ADVERTISEMENT

ಕೆಂಪುಕೋಟೆಯಲ್ಲಿ ಧ್ವಜ ಹಾರಿಸಿದ ಮತ್ತೊಬ್ಬ ವ್ಯಕ್ತಿಯ ಬಂಧನ

ಪಿಟಿಐ
Published 22 ಫೆಬ್ರುವರಿ 2021, 14:42 IST
Last Updated 22 ಫೆಬ್ರುವರಿ 2021, 14:42 IST
ಗಣರಾಜ್ಯೋತ್ಸವ ದಿನದಂದು ಕೆಂಪು ಕೋಟೆಗೆ ಮುತ್ತಿಗೆ ಹಾಕಿದ ಪ್ರತಿಭಟನಾಕಾರರು
ಗಣರಾಜ್ಯೋತ್ಸವ ದಿನದಂದು ಕೆಂಪು ಕೋಟೆಗೆ ಮುತ್ತಿಗೆ ಹಾಕಿದ ಪ್ರತಿಭಟನಾಕಾರರು   

ನವದೆಹಲಿ: ಗಣರಾಜ್ಯೋತ್ಸವದ ದಿನದಂದು ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ನಡೆದ ಟ್ರ್ಯಾಕ್ಟರ್ ಪೆರೇಡ್ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಂಪು ಕೋಟೆಯಲ್ಲಿ ಧ್ವಜ ಹಾರಿಸಿದ್ದ 29 ವರ್ಷದ ವ್ಯಕ್ತಿಯನ್ನು ದೆಹಲಿ ಪೊಲೀಸರು ಸೋಮವಾರ ಬಂಧಿಸಿದ್ದಾರೆ.

ಐತಿಹಾಸಿಕ ಸ್ಮಾರಕದಲ್ಲಿ ಖಡ್ಗವನ್ನು ಹಿಡಿದು ಧಾರ್ಮಿಕ ಧ್ವಜ ಹಾರಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಜಸ್‌ಪ್ರೀತ್ ಸಿಂಗ್ ಎಂಬವರನ್ನು ಬಂಧಿಸಲಾಗಿದೆ. ಇವರು ಕಳೆದ ವಾರ ಬಂಧಿಯಾಗಿರುವ ಮಣಿಂಧರ್ ಸಿಂಗ್ ಅವರ ಸಹಚರರಲ್ಲಿ ಓರ್ವರಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಾಯುವ್ಯ ದೆಹಲಿಯ ಸ್ವರೂಪ ನಗರ ನಿವಾಸಿಯಾಗಿರುವ ಜಸ್‌ಪ್ರೀತ್ ಸಿಂಗ್ ಅವರನ್ನು ಭಾನುವಾರದಂದು ಕ್ರೈಮ್ ಬ್ರಾಂಚ್ ವಿಭಾಗ ಬಂಧಿಸಿದೆ.

ADVERTISEMENT

ಕೇಂದ್ರ ಸರ್ಕಾರದ ವಿವಾದಿತ ಮೂರು ಕೃಷಿ ಕಾಯ್ದೆಗಳನ್ನು ರದ್ದುಗೊಳಿಸುವಂತೆ ಒತ್ತಾಯಿಸಿ ಜನವರಿ 26ರಂದು ರೈತ ಸಂಘಟನೆಗಳು ನಡೆಸಿದ್ದ ಟ್ರ್ಯಾಕ್ಟರ್ ಪೆರೇಡ್‌ನಲ್ಲಿ ಸಾವಿರಾರು ಪ್ರತಿಭಟನಾಕಾರರು ಪೊಲೀಸರೊಂದಿಗೆ ಸಂಘರ್ಷಕ್ಕಿಳಿದಿದ್ದರು. ಅನೇಕ ಪ್ರತಿಭಟನಾಕಾರರು ಕೆಂಪು ಕೋಟೆಗೆ ಮುತ್ತಿಗೆ ಹಾಕಿ ಧಾರ್ಮಿಕ ಧ್ವಜವನ್ನು ಹಾರಿಸಿದ್ದರು.

ಮಣಿಂದರ್ ಸಿಂಗ್ ಸಮೀಪದಲ್ಲಿರುವ ಜಸ್‌ಪ್ರೀತ್ ಸಿಂಗ್ ಧ್ವಜ ಹಾರಿಸುತ್ತಿರುವುದನ್ನು ಗುರಿತಿಸಲಾಗಿದೆ. ಪೊಲೀಸರ ಪ್ರಕಾರ ಮಣಿಂದರ್ ಸಿಂಗ್, ಇತರೆ ಆರು ಮಂದಿಯನ್ನು ಕೆಂಪು ಕೋಟೆಯಲ್ಲಿ ಹಿಂಸಾಚಾರ ಹಾಗೂ ಧ್ವಜ ಹಾರಿಸುವಂತೆ ಪ್ರಚೋದಿಸಿದ್ದರು.

ಗಣರಾಜ್ಯೋತ್ಸವ ದಿನದಂದು ನಡೆದ ಹಿಂಸಾಚಾರದಲ್ಲಿ 300ಕ್ಕೂ ಹೆಚ್ಚು ದೆಹಲಿ ಪೊಲೀಸರು ಗಾಯಗೊಂಡಿದ್ದರು. ಈ ಸಂಬಂಧಹಲವಾರುಪ್ರಕರಣಗಳನ್ನು ದಾಖಲಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.