ADVERTISEMENT

2002 Gujarat Riots | ತಪ್ಪು ನಿರೂಪಣೆ; ನಿರಪರಾಧಿ ಎಂದು ಸಾಬೀತು: ಮೋದಿ ಮಾತು

ಪಿಟಿಐ
Published 16 ಮಾರ್ಚ್ 2025, 15:48 IST
Last Updated 16 ಮಾರ್ಚ್ 2025, 15:48 IST
<div class="paragraphs"><p>ನರೇಂದ್ರ ಮೋದಿ</p></div>

ನರೇಂದ್ರ ಮೋದಿ

   

(ಪಿಟಿಐ ಚಿತ್ರ)

ನವದೆಹಲಿ: 2002ರ ಗುಜರಾತ್ ಗಲಭೆ ಕುರಿತು ಮೌನ ಮುರಿದಿರುವ ಪ್ರಧಾನಿ ನರೇಂದ್ರ ಮೋದಿ, 'ವಿಪಕ್ಷಗಳು ಸುಳ್ಳು ನಿರೂಪಣೆಯನ್ನು ಸೃಷ್ಟಿಸುವ ಯತ್ನ ಮಾಡಿತ್ತು. ಅಂದು ಕೇಂದ್ರದಲ್ಲಿ ಅಧಿಕಾರದಲ್ಲಿದ್ದ ರಾಜಕೀಯ ವಿರೋಧಿಗಳು ನನ್ನನ್ನು ಶಿಕ್ಷಿಸಲು ಬಯಸಿತ್ತು. ಆದರೆ ನ್ಯಾಯಾಲಯ ನನ್ನನ್ನು ನಿರಪರಾಧಿ ಎಂದು ಸಾಬೀತುಪಡಿಸಿತ್ತು' ಎಂದು ಹೇಳಿದ್ದಾರೆ.

ADVERTISEMENT

ಲೆಕ್ಸ್ ಫ್ರಿಡ್ಮನ್ ಅವರ ಪಾಡ್‌ಕಾಸ್ಟ್‌ನಲ್ಲಿ ಈ ಕುರಿತು ಮಾತನಾಡಿರುವ ಅಂದಿನ ಗುಜರಾತ್ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿ, '2002ರ ಗಲಭೆ ಗುಜರಾತ್‌ನಲ್ಲಿ ಈವರೆಗೆ ನಡೆದ ಅತಿದೊಡ್ಡ ಗಲಭೆ ಎಂದು ತಪ್ಪು ಮಾಹಿತಿಯನ್ನು ಹಬ್ಬಲು ಯತ್ನಿಸಲಾಗಿತ್ತು' ಎಂದು ಹೇಳಿದ್ದಾರೆ.

'2002ರ ಹಿಂದಿನ ದತ್ತಾಂಶವನ್ನು ಪರಿಶೀಲಿಸಿದರೆ ಗುಜರಾತ್‌ನಲ್ಲಿ ಆಗಾಗ್ಗೆ ಗಲಭೆಗಳು ನಡೆಯುತ್ತಿದ್ದವು ಎಂಬುದು ಗಮನಕ್ಕೆ ಬರುತ್ತದೆ. ಅನೇಕ ಪ್ರದೇಶಗಳಲ್ಲಿ ಕರ್ಫ್ಯೂ ನಿರಂತರವಾಗಿ ವಿಧಿಸಲಾಗುತ್ತಿತ್ತು. ಕ್ಷುಲ್ಲಕ ವಿಷಯಗಳಿಗೂ ಕೋಮುಗಲಭೆ ಉದ್ಭವಿಸುತ್ತಿತ್ತು' ಎಂದು ಹೇಳಿದ್ದಾರೆ.

'1969ರಲ್ಲಿ ಗುಜರಾತ್‌ನಲ್ಲಿ ನಡೆದ ಗಲಭೆ ಆರು ತಿಂಗಳಿಗಿಂತಲೂ ಹೆಚ್ಚು ಕಾಲ ನಡೆದಿತ್ತು. ಅಂದು ನಾನು ರಾಜಕಾರಣದ ವ್ಯಾಪಿಯಲ್ಲಿ ಇರಲಿಲ್ಲ' ಎಂದು ಹೇಳಿದ್ದಾರೆ.

'ಗುಜರಾತ್ ವಿಧಾನಸಭೆಯ ನಾಯಕನಾಗಿ ಆಯ್ಕೆಯಾದ ಮೂರು ದಿನಗಳ ಬಳಿಕ ಗೋಧ್ರಾದಲ್ಲಿ ರೈಲಿಗೆ ಬೆಂಕಿ ಹಚ್ಚಿದ ಘಟನೆ ನಡೆಯಿತು. ಇದು ಊಹಿಸಲಾಗದ ಘಟನೆ. ಅಂತಹ ಘಟನೆ ಘಟಿಸಬಾರದಿತ್ತು. ಶಾಂತಿ ನೆಲೆಸಬೇಕು' ಎಂದು ಹೇಳಿದ್ದಾರೆ.

'ಗೋಧ್ರಾ ಪ್ರಕರಣದ ಬಗ್ಗೆ ತಪ್ಪಾದ ನಿರೂಪಣೆ ಹರಡಲಾಗಿತ್ತು. ಆದರೆ ನ್ಯಾಯಾಲಯ ಈ ವಿಷಯವನ್ನು ಕೂಲಂಕಷವಾಗಿ ತನಿಖೆ ಮಾಡಿ ನಿರಪರಾಧಿ ಎಂದು ಸಾಬೀತು ಮಾಡಿತ್ತು' ಎಂದು ಹೇಳಿದ್ದಾರೆ.

'2002ರ ಬಳಿಕ ಗುಜರಾತ್‌ನಲ್ಲಿ ಹಿಂಸಾಚಾರ ಘಟಿಸಿಲ್ಲ. ಈ ಪ್ರದೇಶದಲ್ಲಿ ಶಾಂತಿ ನೆಲೆಸಿದೆ' ಎಂದು ಪ್ರಧಾನಿ ಮೋದಿ ಉಲ್ಲೇಖಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.