ADVERTISEMENT

ಪ್ರಧಾನಿಗಿಂತ ರೈತರೇ ಹೆಚ್ಚು ಪ್ರಜ್ಞಾವಂತರು: ರಾಹುಲ್ ಗಾಂಧಿ

ಏಜೆನ್ಸೀಸ್
Published 20 ಜನವರಿ 2021, 5:23 IST
Last Updated 20 ಜನವರಿ 2021, 5:23 IST
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ   

ನವದೆಹಲಿ: ರೈತರಿಗೆ ದಣಿವಾಗಿದ್ದು, ಮೂರ್ಖರನ್ನಾಗಿಸಬಹುದು ಎಂದು ಸರ್ಕಾರ ಭಾವಿಸುತ್ತದೆ. ಆದರೆ ಪ್ರಧಾನ ಮಂತ್ರಿಗಿಂತ ರೈತರು ಹೆಚ್ಚು ಪ್ರಜ್ಞಾವಂತರು ಎಂದು ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದರು.

ಕೇಂದ್ರ ಸರ್ಕಾರದ ಮೂರು ನೂತನ ಕೃಷಿ ಕಾಯ್ದೆಗಳನ್ನು ರದ್ದುಗೊಳಿಸುವಂತೆ ಆಗ್ರಹಿಸಿ ರೈತರು, ದೆಹಲಿ ಗಡಿ ಪ್ರದೇಶಗಳಲ್ಲಿ ನವೆಂಬರ್ 26ರಿಂದ ಪ್ರತಿಭಟನೆ ನಡೆಸುತ್ತಿದ್ದಾರೆ. ಅಲ್ಲದೆ ಪ್ರತಿಭಟನೆ 50 ದಿನ ದಾಟಿದರೂ ಹಲವು ಸುತ್ತಿನ ಮಾತುಕತೆ ನಡೆಸಿದರೂ ಬಿಕ್ಕಟ್ಟು ಇತ್ಯರ್ಥಗೊಂಡಿಲ್ಲ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ರಾಹುಲ್ ಗಾಂಧಿ, ದುರಹಂಕಾರದಿಂದಾಗಿ ರೈತರಿಗೆ ದಣಿವಾಗಿದ್ದು, ಮೂರ್ಖರನ್ನಾಗಿಸಬಹುದು ಎಂದು ಸರ್ಕಾರ ಭಾವಿಸಿದೆ. ಆದರೆ ಪ್ರಧಾನಿಗಿಂತಲೂ ರೈತರು ಹೆಚ್ಚು ಪ್ರಜ್ಞಾವಂತರಾಗಿದ್ದಾರೆ ಎಂದು ತಿಳಿಸಿದರು.

ADVERTISEMENT

ಕಳೆದ ಕೆಲವು ವರ್ಷಗಳಲ್ಲಿ, ಸರ್ಕಾರವು ಎಲ್ಲ ವ್ಯವಹಾರಗಳನ್ನು ಅವರಿಗೆ ಹತ್ತಿರವಿರುವ ಕೆಲವು ಉದ್ಯಮಿಗಳಿಗೆ ಹಸ್ತಾಂತರಿಸುತ್ತಿದೆ. ಈಗ ಕೃಷಿ ಕ್ಷೇತ್ರ ಅಜೆಂಡಾದಲ್ಲಿದೆ. ಈ ಕಾನೂನಿನ ಮೂಲಕ ಕೆಲವು ಜನರಿಗೆ ಹಸ್ತಾಂತರಿಸಲು ಸರ್ಕಾರ ಬಯಸುತ್ತಿದೆ ಎಂದು ಆರೋಪಿಸಿದರು.

ರೈತರ ಅಂದೋಲನವನ್ನು ಮಗದೊಮ್ಮೆ ಬೆಂಬಲಿಸಿದ ರಾಹುಲ್ ಗಾಂಧಿ, ಕೃಷಿ ಕಾಯ್ದೆಯನ್ನು ರದ್ದುಗೊಳಿಸಬೇಕು ಎಂದು ಪುನರುಚ್ಚರಿಸಿದರು.

ಕೃಷಿಯನ್ನು ಅವಲಂಬಿಸಿರುವ ಶೇಕಡಾ 60ರಷ್ಟು ಪಂಜಾಬ್, ಹರಿಯಾಣದ ರೈತರು ಜೀವನೋಪಾಯವನ್ನು ಉಳಿಸಲು ಹೆಣಗಾಡುತ್ತಿದ್ದಾರೆ. ಹೊಸ ಕೃಷಿ ಕಾಯ್ದೆಯು ರೈತರ ಮೇಲೆ ಮಾತ್ರವಲ್ಲದೆ ಮಧ್ಯಮ ವರ್ಗದ ಮೇಲಿನ ಆಕ್ರಮಣವೂ ಆಗಿದೆ ಎಂದು ಹೇಳಿದರು.

ಬಿಜೆಪಿ ಅಧ್ಯಕ್ಷ ಜೆ.ಪಿ. ನಡ್ಡಾ ಅವರಿಗೂ ಉತ್ತರಿಸಿರುವ ರಾಹುಲ್ ಗಾಂಧಿ, ತಾವು ಏನು ಮತ್ತು ಏನು ಮಾಡುತ್ತಾರೆ ಎಂಬುದು ರೈತರಿಗೆ ತಿಳಿದಿದೆ ಎಂದು ಹೇಳಿದರು.

ನಾನು ನರೇಂದ್ರ ಮೋದಿಗೆ ಹೆದರುವುದಿಲ್ಲ. ನಾನು ನಿಷ್ಕಂಳಕ ವ್ಯಕ್ತಿಯಾಗಿದ್ದು, ಬೇಕಿದ್ದರೆ ಶೂಟ್ ಮಾಡಬಹುದು. ಆದರೆ ಸ್ಪರ್ಶಿಸಲು ಸಾಧ್ಯವಿಲ್ಲ. ನಾನು ಒಬ್ಬಂಟಿಯಾಗಿ ನಿಲ್ಲುತ್ತೇನೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.