬಹುಮತವಿದ್ದರೂ ಆಡಳಿತ ಸ್ತಬ್ಧವಾಗಿದೆ. ಸದ್ಯದ ಮಟ್ಟಿಗೆ ಅಭಿವೃದ್ಧಿ ಇಲ್ಲದೆ ಮಹಾರಾಷ್ಟ್ರ ಅನಿಶ್ಚಿತತೆ ಮತ್ತು ಅಸ್ತವ್ಯಸ್ತ ಸ್ಥಿತಿಯಲ್ಲಿದೆ’ ಎಂದು ರಾವುತ್ ದೂರಿದ್ದಾರೆ.
ಠಾಣೆ ಮೇಲಿನ ಶಿಂದೆ ಅವರ ಹಿಡಿತವನ್ನು ಬಿಜೆಪಿ ವ್ಯವಸ್ಥಿತವಾಗಿ ದುರ್ಬಲಗೊಳಿಸುತ್ತಿದೆ. ಇದರ ಭಾಗವಾಗಿ ಬಿಜೆಪಿ ಸಚಿವ ಗಣೇಶ್ ನಾಯಕ್ ಅವರನ್ನು ನೆರೆಯ ಪಾಲ್ಘರ್ ಜಿಲ್ಲೆಯ ಉಸ್ತುವಾರಿ ಸಚಿವರನ್ನಾಗಿ ನೇಮಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ಕಳೆದ ವರ್ಷ ನಡೆದ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ, ಶಿವಸೇನಾ, ಎನ್‌ಸಿಪಿ ನೇತೃತ್ವದ ‘ಮಹಾಯುತಿ’ ಮೈತ್ರಿಕೂಟವು 288 ಸ್ಥಾನಗಳ ಪೈಕಿ 230 ಸ್ಥಾನಗಳನ್ನು ಗೆದ್ದುಕೊಂಡಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.