ADVERTISEMENT

ಉಪಚುನಾವಣೆಯ ಫಲಿತಾಂಶ | ಬಿಜೆಪಿಯ ವಿಭಜಕ ರಾಜಕಾರಣಕ್ಕೆ ಪ್ರತ್ಯುತ್ತರ: ಕಾಂಗ್ರೆಸ್‌

​ಪ್ರಜಾವಾಣಿ ವಾರ್ತೆ
Published 13 ಜುಲೈ 2024, 23:30 IST
Last Updated 13 ಜುಲೈ 2024, 23:30 IST
ಮಲ್ಲಕಾರ್ಜುನ ಖರ್ಗೆ
ಮಲ್ಲಕಾರ್ಜುನ ಖರ್ಗೆ   

ನವದೆಹಲಿ: ಉಪಚುನಾವಣೆಯ ಫಲಿತಾಂಶವು ಪ್ರಜಾಪ್ರಭುತ್ವಕ್ಕೆ ಸಿಕ್ಕ ಅಭೂತಪೂರ್ವ ಜಯ ಮತ್ತು ಬಿಜೆಪಿಯ ‘ವಿಭಜಕ ರಾಜಕಾರಣ’ಕ್ಕೆ ಜನರು ನೀಡಿದ ಪ್ರತ್ಯುತ್ತರ ಎಂದು ಕಾಂಗ್ರೆಸ್‌ ಶನಿವಾರ ಬಣ್ಣಿಸಿದೆ.

ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ‘ಜನರು ಬಿಜೆಪಿಯ ಆಕ್ರಮಣಕಾರಿ, ಅವ್ಯವಸ್ಥಿತ ರಾಜಕಾರಣ ಮತ್ತು ದುರಾಡಳಿತವನ್ನು ಸಂಪೂರ್ಣವಾಗಿ ತಿರಸ್ಕರಿಸಿದ್ದಾರೆ ಎಂಬುದನ್ನು ಫಲಿತಾಂಶವು ಸಂಕೇತಿಸುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್‌ ಶಾ ಅವರ ರಾಜಕೀಯ ವಿಶ್ವಾಸಾರ್ಹತೆ ಕುಸಿಯುತ್ತಿದೆ ಎಂಬುದಕ್ಕೆ ಇದೇ ಬಲವಾದ ಸಾಕ್ಷಿ’ ಎಂದು ಪ್ರತಿಪಾದಿಸಿದರು.

ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್‌ ಗಾಂಧಿ ಅವರು, ‘ಬಿಜೆಪಿ ಹೆಣೆದಿದ್ದ ‘ಭಯ ಮತ್ತು ಗೊಂದಲದ ಜಾಲ’ ಮುರಿದುಬಿದ್ದಿದೆ ಎಂಬುದು ಸ್ಪಷ್ಟ. ರೈತರು, ಯುವ ಜನರು, ಕಾರ್ಮಿಕರು, ಉದ್ಯಮಿಗಳು ಸೇರಿದಂತೆ ಎಲ್ಲ ವರ್ಗದವರೂ ಸರ್ವಾಧಿಕಾರವನ್ನು ಸಂಪೂರ್ಣವಾಗಿ ಕಿತ್ತೊಗೆದು, ನ್ಯಾಯದ ಆಡಳಿತವನ್ನು ಸ್ಥಾಪಿಸಲು ಬಯಸಿದ್ದಾರೆ’ ಎಂದು ಪ್ರತಿಕ್ರಿಯಿಸಿದರು.

ADVERTISEMENT

ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು, ‘ವರ್ತಮಾನವನ್ನು ಸುಧಾರಿಸುವ ಮತ್ತು ಉತ್ತಮ ಭವಿಷ್ಯಕ್ಕೆ ನೀಲನಕ್ಷೆ ಸಿದ್ಧಪಡಿಸುವ ಸಕಾರಾತ್ಮಕ ರಾಜಕಾರಣವನ್ನು ಜನರು ಬಯಸಿದ್ದಾರೆ’ ಎಂದು ಹೇಳಿದರು. 

‘ಈ ಫಲಿತಾಂಶವು ಬಿಜೆಪಿಯ ಜನವಿರೋಧಿ, ಯುವ ನೀತಿ ವಿರೋಧಿ ಮತ್ತು ವಿಭಜಕ ರಾಜಕಾರಣವನ್ನು ಜನರು ನಿರಾಕರಿಸಿದ್ದಾರೆ ಎಂಬುದರ ಸಂಕೇತ’ ಎಂದು ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಕೆ.ಸಿ ವೇಣುಗೋಪಾಲ್ ಹೇಳಿದರು.

ಹಿಮಾಚಲ ಪ್ರದೇಶದ ಮೂರು ಕ್ಷೇತ್ರಗಳ ಪೈಕಿ ಪಕ್ಷವು ಎರಡು ಸ್ಥಾನಗಳಲ್ಲಿ ಗೆದ್ದಿರುವುದನ್ನು ಉಲ್ಲೇಖಿಸಿದ ಅವರು ‘ಫಲಿತಾಂಶದ ಮೂಲಕ ಜನರು ಬಿಜೆಪಿಯ ಕೆನ್ನೆಗೆ ಬಾರಿಸಿದ್ದಾರೆ. ಈ ಮೂಲಕ ಶ್ರೀಮಂತರ ಪರ, ಸರ್ವಾಧಿಕಾರ ರಾಜಕಾರಣಕ್ಕೆ ಪ್ರಬಲ ವಿರೋಧ ವ್ಯಕ್ತಪಡಿಸಿದ್ದಾರೆ’ ಎಂದರು.

ಕಾಂಗ್ರೆಸ್‌ನ ಮಾಧ್ಯಮ ಮತ್ತು ಪ್ರಚಾರ ವಿಭಾಗದ ಮುಖ್ಯಸ್ಥ ಪವನ್ ಖೇರಾ ಅವರು, ‘ಲೋಕಸಭಾ ಚುನಾವಣೆ ನಡೆದ ಎರಡು ತಿಂಗಳ ಒಳಗಾಗಿ ಜನರು ಬಿಜೆಪಿಗೆ ಸ್ಪಷ್ಟವಾದ ಸಂದೇಶ ರವಾನಿಸಿದ್ದಾರೆ. ಆದರೆ ಬಿಜೆಪಿ ಅದನ್ನು ಆಲಿಸುತ್ತದೆಯೇ ಎಂಬುದು ದೊಡ್ಡ ಪ್ರಶ್ನೆ’ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.