ADVERTISEMENT

ಮಹಾರಾಷ್ಟ್ರ ನೂತನ ಸಿಎಂ ಆಗಿ ಫಡಣವೀಸ್‌, ಡಿಸಿಎಂ ಆಗಿ ಶಿಂದೆ, ಅಜಿತ್‌ ಪ್ರಮಾಣ

ಪಿಟಿಐ
Published 5 ಡಿಸೆಂಬರ್ 2024, 12:38 IST
Last Updated 5 ಡಿಸೆಂಬರ್ 2024, 12:38 IST
<div class="paragraphs"><p>ಮಹಾರಾಷ್ಟ್ರ ನೂತನ ಸಿಎಂ ಆಗಿ ಫಡಣವೀಸ್‌, ಡಿಸಿಎಂ ಆಗಿ ಶಿಂದೆ, ಅಜಿತ್‌ ಪ್ರಮಾಣ</p></div>

ಮಹಾರಾಷ್ಟ್ರ ನೂತನ ಸಿಎಂ ಆಗಿ ಫಡಣವೀಸ್‌, ಡಿಸಿಎಂ ಆಗಿ ಶಿಂದೆ, ಅಜಿತ್‌ ಪ್ರಮಾಣ

   

ಮುಂಬೈ: ಬಿಜೆಪಿ ಶಾಸಕಾಂಗ ಪಕ್ಷದ ನಾಯಕ ದೇವೇಂದ್ರ ಫಡಣವೀಸ್ ಅವರು ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಿ ಗುರುವಾರ ಸಂಜೆ ಪ್ರಮಾಣ ವಚನ ಸ್ವೀಕರಿಸಿದರು. ಇದರಿಂದಾಗಿ, ವಿಧಾನಸಭಾ ಚುನಾವಣೆ ಫಲಿತಾಂಶ ಪ್ರಕಟವಾಗಿ, ಮಹಾಯುತಿ ಮೈತ್ರಿಕೂಟಕ್ಕೆ ಭಾರಿ ಬಹುಮತ ದೊರೆತ ಸರಿಸುಮಾರು ಎರಡು ವಾರಗಳ ನಂತರ ಮಹಾರಾಷ್ಟ್ರದಲ್ಲಿ ಹೊಸ ಸರ್ಕಾರ ಅಸ್ತಿತ್ವಕ್ಕೆ ಬಂದಂತಾಗಿದೆ.

ಬಿಜೆಪಿ ನೇತೃತ್ವದ ಮಹಾಯುತಿ ಮೈತ್ರಿಕೂಟದ ನಾಯಕರಾದ ಏಕನಾಥ ಶಿಂದೆ ಮತ್ತು ಅಜಿತ್ ಪವಾರ್ ಅವರು ಉಪ ಮುಖ್ಯಮಂತ್ರಿಗಳಾಗಿ ಪ್ರಮಾಣ ವಚನ ಸ್ವೀಕರಿಸಿದರು. ಶಿಂದೆ ಅವರು ಎಂದಿನಂತೆ ಪೂರ್ಣ ತೋಳಿನ ಬಿಳಿ ಅಂಗಿ, ಬಿಳಿ ಪ್ಯಾಂಟ್ ಧರಿಸಿದ್ದರು. ಫಡಣವೀಸ್ ಮತ್ತು ಪವಾರ್ ಅವರು ನಸುಗೆಂಪು ಬಣ್ಣದ ಜಾಕೆಟ್ ಧರಿಸಿದ್ದರು.

ADVERTISEMENT

ಉಪ ಮುಖ್ಯಮಂತ್ರಿಯಾಗಿ ಸಂಪುಟ ಸೇರುವಂತೆ ಶಿಂದೆ ಅವರಿಗೆ ಶಿವಸೇನಾ ಶಾಸಕರೇ ಒತ್ತಾಯ ಮಾಡಿದ್ದರು ಎನ್ನಲಾಗಿದೆ.

ದಕ್ಷಿಣ ಮುಂಬೈನ ವಿಶಾಲವಾದ ಆಜಾದ್ ಮೈದಾನದಲ್ಲಿ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮ ನಡೆಯಿತು. ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಸಚಿವರಾದ ಅಮಿತ್ ಶಾ, ಜೆ.ಪಿ. ನಡ್ಡಾ, ರಾಜನಾಥ ಸಿಂಗ್, ನಿತಿನ್ ಗಡ್ಕರಿ, ನಿರ್ಮಲಾ ಸೀತಾರಾಮನ್, ಪೀಯೂಷ್ ಗೋಯಲ್ ಮತ್ತು ಶಿವರಾಜ್ ಸಿಂಗ್ ಚೌಹಾಣ್, ಬೇರೆ ಬೇರೆ ರಾಜ್ಯಗಳ ಮುಖ್ಯಮಂತ್ರಿಗಳು ಹಾಗೂ ಮಹಾಯುತಿ ಮೈತ್ರಿಕೂಟದ ಸಹಸ್ರಾರು ಮಂದಿ ಕಾರ್ಯಕರ್ತರು ಈ ಕಾರ್ಯಕ್ರಮಕ್ಕೆ ಸಾಕ್ಷಿಯಾದರು.

