ADVERTISEMENT

ದೇಶದಾದ್ಯಂತ ಇಂದು 4 ಗಂಟೆಗಳ ಕಾಲ ರೈಲು ತಡೆ ನಡೆಸಲು ರೈತರ ತೀರ್ಮಾನ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 10 ಮಾರ್ಚ್ 2024, 4:15 IST
Last Updated 10 ಮಾರ್ಚ್ 2024, 4:15 IST
<div class="paragraphs"><p>ರೈತರ ಪ್ರತಿಭಟನೆ</p></div>

ರೈತರ ಪ್ರತಿಭಟನೆ

   

ನವದೆಹಲಿ: ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆಗೆ (ಎಂಎಸ್‌ಪಿ) ಕಾನೂನಿನ ಖಾತರಿ ಸೇರಿದಂತೆ ಹಲವು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿರುವ ರೈತರು ಇಂದು (ಭಾನುವಾರ) ದೇಶದಾದ್ಯಂತ ನಾಲ್ಕು ಗಂಟೆ ರೈಲು ತಡೆ ನಡೆಸಲು ನಿರ್ಧರಿಸಿದ್ದಾರೆ.

ರೈಲು ತಡೆ ಕುರಿತು ಪ್ರತಿಕ್ರಿಯಿಸಿರುವ ರೈತ ಮುಖಂಡ ಸರವಣ್ ಸಿಂಗ್ ಪಂಢೇರ್, ‘ಫೆಬ್ರುವರಿ 13ರಂದು ಪಂಜಾಬ್-ಹರಿಯಾಣ ಗಡಿಯಲ್ಲಿ ಪ್ರಾರಂಭವಾದ ‘ದೆಹಲಿ ಚಲೋ’ ಆಂದೋಲನದ ಭಾಗವಾಗಿ ನಾವು ಇಂದು ದೇಶದಾದ್ಯಂತ ‘ರೈಲು ತಡೆ’ಗೆ ಕರೆ ನೀಡಿದ್ದೇವೆ. ಹಾಗಾಗಿ ಎಲ್ಲಾ ರೈತರು, ಕಾರ್ಮಿಕರು ಸೇರಿದಂತೆ ಸಾರ್ವಜನಿಕರು ಇಂದು ನಡೆಯಲಿರುವ ಪ್ರತಿಭಟನೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ಮೂಲಕ ಬೆಂಬಲಿಸಬೇಕು’ ಎಂದು ಮನವಿ ಮಾಡಿದ್ದಾರೆ.

ADVERTISEMENT

‘ಇಂದು ಮಧ್ಯಾಹ್ನ 12ರಿಂದ 4 ಗಂಟೆಯವರೆಗೆ ರೈಲು ತಡೆ ನಡೆಸಲು ತೀರ್ಮಾನಿಸಲಾಗಿದೆ. ಈ ಹಿನ್ನೆಲೆಯಲ್ಲಿ ರೈಲುಗಳಲ್ಲಿ ಪ್ರಯಾಣಿಸುವವರು ಬೇರೆ ವ್ಯವಸ್ಥೆ ಮಾಡಿಕೊಳ್ಳುವಂತೆ ಸೂಚಿಸಲಾಗಿದೆ. ಪ್ರಯಾಣಿಕರಿಗೆ ಉಂಟಾಗಬಹುದಾದ ಅನಾನುಕೂಲತೆಗೆ ವಿಷಾದಿಸುತ್ತೇವೆ’ ಎಂದು ಹೇಳಿದ್ದಾರೆ.

ಸಂಯುಕ್ತ ಕಿಸಾನ್ ಮೋರ್ಚಾ, ಕಿಸಾನ್‌ ಮಜ್ದೂರ್ ಮೋರ್ಚಾ (ಕೆಎಂಎಂ) ಸಂಘಟನೆಗಳು ಪ್ರತಿಭಟನೆಯ ನೇತೃತ್ವ ವಹಿಸಿವೆ.

‘ದೆಹಲಿ ಚಲೋ’ ಮೆರವಣಿಗೆ ವೇಳೆ ಖಾನೌರಿ ಗಡಿಯಲ್ಲಿ ಫೆಬ್ರುವರಿ 21ರಂದು ನಡೆದಿದ್ದ ಘರ್ಷಣೆಯಲ್ಲಿ ಬಟಿಂಡಾದ ರೈತ ಶುಭಕರಣ್‌ (21) ಸಾವಿಗೀಡಾಗಿದ್ದು, 12 ಮಂದಿ ಭದ್ರತಾ ಸಿಬ್ಬಂದಿ ಗಾಯಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.