ADVERTISEMENT

ಪ್ರತಿಭಟನಾನಿರತ ರೈತರು ಯಾವುದೇ ಉದ್ದೇಶ ಹೊಂದಿಲ್ಲ: ಹರಿಯಾಣ ಸಿಎಂ

ಪಿಟಿಐ
Published 30 ಜೂನ್ 2021, 15:59 IST
Last Updated 30 ಜೂನ್ 2021, 15:59 IST
ಹರಿಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್
ಹರಿಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್    

ಚಂಡೀಗಡ: ಕೇಂದ್ರ ಸರ್ಕಾರದ ನೂತನ ಮೂರು ಕೃಷಿ ಕಾಯ್ದೆಗಳನ್ನು ವಿರೋಧಿಸಿ ಪ್ರತಿಭಟನೆಯಲ್ಲಿ ಅಚಲವಾಗಿರುವ ರೈತರು ಯಾವುದೇ ಉದ್ದೇಶವನ್ನು ಹೊಂದಿಲ್ಲ ಎಂದು ಹರಿಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಆರೋಪಿಸಿದ್ದಾರೆ.

ಮಾತು ಮುಂದುವರಿಸಿ, ಬೆರಳೆಣಿಕೆಯಷ್ಟು ರೈತರು ಮಾತ್ರ ಕೇಂದ್ರ ಕೃಷಿ ಕಾಯ್ದೆಗಳ್ನು ವಿರೋಧಿಸುತ್ತಿದ್ದಾರೆ. ಸಾಮಾನ್ಯ ರೈತರು ಸಂತುಷ್ಟರಾಗಿದ್ದಾರೆ ಎಂದು ಹೇಳಿದ್ದಾರೆ.

'ವಾಸ್ತವದಲ್ಲಿ ಪ್ರತಿಭಟನೆಯನ್ನು ನಡೆಸುತ್ತಿರುವವರು ರೈತರಲ್ಲ. ನಿಜವಾದ ರೈತರಿಗೆ ಕೃಷಿ ಕಾನೂನುಗಳ ಬಗ್ಗೆ ಯಾವುದೇ ಅಕ್ಷೇಪವಿಲ್ಲ. ಅವರು ಸಂತೋಷವಾಗಿದ್ದಾರೆ' ಎಂದವರು ತಿಳಿಸಿದ್ದಾರೆ.

ರಾಜಕೀಯ ಉದ್ದೇಶವನ್ನು ಇಟ್ಟುಕೊಂಡು ಕೃಷಿ ಕಾನೂನುಗಳನ್ನು ವಿರೋಧಿಸುತ್ತಿದ್ದಾರೆ ಎಂದವರು ಆರೋಪಿಸಿದ್ದಾರೆ.

'ಪಂಜಾಬ್‌ನಲ್ಲಿ ಚುನಾವಣೆಯು ಸಮೀಪಿಸುತ್ತಿದೆ. ಆದರೆ ನಮ್ಮ ರಾಜ್ಯದಲ್ಲಿ (ಹರಿಯಾಣದಲ್ಲಿ) ಯಾವುದೇ ಚುನಾವಣೆಯಿಲ್ಲ. ಆದರೆ ರಾಜಕೀಯ ದೃಷ್ಟಿಕೋನದಲ್ಲಿ ಸರ್ಕಾರಕ್ಕೆ ಮಸಿ ಬಳಿಯುವ ಪ್ರಯತ್ನ ಮಾಡುತ್ತಿದೆ. ಈ ಉದ್ದೇಶಕ್ಕೆ ಕಾಂಗ್ರೆಸ್ ಕೂಡಾ ಬೆಂಬಲ ನೀಡುತ್ತಿದೆ' ಎಂದು ಆರೋಪಿಸಿದ್ದಾರೆ.

'ಕೃಷಿ ಕಾಯ್ದೆಗಳನ್ನು ಹಿಂಪಡೆಯಬೇಕೆಂಬ ಒಂದೇ ವಿಷಯದಲ್ಲಿ ರೈತ ಸಂಘಟನೆಗಳು ಅಚಲವಾಗಿದೆ. ಆದರೆ ಕೃಷಿ ಕಾನೂನುಗಳ ನ್ಯೂನತೆಗಳನ್ನು ತೋರಿಸುವಲ್ಲಿ ವಿಫಲವಾಗಿದೆ. ಒಂದೇ ವಿಷಯಕ್ಕೆ ಮೊಂಡುತನ ಮಾಡಿ ಕುಳಿತರೆ ಹಾಗೂ ಸರ್ಕಾರದೊಂದಿಗೆ ಮಾತುಕತೆ ನಡೆಸಲು ಅದನ್ನೇ ಪೂರ್ವಭಾವಿ ಷರತ್ತು ಆಗಿಸಿಕೊಂಡರೆ ಯಾವುದೇ ಉದ್ದೇಶ ಪೂರ್ಣವಾದಂತೆ ಆಗುವುದಿಲ್ಲ' ಎಂದಿದ್ದಾರೆ.

'ನನ್ನ ಪ್ರಕಾರ 'ಕಿಸಾನ್' ಬಹಳ ಪವಿತ್ರವಾದ ಪದ. ಜನ ಸಾಮಾನ್ಯರು, ಸರ್ಕಾರ ಮತ್ತು ನಾನು ಸೇರಿದಂತೆ ಪ್ರತಿಯೊಬ್ಬರಿಗೂ ಈ ಪ್ರತಿಭಟನೆಗೆ ಕಾರಣರಾದ ರೈತರ ಬಗ್ಗೆ ನಂಬಿಕೆ ಹಾಗೂ ಗೌರವವಿದೆ ಎಂದು ಹೇಳುತ್ತೇನೆ. ಆದರೆ ದುಃಖಕರ ಸಂಗತಿಯೆಂದರೆ, ಕೆಲವು ಘಟನೆಗಳು ಪ್ರತಿಭಟನೆ ವಿರುದ್ಧ ಪ್ರಶ್ನೆಗಳನ್ನು ಹುಟ್ಟುಹಾಕಲು ಪ್ರೇರೇಪಿಸಿವೆ' ಎಂದು ಟಿಕ್ರಿ ಗಡಿಯಲ್ಲಿ ಲೈಂಗಿಕ ಕಿರುಕುಳದ ಘಟನೆ ಬಗ್ಗೆ ಉಲ್ಲೇಖಿಸಿ ಆರೋಪಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.