ಫಡಣವೀಸ್, ಶಿಂದೆ ಮತ್ತು ಪವಾರ್ ಹೊರತುಪಡಿಸಿದರೆ ಬೇರೆ ಯಾರೂ ಪ್ರಮಾಣ ವಚನ ಸ್ವೀಕರಿಸಲಿಲ್ಲ. ಮಹಾರಾಷ್ಟ್ರ ವಿಧಾನಸಭೆಯ ಚಳಿಗಾಲದ ಅಧಿವೇಶನವು ಆರಂಭವಾಗುವ ಮೊದಲು, ಮುಂದಿನ ವಾರದಲ್ಲಿ ಸಂಪುಟ ವಿಸ್ತರಿಸಲಾಗುತ್ತದೆ ಎಂದು ಮೂಲಗಳು ಹೇಳಿವೆ.

ಫಡಣವೀಸ್, ಶಿಂದೆ ಮತ್ತು ಪವಾರ್ ಅವರಿಗೆ ರಾಜ್ಯಪಾಲ ಸಿ.ಪಿ. ರಾಧಾಕೃಷ್ಣನ್ ಅವರು ಪ್ರಮಾಣ ವಚನ ಬೋಧಿಸಿದರು. 

40 ಸಾವಿರಕ್ಕೂ ಹೆಚ್ಚು ಕಾರ್ಯಕರ್ತರಿಗೆ ಕಾರ್ಯಕ್ರಮದಲ್ಲಿ ಭಾಗಿಯಾಗಲು ಪೊಲೀಸರು ವಿಶೇಷವಾದ ವ್ಯವಸ್ಥೆ ಕಲ್ಪಿಸಿದ್ದರು. ಸರಿಸುಮಾರು ಎರಡು ಸಾವಿರ ಮಂದಿ ಅತಿಗಣ್ಯ ವ್ಯಕ್ತಿಗಳಿಗೆ ಪ್ರತ್ಯೇಕವಾದ ಆಸನಗಳ ವ್ಯವಸ್ಥೆ ಕಲ್ಪಿಸಲಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕಾರ್ಯಕ್ರಮದ ಭದ್ರತೆಗಾಗಿ ನಾಲ್ಕು ಸಾವಿರಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಲಾಗಿತ್ತು.

ಇದೊಂದು ಬಹಳ ಸುಂದರವಾದ ದಿನ. ಇದು ಸಂತಸದ ಸಂದರ್ಭ. ಜವಾಬ್ದಾರಿ ಹೆಚ್ಚಾಗಿದೆ.
ಅಮೃತಾ ದೇವೇಂದ್ರ ಫಡಣವೀಸ್ ಅವರ ಪತ್ನಿ
ಈ ತಂಡವು ಅನುಭವ ಮತ್ತು ಚೈತನ್ಯದ ಮಿಶ್ರಣ. ಈ ತಂಡದ ಸಾಮೂಹಿಕ ಯತ್ನದ ಫಲವಾಗಿ ‘ಮಹಾಯುತಿ’ಗೆ ಮಹಾರಾಷ್ಟ್ರದಲ್ಲಿ ಐತಿಹಾಸಿಕ ಜನಾದೇಶ ದೊರೆತಿದೆ. 
ನರೇಂದ್ರ ಮೋದಿ ಪ್ರಧಾನಿ (ಫಡಣವೀಸ್ ಶಿಂದೆ ಮತ್ತು ಪವಾರ್ ಅವರಿಗೆ ಅಭಿನಂದನೆ ಸಲ್ಲಿಸಿ ಪ್ರಕಟಿಸಿದ ಎಕ್ಸ್‌ ಬರಹ)

ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಕೆಲವು ಪ್ರಮುಖರು

ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ, ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್, ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮ, ಮುಧ್ಯಪ್ರದೇಶ ಮುಖ್ಯಮಂತ್ರಿ ಮೋಹನ್ ಯಾದವ್, ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್. ನಟ ಶಾರೂಖ್ ಖಾನ್, ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಕೇಶ್ ಅಂಬಾನಿ, ಅಂಬಾನಿ ಅವರ ಮಗ ಅನಂತ್ ಮತ್ತು ಸೊಸೆ ರಾಧಿಕಾ, ಟಾಟಾ ಟ್ರಸ್ಟ್ಸ್‌ ಅಧ್ಯಕ್ಷ ನೋಯಲ್ ಟಾಟಾ, ಉದ್ಯಮಿ ಕುಮಾರಮಂಗಲಂ ಬಿರ್ಲಾ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.